ಬೆಂಗಳೂರು: ಕೋವಿಡ್ ಸೋಂಕಿನ ಮಧ್ಯೆಯೂ ಈ ಬಾರಿಯ ಗಣೇಶ ಚತುರ್ಥಿ ನಗರದ ಪರಿಸರಕ್ಕೆ ಹಾಗೂ ಪಾಲಿಕೆ ಬೊಕ್ಕಸಕ್ಕೆ ಲಾಭದಾಯಕವಾಗಿ ಬದಲಾಗಿದೆ.
ಸೋಂಕು ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿಲ್ಲ. ಮನೆಯಲ್ಲೇ ಆಚರಣೆ ಮಾಡುವಂತೆ ಪಾಲಿಕೆ ಮನವಿ ಮಾಡಿದೆ. ಇದೇ ವೇಳೆ ನಿಯಮ ಮೀರಿ ಆಚರಣೆ ಮಾಡಿದರೆ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ, ನಗರದಲ್ಲಿ ಈ ಬಾರಿ ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಆಗುವುದಿಲ್ಲ. ಇದರಿಂದ ಪಾಲಿಕೆಗೆ 15ರಿಂದ 20 ಲಕ್ಷರೂ. ಉಳಿತಾಯವಾಗಲಿದೆ.
ಅಲ್ಲದೆ, ನಗರದ ಕಲ್ಯಾಣಿ, ಕೆರೆಗಳ ಮಾಲಿನ್ಯವೂ ತಪ್ಪಲಿದೆ. ಪ್ರತಿ ವರ್ಷವೂ ನಗರದಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿದ ನಂತರ ಮೂರ್ತಿಗಳ ವಿಸರ್ಜನೆಗೆ ಪಾಲಿಕೆ ಮೊಬೈಲ್ ಟ್ಯಾಂಕರ್ ಬಳಸುತ್ತಿತ್ತು. ಮೊಬೈಲ್ ಟ್ಯಾಂಕರ್ ಹಾಗೂ ತಾತ್ಕಾಲಿಕ ಕಲ್ಯಾಣಿಗಳ ಮೂಲಕ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುತ್ತಿತ್ತು. ಮೊಬೈಲ್ ಟ್ಯಾಂಕರ್ ಗಳಿಗೆ 5 ದಿನಗಳಿಗೆ ತಲಾ 25 ಸಾವಿರ ರೂ. ಪಾಲಿಕೆ ಪಾವತಿ ಮಾಡುತ್ತಿತ್ತು. ಪ್ರತಿ ವಾರ್ಡ್‌ಗೂ ಕನಿಷ್ಠ 3 ಮೊಬೆ„ಲ್ ಟ್ಯಾಂಕರ್ ಬಳಸಲಾಗುತ್ತಿತ್ತು. 198 ವಾರ್ಡ್‌ಗಳಿಗೆ ತಲಾ 3ರಂತೆ 5 ದಿನಕ್ಕೆ ಟ್ಯಾಂಕರ್ ಬಾಡಿಗೆಗೆ ಪಡೆದುಕೊಳ್ಳಲಾಗುತ್ತಿತ್ತು. ಈ ಬಾರಿ ಕೋವಿಡ್ ಸೋಂಕು ಭೀತಿ ಇರುವ ಹಿನ್ನೆಲೆಯಲ್ಲಿ ಮೂರ್ತಿಗಳ ವಿಸರ್ಜನೆಗೂ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಪಾಲಿಕೆ ಮಾಡಿಲ್ಲ. ಇದರ ಬದಲಾಗಿ ಸಾರ್ವಜನಿಕರು ಮನೆಗಳಲ್ಲೇ ಮೂರ್ತಿ ವಿಸರ್ಜನೆ ಮಾಡುವಂತೆ ಕೋರಲಾಗಿದೆ. ಇದರಿಂದ ಲಕ್ಷಾಂತರ ರೂ. ಉಳಿತಾಯವಾಗಿದ್ದು, ಕಸ ವಿಲೇವಾರಿ ಸಮಸ್ಯೆಯೂ ತುಸು ಮಟ್ಟಿಗೆ ತಗ್ಗಿದೆ.
ಪರಿಸರ ಮಾಲಿನ್ಯ ತಗ್ಗಲಿದೆ: ಸೋಂಕು ವ್ಯಾಪಕವಾದ ಬೆನ್ನಲ್ಲೇ ನಗರದ ಹಲವು ಕೆರೆ, ನದಿಗಳಲ್ಲಿ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿಯೂ ನಗರದಲ್ಲಿನ ಕೆರೆಗಳ ನೀರು ಕಲುಷಿತವಾಗುವ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇದೀಗಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡದೆ ಇರುವುದರಿಂದ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯೂ ತಪ್ಪಲಿದೆ. ಇದರಿಂದ ನಗರದ ಕಲ್ಯಾಣಿ, ಕೆರೆ ಹಾಗೂ ನದಿಗಳಲ್ಲಿ ಮಾಲಿನ್ಯ ಉಂಟಾಗುವುದೂ ತಪ್ಪಲಿದೆ. ಪಿಒಪಿ ಕರಗಲು 20 ವರ್ಷ ಸಮಯ ತೆಗೆದುಕೊಳ್ಳುತ್ತದೆ. ಈ ವರ್ಷ ನಗರದಲ್ಲಿ ಪಿಒಪಿ ಬಳಕೆಗೂ ಕಡಿವಾಣ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಗರದ ಕೆರೆಗಳೂ ಕಲುಷಿತವಾಗುವ ಸಾಧ್ಯತೆ ಕಡಿಮೆ. ಈಗಾಗಲೇ ಕೆರೆಗಳಲ್ಲಿ ಹೂಳೆತ್ತುವ ಕೆಲಸ ನಿಯಮಿತವಾಗಿ ನಡೆಯುತ್ತಿಲ್ಲ. ಒಂದು ಅಥವಾ 2 ದಶಕಗಳಿಗೆ ಒಮ್ಮೆ ಕೆರೆಗಳಲ್ಲಿನ ಹೂಳು ತೆಗೆಯಲಾಗುತ್ತಿದೆ.
ಕೆರೆಗಳಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವುದರಿಂದ ಕೆರೆಗಳ ನೀರಿನ ಸಾಮರ್ಥ್ಯ ಕುಸಿಯುತ್ತಿದೆ. ಅಲ್ಲದೆ, ಪಿಒಪಿ ಗಣೇಶ ಮೂರ್ತಿ ತಯಾರಿಕೆಗೆ ಬಳಸುವ ಸೀಸ ಬೇಗ ಕರಗಿದರೂ, ಆ ನೀರನ್ನು ಸೇವಿಸುವ ವ್ಯಕ್ತಿ ಬುದ್ಧಿಮಾಂದ್ಯತೆ ಸಮಸ್ಯೆಗೆ ಗುರಿಯಾಗುವ ಸಾಧ್ಯತೆಯೂ ಇದೆ. ಜೀವ ಸಂಕುಲ ಹಾಗೂ ಪರಿಸರದ ಮೇಲೂ ಇದು ಹಾನಿಯುಂಟು ಮಾಡುತ್ತದೆ ಎನ್ನುತ್ತಾರೆ ಪರಿಸರ ತಜ್ಞರು. ಕಳೆದ ವರ್ಷ 4 ಸಾವಿರ ಪಿಒಪಿ ಮೂರ್ತಿ ಬಳಕೆ: ನಗರದಲ್ಲಿ ಕಳೆದ ವರ್ಷ ಪಿಒಪಿ ಗಣೇಶ ಮೂರ್ತಿ ಬಳಸದಂತೆ ಸಾಕಷ್ಟು ಜಾಗೃತಿ ಮೂಡಿಸಲಾಗಿತ್ತು. ಆದರೂ ಕಳೆದ ವರ್ಷ 4 ಸಾವಿರ ಪಿಒಪಿ ಮೂರ್ತಿಗಳು ಬಳಕೆಯಾಗಿದ್ದವು. ಮಹದೇವಪುರ ಹಾಗೂ ರಾಜರಾಜೇಶ್ವರಿ ನಗರದ ವಲಯಗಳಲ್ಲಿ ಮಾತ್ರ ಒಂದೇ ಒಂದು ಪಿಒಪಿ ಗಣೇಶ ಮೂರ್ತಿ ಬಳಕೆಯಾಗಿರಲಿಲ್ಲ.
ತಗ್ಗಿದ ಆರ್ಥಿಕ ಸಂಕಷ್ಟ : ಕೋವಿಡ್ ದಿಂದ ಪರಿಸರಕ್ಕೆ ಲಾಭವಾಗಿದೆ. ಸೋಂಕಿನಿಂದ ಮದುವೆಗೆ ಕೇವಲ 50ಜನ ಎಂದು ನಿಗದಿ ಮಾಡಲಾಗಿದೆ. ಆದರೆ, ಇದರಿಂದ ಸಂಭ್ರಮ, ಸಂಪ್ರದಾಯಕ್ಕೆ ಧಕ್ಕೆಯಾಗಿಲ್ಲ. ಹೆಣ್ಣಿನ ಮನೆಯ ಆರ್ಥಿಕ ಸಂಕಷ್ಟವೂ ತುಸು ಮಟ್ಟಿಗೆ ತಗ್ಗಿದೆ, ಇದೇ ರೀತಿ ಮನೆಯಲ್ಲೇ ಗಣೇಶ ಚತುರ್ಥಿ ಸಂಭ್ರಮ. ಈ ಬಾರಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ಈ ಅವಕಾಶ ಬಳಸಿಕೊಂಡು ಮಣ್ಣಿನ ಗಣೇಶ ಮೂರ್ತಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಪರಿಸರ ತಜ್ಞ ಡಾ.ಕ್ಷಿತಿಜ್ ಅರಸ್ ತಿಳಿಸಿದ್ದಾರೆ.
ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿಲ್ಲ. ಸಾರ್ವಜನಿಕರುಮನೆಗಳಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಹಕಾರ ನೀಡಬೇಕು.
–ಎನ್.ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ
– ಹಿತೇಶ್ ವೈ.