Advertisement

ಬೆಳ್ತಂಗಡಿ: ಹೊಸ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ 

04:00 PM Oct 15, 2018 | Team Udayavani |

ಬೆಳ್ತಂಗಡಿ : ತಾಲೂಕಿನ ಕಳಿಯ ಗ್ರಾ.ಪಂ. ವ್ಯಾಪ್ತಿಯ ಗೋವಿಂದೂರಿನಿಂದ ನ್ಯಾಯತರ್ಪು ಗ್ರಾಮವನ್ನು ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಬೃಹತ್‌ ತೊರೆಯೊಂದು ಹರಿಯುತ್ತಿದ್ದು, ಅದಕ್ಕೆ ಹಾಲಿ ಇರುವ ಕಿರು ಸೇತುವೆಯು ಶಿಥಿಲಾವಸ್ಥೆಯಲ್ಲಿದೆ. ಹೀಗಾಗಿ ಅಗಲವಾದ ಸೇತುವೆಯೊಂದನ್ನು ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಗೋವಿಂದೂರಿನಿಂದ ಹೀರ್ಯ, ನಿಡ್ಡಾಜೆ, ಜೋಡುತ್ತಾರು, ಮಚ್ಚಿನ, ಪಾಲಡ್ಕ, ಬಳ್ಳಮಂಜ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ಕಿರಿದಾಗಿದ್ದು, ಸಣ್ಣಪುಟ್ಟ ವಾಹನಗಳಿಗೆ ಮಾತ್ರ ತೆರಳುವುದಕ್ಕೆ ಅವಕಾಶವಿದೆ. ಹೀಗಾಗಿ ಬೃಹತ್‌ ವಾಹನಗಳು ಸುತ್ತು ಬಳಸಿ ಸಾಗಬೇಕಿದೆ. ಸೇತುವೆಯು ಕಿರಿದಾಗಿರುವ ಜತೆಗೆ ಪ್ರಸ್ತುತ ಶಿಥಿಲಾವಸ್ಥೆಗೂ ತಲುಪಿದೆ.

ಮಳೆಗಾಲದಲ್ಲಿ ಆತಂಕ
ಮಳೆಗಾಲದಲ್ಲಿ ತೊರೆ ತುಂಬಿ ಹರಿಯುವುದರಿಂದ ಅಪಾಯದ ಸ್ಥಿತಿಯಲ್ಲಿರುತ್ತದೆ. ಸೇತುವೆ ಶಿಥಿಲಾವಸ್ಥೆಯಲ್ಲಿರುವುದರಿಂದ ಹೆತ್ತವರು ಮಕ್ಕಳನ್ನು ಸೇತುವೆಯ ಮೂಲಕ ಶಾಲೆಗೆ ಕಳುಹಿಸಲು ಆತಂಕ ಪಡಬೇಕಾದ ಸ್ಥಿತಿ ಇದೆ. ಹೀಗಾಗಿ ಈ ಭಾಗದಲ್ಲಿ ಹೊಸ ಸೇತುವೆ ನಿರ್ಮಿಸಿ, ಸ್ಥಳೀಯ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮನವಿಗೆ ಸ್ಪಂದನೆಯಿಲ್ಲ
ಸೇತುವೆ ದುರಸ್ತಿಗಾಗಿ ಸ್ಥಳೀಯರು ಕಳೆದ ಹಲವು ವರ್ಷಗಳಿಂದ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಲೇ ಬಂದಿದ್ದು, ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸೇತುವೆ ಕಿರಿದಾಗಿರುವ ಪರಿಣಾಮ ಗೋವಿಂದೂರು ಹಿ.ಪ್ರಾ. ಶಾಲೆ, ಅಂಗನವಾಡಿ ಕೇಂದ್ರಕ್ಕೆ ಬಿಸಿಯೂಟ ಸಾಮಗ್ರಿಗಳನ್ನು ಹೊತ್ತು ತರುವ ವಾಹನಗಳು ಅಕ್ಕಿ, ಗ್ಯಾಸ್‌ ಸಿಲಿಂಡರ್‌ಗಳನ್ನು ಅರ್ಧದಲ್ಲಿಯೇ ಇಳಿಸಿ ಹೋಗಬೇಕಾದ ಸ್ಥಿತಿ ಇದೆ. ಬಳಿಕ ಅದನ್ನು ಜೀಪಿನ ಮೂಲಕ ಶಾಲೆಗೆ ಮುಟ್ಟಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next