ವಾಡಿ: ಬದುಕಿನುದ್ದಕ್ಕೂ ಕಷ್ಟ-ನೋವುಗಳ ಜತೆಗೆ ಬೆಂದ ದ.ರಾ.ಬೇಂದ್ರೆಯವರು ಹೆತ್ತ ಮಕ್ಕಳ ಸಾವಿನ ಮೇಲೂ ಸಾಹಿತ್ಯ ಬರೆದ ಗಟ್ಟಿ ಜೀವ. ಮನುಷ್ಯ ಸಮಾಜದಲ್ಲಿ ಸಾಮರಸ್ಯ ಮೂಡಬೇಕು ಎಂಬ ಹಂಬಲ ಹೊತ್ತ ಕವಿ ಹೃದಯಿ ಎಂದು ಚಿತ್ತಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ
ಸಹಾಯಕ ಪ್ರಾಧ್ಯಾಪಕ ಡಾ|ಪಂಡಿತ್ ಬಿ.ಕೆ ಹೇಳಿದರು.
ಪಟ್ಟಣದ ವಿ.ಪಿ.ನಾಯಕ ಪದವಿ ಮಹಾ ವಿದ್ಯಾಲಯದಲ್ಲಿ ಕಸಾಪ ಚಿತ್ತಾಪುರ ತಾಲೂಕು ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ “ಜ್ಞಾನಪೀಠ ಗಾರುಡಿಗರು’ ಶಿರ್ಷಿಕೆಯಡಿಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ದ.ರಾ.ಬೇಂದ್ರೆ ಅವರ ಬದುಕು ಬರಹ ಕುರಿತು ವಿಚಾರ ಮಂಡಿಸಿ ಅವರು ಮಾತನಾಡಿದರು.
ನರಬಲಿ ಕೃತಿ ಪ್ರಕಟಿಸಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದ ಬೇಂದ್ರೆ, ಬಡತನವನ್ನೇ ಉಂಡು ಬೆಳೆದ ಕವಿ. ಮನೆತನದ ಮಾತು ಮರಾಠಿಯಾದರೂ ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ತಂದು ಕೊಟ್ಟ ಶ್ರೇಷ್ಠ ಕವಿ ಎಂದು ಸ್ಮರಿಸಿದರು.
ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರ ಕೊಲ್ಲೂರ ಮಾತನಾಡಿ, ಅಕ್ಟೋಬರ್ ಕೊನೆ ವಾರದಲ್ಲಿ ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸ ಲಾಗುತ್ತಿದೆ. ಸಮ್ಮೇಳನ ನಿಮಿತ್ತ ಕವನ ಸಂಕಲನ ಹೊರ ತರಲಾಗುತ್ತಿದ್ದು, ಚಿತ್ತಾಪುರ ತಾಲೂಕಿನ ಆಸಕ್ತ ಬರಹಗಾರರು ತಮ್ಮ ಸ್ವರಚಿತ ಕವಿತೆಗಳನ್ನು ಕಳಿಸಿಕೊಡಬೇಕು ಎಂದು ಹೇಳಿದರು.
ವಿ.ಪಿ.ನಾಯಕ ಕಾಲೇಜಿನ ಕನ್ನಡ ಉಪನ್ಯಾಸಕ ಧನೇಶ ಕುಲಕರ್ಣಿ ಮಾತನಾಡಿದರು. ಕಸಾಪ ವಾಡಿ ವಲಯ ಅಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಪ್ರೇಮಿ ಸದಾಶಿವ ಕಟ್ಟಿಮನಿ, ಪುರಸಭೆ ಮಾಜಿ ಸದಸ್ಯ ಸೂರ್ಯಕಾಂತ ರದ್ದೇವಾಡಿ ಅತಿಥಿಗಳಾಗಿದ್ದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಮುಡ ಬೂಳಕರ, ಚಂದ್ರು ಕರಣಿಕ, ಬಸವರಾಜ ಕೇಶ್ವಾರ, ಹುಸನಪ್ಪಾ ಮಗದಂಪೂರ, ಅಶೋಕ ರಾಠೊಡ, ರವಿ ಕೋಳಕೂರ, ಪೃಥ್ವಿರಾಜ ಸಾಗರ ಇನ್ನಿತರರು ಪಾಲ್ಗೊಂಡಿದ್ದರು. ಉಪನ್ಯಾಸಕ ಗೋಪಾಲ ರಾಠೊಡ ಸ್ವಾಗತಿಸಿದರು. ದಯಾನಂದ ಖಜೂರಿ ನಿರೂಪಿಸಿದರು. ವಿಕ್ರಮ ನಿಂಬರ್ಗಾ ವಂದಿಸಿದರು.