Advertisement

ಬೇಳೂರು: ಕೃಷಿಕ ನಾಪತ್ತೆ; ನೀರುಪಾಲು ಶಂಕೆ

09:07 AM Jul 03, 2018 | Team Udayavani |

ತೆಕ್ಕಟ್ಟೆ: ಬೇಳೂರು ಗ್ರಾ.ಪಂ. ವ್ಯಾಪ್ತಿಯ ದೇಲಟ್ಟು ತೆಂಕಬೆಟ್ಟು ಗ್ರಾಮದ ಕೃಷಿಕ ಸೋಮ ಪೂಜಾರಿ (70) ಸೋಮವಾರ ಬೆಳಗ್ಗೆ 10 ಗಂಟೆಗೆ ದನಕ್ಕೆ ಹುಲ್ಲು ತರಲು ಹೋದವರು ನಾಪತ್ತೆಯಾಗಿದ್ದಾರೆ. ಅವರು ಹೊಳೆಗೆ ಬಿದ್ದು ನೀರುಪಾಲಾಗಿರಬಹುದು ಎಂದು ಶಂಕಿಸಿ ಸ್ಥಳೀಯರು ಹಾಗೂ ಅಗ್ನಿಶಾಮಕದಳದ ನೇತೃತ್ವದಲ್ಲಿ ಹುಡುಕಾಟ ನಡೆಸಲಾಯಿತು. ಸೋಮ ಪೂಜಾರಿ ಅವರು ಹಲವು ವರ್ಷಗಳಿಂದ ನಿವೃತ್ತ ಮುಖ್ಯೋಪಾಧ್ಯಾಯ ಸಂಜೀವ ಶೆಟ್ಟಿ ಅವರ ಮನೆಯಲ್ಲೇ ನೆಲೆಸಿ ಕೃಷಿ ಕಾರ್ಯಗಳಲ್ಲಿ ತೊಡಗಿದ್ದರು. ಬೇಳೂರಿನ ಸಣ್ಣ ಹೊಳೆಯ ಸೇತುವೆಯ ಮಧ್ಯಭಾಗ ಮುರಿದಿದ್ದು, ಅದರಲ್ಲೇ ಸೋಮ ಪೂಜಾರಿ ಹುಲ್ಲಿಗೆ ಹೋಗಿದ್ದರು.

Advertisement

ತೇಲಿ ಬಂದ ಮುಟ್ಟಾಳೆ 
ಸಮೀಪದ ಗದ್ದೆಯಲ್ಲಿ ನಾಟಿ ಮಾಡುತ್ತಿದ್ದವರು ಹೊಳೆಯಲ್ಲಿ ತೇಲಿ ಬರುತ್ತಿದ್ದ ಮಂಡೆ ಹಾಳೆ (ಮುಟ್ಟಾಳೆ ) ಹಾಗೂ ಹಸಿ ಹುಲ್ಲಿನ ಕಟ್ಟನ್ನು ಕಂಡು ಗಮನಕ್ಕೆ ತಂದರು.

ವ್ಯಾಪಕ ಶೋಧ
ಪಾತಾಳ ಗರಡಿಯನ್ನು ಬಳಸಿ ಹೊಳೆಯನ್ನು ಶೋಧಿಸಿದರೂ ಪ್ರಯೋಜನವಾಗಲಿಲ್ಲ. ಅನಂತರ ಅಗ್ನಿಶಾಮಕ ದಳದ ಸಿಬಂದಿ ನಾಗರಾಜ್‌ ಹಾಗೂ ಸ್ಥಳೀಯ ಯುವಕರಾದ ರಕ್ಷಿತ್‌, ಸುಮಂತ್‌, ವಿಜಯ, ಮನೀಶ್‌ ಹೊಳೆಗೆ ಧುಮುಕಿ ಸುಮಾರು ಎರಡು ಕಿ.ಮೀ. ವರೆಗೆ ಶೋಧ ನಡೆಸಿದರು. ಹೊಳೆಯ ಆಳ ಹಾಗೂ ನೀರಿನ ಹರಿವಿನ ಪ್ರಮಾಣ ಅಧಿಕವಾಗಿರುವ ಕಾರಣ ಅನುಭವಿ ಈಜುಗಾರರು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಶೋಧಿಸಬೇಕಾದ ಪರಿಸ್ಥಿತಿ ಎದುರಾಗಿದೆ. ದೇಲಟ್ಟಿನ ಕಿಂಡಿ ಅಣೆಕಟ್ಟಿಗೆ ಅಡ್ಡಲಾಗಿ ಮರದ ಕೊಂಬೆ ಕಡಿದು, ಕಾರ್ಯಾಚರಣೆ ಮೊಟಕುಗೊಳಿಸಿದರು.

ಎಚ್ಚರಿಸಿದ್ದ  ವೃದ್ಧ
ಕೆಲವು ತಿಂಗಳ ಹಿಂದೆ ಉದಯವಾಣಿ ಪ್ರತಿನಿಧಿಯು ಸೇತುವೆಯ ಬಗ್ಗೆ ವರದಿಗೆ ತೆರಳಿದ್ದಾಗ ಇದೇ ಹಿರಿಯ ಕೃಷಿಕ ಸೋಮ ಪೂಜಾರಿ ಅವರು ಸೇತುವೆ ಶಿಥಿಲಗೊಂಡಿರುವ ಬಗ್ಗೆ “ಸೇತುವೆ ಒಂದ್‌ ಮುರ್ದ್ ಹೋಯಿ ಬಾರಿ ತೊಂದ್ರಿ ಆಯ್ತ್. ಜೀವ ಕೈಯಂಗ್‌ ಹಿಡ್ಕಂಡ್‌ ಹೊಳಿ ದಾಟು ಪರಿಸ್ಥಿತಿ ಬಂದಿತ್‌!’ ಎಂದಿದ್ದರು.

ತಹಶೀಲ್ದಾರ್‌ ಭೇಟಿ
ಕುಂದಾಪುರದ ಪ್ರಭಾರ ತಹ ಶೀಲ್ದಾರ್‌ ಕಿರಣ್‌ ಗೌರಯ್ಯ, ಕೋಟ ಪೊಲೀಸ್‌ ಸಹಾಯಕ ನಿರೀಕ್ಷಕ ಆನಂದ ವೆಂಕಟ್‌, ಕಂದಾಯ ನಿರೀಕ್ಷಕ ನರಸಿಂಹ ಕಾಮತ್‌, ಗ್ರಾಮ ಲೆಕ್ಕಿಗ ಪ್ರಕಾಶ್‌, ಬಸ್ರೂರು ಗ್ರಾ.ಪಂ. ಸದಸ್ಯ ಬೇಳೂರು ದಿನಕರ ಶೆಟ್ಟಿ, ಸುರೇಶ್‌ ಹೆಮ್ಮಾಡಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next