ಬಸವಕಲ್ಯಾಣ: ಬೇಂದ್ರೆಯವರ ಭಾವ ಜಗತ್ತಿನ ಸ್ಪರ್ಶ ವೈಚಾರಿಕವಾದುದು. ಪಶ್ಚಿಮದ ಸಪ್ಪೆ ವೈಚಾರಿಕತೆಯಲ್ಲ. ಅದು ಭಾರತೀಯ ವಿವೇಕ ಪ್ರಜ್ಞೆಯ ವೈಚಾರಿಕತೆಯ ಮುಖವಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಮಹಾಂತೇಶ ಪಾಟೀಲ ಹೇಳಿದರು.
ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ನಗರದ ನಿಲಾಂಬಿಕಾ ಕಾಲೇಜಿನಲ್ಲಿ ಏರ್ಪಡಿಸಿದ ಡಾ.ದ. ರಾ.ಬೇಂದ್ರೆಯವರ 125ನೇ ಜನ್ಮದಿನ ಮತ್ತು 53ನೇ ಉಪನ್ಯಾಸದಲ್ಲಿ ದ.ರಾ. ಬೇಂದ್ರೆ ಕವ್ಯಾನುಭೂತಿ ಕುರಿತು ಆನ್ ಲೈನ್ ಮುಖಾಂತರ ಮಾತನಾಡಿದ ಅವರು, ಬೇಂದ್ರೆಯವರ ಕಾವ್ಯದಲ್ಲಿ ಭಾರತೀಯ ದರ್ಶನಗಳ ಚಿಂತನೆ, ಉಪನಿಷತ್ತು. ಅರವಿಂದರ ಚಿಂತನೆಗಳ ಪ್ರಭಾವವಿದ್ದರು, ಸಾಮಾಜಿಕ ನೆಲೆಯಲ್ಲಿಯೇ ಅವರ ಕಾವ್ಯ ಅನಾವರಣವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಅಬ್ದುಲ್ ಮಾಜಿದ್ ಮಣಿಯಾರ್ ಮಾತನಾಡಿ, ಬೇಂದ್ರೆಯವರ ಜಾತ್ರೆ, ಸಾಯೋ ಆಟಯಂತಹ ನಾಟಕಗಳಲ್ಲಿನ ಪುಟ್ಟ ವಿಧವೆಯಂತ ಕವಿತೆಗಳಲ್ಲಿ ಮೌಡ್ಯ ನಿವಾರಣೆ, ಸಾಮಾಜಿಕ ಕಾಳಜಿ ಮತ್ತು ಸಾಮಾಜಿಕ ನ್ಯಾಯ ಧೋರಣೆಯುಳ್ಳ ಮೌಲ್ಯ ಅಡಗಿವೆ. ಸಾಮಾಜಿಕ ಚಿಂತನೆ ಬೇಂದ್ರೆಯವರ ಸಾಹಿತ್ಯದ ತಾತ್ವಿಕತೆಗಳಲ್ಲಿ ಒಂದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಪ್ರಾಥಮಿಕ ಶಾಲೆಯ ಶಿಕ್ಷಕ ಬೇಂದ್ರೆಯವರು ತಮ್ಮ ಸಾಹಿತ್ಯದ ಮೂಲಕ ಇಡಿ ಕನ್ನಡ ಸಾಂಸ್ಕೃತಿಕ ಜಗತ್ತೂಂದನ್ನು ಕಟ್ಟಿದ್ದರು. ಅವರ ಕಾವ್ಯವು ಇಂದು ಕರ್ನಾಟಕದ ಅನೇಕ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗವಾಗುತ್ತಿದೆ. ಬೇಂದ್ರೆಯವರು ಕನ್ನಡದ ಶ್ರೇಷ್ಠ ಪ್ರತಿಭೆ ಎಂದರು.
ಭೀಮಾಶಂಕರ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಸುರೇಶ ಅಕ್ಕಣ್ಣಾ, ಮಾಣಿಕಪ್ಪಾ ಸಂಗನಬಟೆ, ನಾಗೇಂದ್ರ ಬಿರಾದಾರ, ಮಹಾದೇವ ಪಾಟೀಲ ಇದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಿಸಿದರು.