Advertisement
ಬಾರೋ ಸಾಧನ ಕೇರಿಗೆ, ಮರಳಿ ನಿನ್ನೀ ಊರಿಗೇ… ಕೆಳಗಡೆ ರೂಮಿನಲ್ಲಿ ರಘು ದೀಕ್ಷಿತ್ ದ.ರಾ. ಬೇಂದ್ರೆಯವರ ಈ ಹಾಡನ್ನು ಹಾಡುತ್ತಿದ್ದರು. ತಾರಕಸ್ಥಾಯಿಯಿಂದ ಇಳಿದು ಮಂದ್ರ ಮುಟ್ಟೋ ಹೊತ್ತಿಗೆ, ಮೇಲಿನ ರೂಮಿನಲ್ಲಿದ್ದ ಅಮೆರಿಕದ ವಯೋಲಿನ್ ವಾದಕ ಕೆ.ಸಿ. ಡ್ರಿಸನ್ ಮೆಲ್ಲಗೆ ಇಳಿದುಬಂದರು. “ರಘು, ವಾಟ್ ಈಸ್ ದಿಸ್?’, ಕೇಳಿದರು ಬೆರಗಿನಿಂದ. ರಘು, “ಮತ್ತೆ ಬಾರೋ ಸಾಧನ ಕೇರಿಗೆ’ ಅಂತ ಹಾಡಿದರು.
Related Articles
Advertisement
ರಘು ದೀಕ್ಷಿತ್ ಜತೆ ಮಾತುಕತೆನೀವು ಬೇಂದ್ರೆ ಅವರ ಹಿಂದೆ ಬಿದ್ದಿದ್ದು ಏಕೆ?
ನಾನು ಧಾರವಾಡಕ್ಕೆ ಯಾವುದೋ ಕಾರ್ಯಕ್ರಮಕ್ಕಾಗಿ ಹೋಗಿದ್ದೆ. ಪ್ರೊ. ಕೆ.ಎಸ್. ಶರ್ಮ, ಬೇಂದ್ರೆ ಸಂಗೀತ ಅಂತಲೇ ಮಾಡುತ್ತಿದ್ದರು. ಅದನ್ನು ತೋರಿಸಲು ನನ್ನನ್ನು ಕರೆದುಕೊಂಡು ಹೋಗಿ, ಒಂದಷ್ಟು ಪುಸ್ತಕ ಕೊಟ್ಟರು. ಒಂದು ಸಲ ಹೀಗೆ, ತೆಗೆದು ನೋಡುತ್ತಿದ್ದೆ. “ಬಾರೋ ಸಾಧನ ಕೇರಿಗೆ’ ಪದ್ಯ ಬಹಳ ಇಷ್ಟವಾಯಿತು. ಸುಮ್ಮನೆ ಹಾಗೇ ಟ್ಯೂನ್ ಹಾಕಿದೆ. ನಾನು ನಮ್ಮೂರು ಮೈಸೂರಿಗೆ ಹೋಗಬೇಕಾದರೆ ಈ ಹಾಡು ಬಹಳ ಕಾಡೋದು. ಎಲ್ಲರೂ ತಮ್ಮ ತಮ್ಮ ಊರಿಗೆ ಹೋಗಬೇಕಾದರೆ ಇದು ಕಾಡುವ ಹಾಗೆ ಮಾಡಬೇಕಲ್ಲ ಅಂತ ಪೂರ್ತಿ ಟ್ಯೂನ್ ಹಾಕಿದೆ. ನಿಮಗೆ “ಶಿಶುನಾಳ ಶರೀಫರು’ ಸಿಕ್ಕಿದ್ದು ಹೇಗೆ?
ನಾನು ಗೆಳೆಯರ ಮನೆಗೆ ಊಟಕ್ಕೆ ಅಂತ ಹೋಗಿದ್ದೆ. ಗಡದ್ದಾಗಿ ತಿಂದಿದ್ದರಿಂದ ಕಣ್ಣು ಎಳೆಯಲು ಶುರುವಾಯಿತು. ಹಾಗಾಗಿ, ರೂಮ್‌ನಲ್ಲಿ ಮಲಗೋಣ ಅಂತ ಹೋದೆ. ಅಲ್ಲೊಂದು ಬುಕ್ ರ್ಯಾಕ್ ಇತ್ತು. ಅದರಲ್ಲಿ ಶಿಶುನಾಳ ಶರೀಫರ ಪದ್ಯಗಳು ಇದ್ದವು. ಹಾಗೇ ತೆಗೆದು, ಮಂಪರುಗಣ್ಣಿನಲ್ಲಿ “ಗುಡು ಗುಡಿಯಾ ಸೇದಿ ನೋಡು…’ ಪದ್ಯ ಓದುತ್ತಾ ಇದ್ದೆ. “ಮನಸೆಂಬ ಸಂಚಿಯ ಬಿಚ್ಚಿ, ದಿನ ದಿನವೂ ಮೋಹ ಅಂಬೋ ಭಂಗಿಯ ಕೊಚ್ಚಿ’ ಅಂತ ಲೈನ್ ಬಂತು. ನಮ್ಮನ್ನು ನಾವು ಶುದ್ಧೀಕರಿಸಿಕೊಳ್ಳೋದು, ನಮ್ಮನ್ನು ನಾವು ನೋಡಿಕೊಳ್ಳೋದು ಹೇಗೆ ಅನ್ನೋ ಅಧ್ಯಾತ್ಮವನ್ನು ಹೇಳುತ್ತಿದೆಯಲ್ಲಾ ಅಂತ ಇಷ್ಟವಾಯಿತು. ನಿದ್ದೆ ನಿಧಾನಕ್ಕೆ ಇಳಿಯಿತು. ಒಳಗಿಂದ ಟ್ಯೂನ್ ಎದ್ದು ಬಂತು. ನೀವು ಸಿ. ಅಶ್ವತ್ಥ್ ಅವರ ಮನೆಗೆ ಹೋಗಿದ್ದರಂತಲ್ಲ?
ಹೌದು. ಅಶ್ವತ್ಥ್ ಅವರು ಶರೀಫರ ಪದ್ಯಕ್ಕೆ ಅದ್ಭುತವಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಅದನ್ನು ಮೀರಿ ಸಂಗೀತ ಮಾಡೋದು ಬಹಳ ಕಷ್ಟ. ಹಾಗಾಗಿ, ಅವರು ರಾಗ ಸಂಯೋಜಿಸಿದ “ಕೋಡಗನ ಕೋಳಿ ನುಂಗಿತ್ತಾ…’, “ಸೋರುತಿಹುದು…’ ಹಾಡನ್ನು ಇಟ್ಟುಕೊಂಡೇ ನಮ್ಮ ಬ್ಯಾಂಡ್‌ನಲ್ಲಿ ಬಳಸಿಕೊಳ್ಳೋಣ ಅಂತ, ಅನುಮತಿ ಕೇಳ್ಳೋಕೆ ಅಶ್ವತ್ಥರ ಮನೆಗೆ ಹೋದೆ. ಅದಕ್ಕೆ ಅವರು, “ರೀ, ನಾವು ಬಹಳ ಕಷ್ಟಪಟ್ಟು ಸಂಗೀತ ಹಾಕಿ, ಅಷ್ಟೇ ಕಷ್ಟಪಟ್ಟು ಕಾಪಾಡಿಕೊಂಡು ಬಂದಿದ್ದೀವಿ. ನೀವು ಬ್ಯಾಂಡ್‌ನಲ್ಲಿ ಮನಸ್ಸಿಗೆ ಬಂದಂತೆ ಹಾಡಿದರೆ ಕಷ್ಟ ಆಗುತ್ತೆ. ನೀವೇ ಯಾವುದಾದರೂ ಬೇರೆ ಟ್ಯೂನ್ ಹಾಕ್ಕೊಳಿ’ ಅಂದಿದ್ದರು. ವಿದೇಶಗಳಲ್ಲಿ ಕಾರ್ಯಕ್ರಮ ಕೊಟ್ಟಾಗ ಕನ್ನಡ ಹಾಡು ಹಾಡ್ತೀರಿ. ಅವರಿಗೆ ನಮ್ಮ ಶರೀಫರ, ಬೇಂದ್ರೆಯವರ ಪದ್ಯ ಹೇಗೆ ಅರ್ಥವಾಗುತ್ತೆ?
ನಮ್ಮದು ಒಂದು ನಿಯಮ ಇದೆ. ಹಾಡುವ ಮೊದಲು, ಆ ಗೀತೆಯ ಹುಟ್ಟು, ಅದರ ಉದ್ದೇಶ, ಯಾರು, ಏಕೆ ಬರೆದರು, ಇದರ ಅರ್ಥ ಏನು- ಇವಿಷ್ಟನ್ನು ಕೇಳುಗರಿಗೆ ಹೇಳಿ, ಆಮೇಲೆ ಹಾಡ್ತೀವಿ. ಇಂಗ್ಲೀಷ್‌ನಲ್ಲಿ ಇಷ್ಟು ವಿವರಣೆ ಕೊಟ್ಟರೆ ಸಾಕು, ಅವರು ಸಂಗೀತದ ಮೂಲಕ ಭಾವಗಳನ್ನು ಹಿಡಿದು, ಅನುಭವಿಸಿ ಕೇಳಿಸಿಕೊಳ್ತಾರೆ. ಹೀಗೆ ನಮ್ಮ ಅನೇಕ ಕವಿಗಳ ಹಾಡು ವಿದೇಶಿಗರ ನಾಲಿಗೆಯ ಮೇಲಿದೆ. ಇವತ್ತು ಕನ್ನಡ ಬರದೇ ಇರುವ ಎಷ್ಟೋ ಟೆಕ್ಕಿಗಳಿಗೆ “ಗುಡು ಗುಡಿಯಾ…’ ನಿತ್ಯದ ಹಾಡಾಗಿದೆ. * ಕಟ್ಟೆ ಗುರುರಾಜ್