Advertisement

ಫ‌ಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ತಲುಪಲಿ

08:44 PM Jan 13, 2020 | Team Udayavani |

ಹಾಸನ: ಎಲ್ಲಾ ಯೋಜನೆಗಳನ್ನು ಸಕಾಲದಲ್ಲಿ ಫ‌ಲಾನುಭವಿಗಳಿಗೆ ತಲುಪಿಸಲು ಇಲಾಖೆ ಅಧಿಕಾರಿಗಳು ಇನ್ನಷ್ಟು ಜನಪರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌. ಶ್ವೇತಾ ಸೂಚನೆ ನೀಡಿದರು.

Advertisement

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಂಗಾ ಕಲ್ಯಾಣ, ಗ್ರಾಮೀಣ ಕುಡಿಯುವ ನೀರು, ಕೊಳವೆ ಬಾವಿ, ನಿರಂತರ ಜ್ಯೋತಿ, ಬೆಳಕು ಯೊಜನೆಗಳನ್ನು ಫ‌ಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಒದಗಿಸಬೇಕು ಎಂದು ಸಂಬಂಧಿಸಿದ ನಿಗಮಗಳಿಗೆ ನಿರ್ದೇಶನ ನೀಡಿದರು.

ವಿದ್ಯುತ್‌ ಕಂಬ ಸ್ಥಳಾಂತರಿಸಿ: ಶಾಲಾ ಆವರಣದೊಳಗೆ, ಕೆರೆಯೊಳಗೆ, ರಸ್ತೆ ಮಧ್ಯೆದಲ್ಲಿ ಹಾಕಿರುವ ವಿದ್ಯುತ್‌ ಕಂಬ, ಟ್ರಾನ್ಸ್‌ ಫಾರ್ಮರ್‌ಗ‌ಳಿಂದ ಅನಾಹುತಗಳಾಗುವ ಸಂಭವವಿದೆ. ಅವುಗಳನ್ನು ಮಳೆಗಾಲದ ಆರಂಭಕ್ಕೂ ಮುನ್ನ ಸುರಕ್ಷಿತವಾಗಿ, ಪರ್ಯಾಯ ಜಾಗಕ್ಕೆ ಸ್ಥಳಾಂತರಿಸಬೇಕು ಎಂದು ಸೂಚಿಸಿದರು.

ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಮನಸ್ವಿನಿ, ಅಂಗಕಲವೇತನ, ಮೈತ್ರಿ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಮೃತ ರೈತ ಪತ್ನಿಯರಿಗೆ ದೊರೆಯುವ ವಿಧವಾ ವೇತನಗಳು ಎಲ್ಲಾ ಫ‌ಲಾನುಭಗಳಿಗೂ ಕಾಲಕಾಲಕ್ಕೆ ತಲಪಬೇಕು. ಆ ಕುರಿತು ಇರುವ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಬೇಕು, ಸಂಬಂಧಿತ ತಹಶಿಲ್ದಾರರು ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನಾಧಿಕಾರಿ ಈ ಬಗ್ಗೆ ಗಮನಹರಿಸಬೇಕು ಎಂದರು.

ಮಕ್ಕಳ ಆರೋಗ್ಯ ತಪಾಸಣೆ ನಡೆಸಿ: ಜನವರಿ ಅಂತ್ಯದೊಳಗೆ ಕಡ್ಡಾಯವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದಿರುವ ಔಷಧಿಗಳನ್ನು ಹೊರಗಿನಿಂದ ಆಸ್ಪತ್ರೆ ವತಿಯಿಂದಲೇ ಖರೀದಿಸಿ ರೋಗಿಗಳಿಗೆ ತರಿಸಬೇಕು. ಯಾವುದೇ ಕಾರಣಕ್ಕೂ ಖಾಸಗಿ ಮೆಡಿಕಲ್‌ಗ‌ಳಲ್ಲಿ ಖರೀದಿಸುವಂತೆ ರೋಗಿಗಳಿಗೆ ಔಷಧಿ ಚೀಟಿ ಬರೆಯಬಾರದೆಂದು ವೈದ್ಯರಿಗೆ ಸೂಚನೆ ನೀಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್‌ ಕುಮಾರ್‌ ಅವರಿಗೆ ಸೂಚಿಸಿದರು.

Advertisement

ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಮಗಾರಿಯ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸಬಾರದು. ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಕುಂಠಿತವಾಗದಂತೆ ಎಚ್ಚರ ವಹಿಸಬೇಕು ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಎಸ್‌.ಸಿ. ಮಹೇಶ್‌, ಎಂ.ಸಿ. ಚಂದ್ರಶೇಖರ್‌, ಯೋಜನಾಧಿಕಾರಿ ನಾಗರಾಜ್‌, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪಡಿತರ ಚೀಟಿದಾರರ ಅಲೆದಾಟ ತಪ್ಪಿಸಿ: ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಲೋಕೇಶ್‌ ಮಾತನಾಡಿ, ಪಡಿತರ ಚೀಟಿಗೆ ಬೆರಳಚ್ಚು ನೀಡುವ ಸಲುವಾಗಿ ನಿತ್ಯ ಜನ ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುತ್ತಿದ್ದಾರೆ, ಅವರ ನೋಂದಣಿ ಅಮಾನತಾಗುವ ಆಂತಕದಲ್ಲಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ನ್ಯಾಯಬೆಲೆ ಅಂಗಡಿ ಮತ್ತು ಗ್ರಾಮಪಂಚಾಯತಿ ಅಧಿಕಾರಿಗಳ ಮೂಲಕ ಜನರಿಗೆ ಮಾಹಿತಿ ನೀಡಿ ಕಾರ್ಡುದಾರರ ಆತಂಕ ದೂರ ಮಾಡಬೇಕು. ಪಡಿತರ ಚೀಟಿಗೆ ಬೆರಳಚ್ಚು ನೀಡುವ ಸಂಬಂಧ ನ್ಯಾಯಬೆಲೆಯವರು ಹಣ ಸಂಗ್ರಹಿಸದಂತೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.

ಎಸ್ಸೆಸ್ಸೆಲ್ಸಿ ಮೊದಲ ಸ್ಥಾನ ಉಳಿಸಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಬಿ.ಎ. ಪರಮೇಶ್‌ ಮಾತನಾಡಿ, ಈ ವರ್ಷವೂ ಎಸ್ಸೆಸ್ಸೆಲ್ಸಿ ಫ‌ಲಿತಾಂಶದಲ್ಲಿ ಜಿಲ್ಲೆಯು ಮೊದಲ ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಡಿಡಿಪಿಐ ಮತ್ತು ಎಲ್ಲಾ ತಾಲೂಕುಗಳ ಬಿಇಒಗಳು ಶ್ರಮಿಸಬೇಕು ಎಂದರು. ಶಾಲೆ ಬಿಟ್ಟ ಮಕ್ಕಳ ವರದಿಯನ್ನು ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಬೇಕು. ಜಿಲ್ಲೆಯಲ್ಲಿ 127 ಶಾಲೆ ಬಿಟ್ಟ ಮಕ್ಕಳಿದ್ದು, ಶಿಕ್ಷಣ ವಂಚಿತರಿಗೆ ಮರಳಿ ಶಾಲೆಗೆ ಕಳುಸುವ ಜವಾಬ್ದಾರಿ ಆಯಾ ಗ್ರಾಮ ಪಂಚಾಯತಿ ಪಿಡಿಒಗಳದ್ದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next