Advertisement

Belthangady: ರಾಜ್ಯಾದ್ಯಂತ ಶುದ್ಧಜಲ ಅಭಿಯಾನ; ಧ. ಗ್ರಾಮಾಭಿವೃದ್ಧಿ ಯೋಜನೆಯಿಂದ ಜಲಜಾಗೃತಿ

09:34 AM Jan 02, 2025 | Team Udayavani |

ಬೆಳ್ತಂಗಡಿ: ರಾಜ್ಯಾದ್ಯಂತ ಜನವರಿಯಲ್ಲಿ ಶುದ್ಧಜಲ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ 1.50 ಲಕ್ಷ ಜನರಲ್ಲಿ ಶುದ್ಧಜಲ ಬಳಕೆ ಕುರಿತು ಜಾಗೃತಿ ಮೂಡಿಸುವುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್‌ ಕುಮಾರ್‌ ಎಸ್‌.ಎಸ್‌. ತಿಳಿಸಿದರು.

Advertisement

ಧರ್ಮಸ್ಥಳದಲ್ಲಿ ಬುಧವಾರ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಶುದ್ಧಜಲ ಅಭಿಯಾನದ ಕರಪತ್ರವನ್ನು ಬಿಡುಗಡೆಗೊಳಿಸಿದ ಕಾರ್ಯಕ್ರಮದಲ್ಲಿ ಅವರು ತಿಳಿಸಿದರು.

ನಗರ ಹಾಗೂ ಗ್ರಾಮೀಣ ಪ್ರದೇ ಶದಲ್ಲಿ ಜನಸಂಖ್ಯೆ ಹೆಚ್ಚಳ ಹಾಗೂ ಪರಿಸರ ನಾಶದ ಪರಿಣಾಮದಿಂದ ನೀರಿನ ಅಭಾವ ತಲೆದೋರಿದೆ. ಹಾಗಾಗಿ ಶುದ್ಧ ಕುಡಿಯುವ ನೀರಿನ ಪೂರೈಕೆ ಕಷ್ಟವಾಗಿದೆ. ರಾಜ್ಯದ ಹಲವು ಹಳ್ಳಿಗಳಲ್ಲಿ ಇಂದೂ ಜನರು ಅಶುದ್ಧ ನೀರನ್ನು ಕುಡಿ ಯುತ್ತಿರುವುದು ಕಾಣುತ್ತೇವೆ ಎಂದ ಅವರು, ರಾಜ್ಯದ ಹೆಚ್ಚಿನ ತಾಲೂಕುಗಳಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಸಮಸ್ಯೆ ಹೆಚ್ಚಾಗಿರುವುದರ ಬಗ್ಗೆ ತಿಳಿದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ರಾಜ್ಯದಲ್ಲಿ ಪ್ರಥಮವಾಗಿ 2009ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಯಲ್ಲಿ ಮೊದಲ ಸಮುದಾಯ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದ್ದರು ಎಂದರು.

ರಾಜ್ಯಾದ್ಯಂತ 481 ಘಟಕ ಸ್ಥಾಪನೆ ಶುದ್ಧಗಂಗಾ ಹೆಸರಿನಲ್ಲಿ ಇದುವರೆಗೆ ರಾಜ್ಯಾದ್ಯಂತ 481 ಶುದ್ಧಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ನಿತ್ಯವೂ ಸುಮಾರು 5.55 ಲಕ್ಷ ಮಂದಿ ಜನರು ಶುದ್ಧನೀರನ್ನು ಬಳಸುತ್ತಿದ್ದಾರೆ. ಇದಕ್ಕಾಗಿ ಪ್ರತಿದಿನ 22 ಲಕ್ಷ ಲೀಟರ್‌ ಶುದ್ಧ ಕುಡಿಯುವ ನೀರನ್ನು ಈ ಘಟಕ ಗಳ ಮೂಲಕ ನೀಡುತ್ತಿದ್ದು, ಸ್ಥಳೀಯ ಸಂಸ್ಥೆಗಳೂ ಕೈ ಜೋಡಿಸಿವೆ ಎಂದರು.

ಶುದ್ಧಜಲ ಬಳಕೆಯ ಕುರಿತಂತೆ ಜನ ಸಾಮಾನ್ಯರಿಗೆ ಅರಿವಿನ ಕೊರತೆಯಿದೆ. ಇದಕ್ಕಾಗಿ ಜನವರಿ ಮಾಸಾಂತ್ಯ ಶುದ್ಧಜಲ ಜಾಗೃತಿ ಅಭಿಯಾನವನ್ನು ಶುದ್ಧಗಂಗಾ ಘಟಕಗಳಿರುವ ಪ್ರದೇಶದ ಜನರಿಗೆ ಆಯೋಜಿಸಲಾಗುತ್ತಿದೆ. ಶಾಲಾ ಮಕ್ಕಳಿಗೆ ಮಾಹಿತಿ, ಜಾಥಾ ಕಾರ್ಯಕ್ರಮ, ಕರಪತ್ರ ಹಂಚಿಕೆ, ಬೀದಿನಾಟಕ, ಸಾರ್ವಜನಿಕ ಮಾಹಿತಿ ಕಾರ್ಯಕ್ರಮ, ಒಕ್ಕೂಟ ಸಭೆಗಳು ಹಾಗೂ ಜ್ಞಾನವಿಕಾಸ ಕೇಂದ್ರಗಳಲ್ಲಿ ಮಾಹಿತಿ ಹಾಗೂ ಮನೆಮನೆಗೆ ತೆರಳಿ ನೋಂದಣಿ ಮೊದಲಾದ 500ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.

Advertisement

ಕರಪತ್ರ ಬಿಡುಗಡೆ ಈ ಸಂದರ್ಭದಲ್ಲಿ ಡಾ| ಡಿ ವೀರೇಂದ್ರ ಹೆಗ್ಗಡೆ ಮತ್ತು ಡಾ| ಹೇಮಾವತಿ ವೀ. ಹೆಗ್ಗಡೆ ಅವರು ಶುದ್ಧಜಲ ಅಭಿಯಾನದ ಕರಪತ್ರವನ್ನು ಬಿಡುಗಡೆ ಮಾಡಿದರು. ಅಧಿಕಾರಿಗಳಾದ ಅನಿಲ್‌ ಕುಮಾರ್‌ ಎಸ್‌.ಎಸ್‌, ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ, ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಶುದ್ಧ ಗಂಗಾ/ಕೆರೆ ಅಭಿವೃದ್ಧಿ ವಿಭಾಗದ ನಿರ್ದೇಶಕ ಶಿವಾನಂದ ಆಚಾರ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next