Advertisement

ಸರಕಾರಿ ಆಸತ್ರೆ ಯಲ್ಲೇ ಮರಣೋತ್ತರ ಪರೀಕ್ಷೆ 

09:49 AM Feb 22, 2019 | Team Udayavani |

ಬೆಳ್ತಂಗಡಿ : ವಿಶೇಷ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಅಸಹಜ ಸಾವಿನ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಯಲ್ಲೇ ನಡೆಸಬೇಕು, ಜತೆಗೆ ಸರಕಾರಿ ಆ್ಯಂಬುಲೆನ್ಸ್‌ ಹೊರತುಪಡಿಸಿ ಖಾಸಗಿ ಆ್ಯಂಬುಲೆನ್ಸ್‌ಗಳನ್ನು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಿಲ್ಲುವುದಕ್ಕೆ ಬಿಡಬಾರದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಎಚ್ಚರಿಕೆ ನೀಡಿದರು.

Advertisement

ಗುರುವಾರ ಬೆಳ್ತಂಗಡಿ ತಾ.ಪಂ. ಸಭಾಂಗಣದಲ್ಲಿ ತಾ| ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನ ಸಭೆ ನಡೆಸಿದ ಅವರು, ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡುತ್ತಿಲ್ಲ, ಮಂಗಳೂರಿಗೆ ತೆಗೆದು
ಕೊಂಡು ಹೋಗುವಂತೆ ಹೇಳುತ್ತಿದ್ದಾರೆ ಎಂಬ ದೂರುಗಳಿವೆ ಎಂದು ಸಚಿವರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ವಿದ್ಯಾವತಿ ಬಳಿ ಪ್ರಶ್ನಿಸಿದರು.

ಬೆಳ್ತಂಗಡಿ ಆಸ್ಪತ್ರೆಯಲ್ಲಿ ಫೋರೆನ್ಸಿಕ್‌ ಪರಿಣತರು ಇಲ್ಲದ ಕಾರಣದಿಂದ ಕಾನೂನು ತೊಡಕು ಬಾರದಂತೆ ಕೆಲವು ಸಂಶಯಾಸ್ಪದ ಪ್ರಕರಣಗಳನ್ನು ಮಂಗಳೂರಿಗೆ ಕಳುಹಿಸುತ್ತೇವೆ ಎಂದು ವೈದ್ಯಾಧಿಕಾರಿ ಉತ್ತರ ನೀಡಿದರು.

ಈ ವೇಳೆ ಜಿ.ಪಂ. ಸದಸ್ಯ ಶಾಹುಲ್‌ ಹಮೀದ್‌ ಮಾತನಾಡಿ, ಆಸ್ಪತ್ರೆಯವರು ಈ ರೀತಿ
ಬಹುತೇಕ ಪ್ರಕರಣಗಳನ್ನುಮಂಗಳೂರಿಗೆ ಕಳುಹಿಸುತ್ತಾರೆ. ಬಳಿಕ ಜನರು ಗೊಂದಲದಿಂದ ನಮಗೆ ಫೋನ್‌ ಮಾಡುತ್ತಾರೆ ಎಂದರು.

ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸಿ, ಬಹುತೇಕ ಮೃತದೇಹಗಳನ್ನು ಬೆಳ್ತಂಗಡಿಯಲ್ಲೇ ಪರೀಕ್ಷೆ ನಡೆಸುವಂತೆ ಸಚಿವರು ಎಚ್ಚರಿಸಿದರು.

Advertisement

ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಆವರಣದಲ್ಲಿ ಖಾಸಗಿ ಆ್ಯಂಬುಲೆನ್ಸ್‌ ನಿಲ್ಲುತ್ತದೆ ಎಂಬ ದೂರು ಬಂದಿದೆ ಎಂದು ಸಚಿವರು ತಿಳಿಸಿದಾಗ, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಮಾರ್ಚ್‌ನಲ್ಲಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ ನೀಡಲಾಗುವುದು ಎಂದು ಡಿಎಚ್‌ಒ ತಿಳಿಸಿದ್ದಾರೆ. ಹೀಗಾಗಿ ಖಾಸಗಿ ಆ್ಯಂಬುಲೆನ್ಸ್‌ ನಿಲ್ಲುವುದಕ್ಕೆ ಬಿಡುವುದಿಲ್ಲ ಎಂದು ವೈದ್ಯಾಧಿಕಾರಿ ಉತ್ತರ ನೀಡಿದರು.

ಮಂಗನ ಕಾಯಿಲೆಯ ಕುರಿತು ಟಿಎಚ್‌ಒ ಡಾ|‌ಲಾಮಧು ಅವರ ಬಳಿ ಮಾಹಿತಿ ಕೇಳಿ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.

 ಏಜೆನ್ಸಿಗಳಿಗೆ ನೋಟಿಸ್‌ ನೀಡಿ
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡುಗೆ ಅನಿಲ ಸೌಲಭ್ಯ ವಿತರಣೆ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ, ಪಕ್ಷದ ಚಿಹ್ನೆ ಹಾಗೂ ಕಾರ್ಯಕರ್ತರನ್ನು ಒಟ್ಟು ಸೇರಿಸಿ ವಿತರಿಸಲಾಗುತ್ತಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಜಿ.ಪಂ. ಸದಸ್ಯ ಧರಣೇಂದ್ರಕುಮಾರ್‌ ಸಹಿತ ಇತರ ಜಿ.ಪಂ., ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು ಆರೋಪಿಸಿದರು.

ಈ ಕುರಿತು ಆರೋಗ್ಯ ಇಲಾಖೆಯವರಲ್ಲಿ ಕೇಳಿದಾಗ ಪ್ರೊಟೋಕಾಲ್‌ ಇಲ್ಲ. ಜತೆಗೆ ಅದರ ಕುರಿತು ಮಾಹಿತಿ ಇಲ್ಲ ಎಂದರು. ಇಂತಹ ಗೊಂದಲಕ್ಕೆ ಗ್ಯಾಸ್‌ ಏಜೆನ್ಸಿಯವರೇ ಕಾರಣ. ಹೀಗಾಗಿ ಇದು ಪುನರಾವರ್ತನೆಯಾಗದಂತೆ
ಗ್ಯಾಸ್‌ ಏಜೆನ್ಸಿಗಳಿಗೆ ನೋಟಿಸ್‌ ನೀಡಲು ಸಹಾಯಕ ಕಮಿಷನರ್‌ ಡಾ| ಎಚ್‌. ಕೆ. ಕೃಷ್ಣಮೂರ್ತಿ ಅವರಿಗೆ ಸಚಿವರು ಸೂಚಿಸಿದರು.

ಕುದುರೆಮುಖ ವನ್ಯಜೀವಿ ಅರಣ್ಯ ವಿಭಾಗಕ್ಕೆ ಸಂಬಂಧಿಸಿ ವಿದ್ಯುತ್‌ ಲೈನ್‌ ಎಳೆಯುವುದಕ್ಕೆ ಕಾರ್ಕಳದಲ್ಲಿ ಯಾವುದೇ ತೊಂದರೆ ಎದುರಾಗಿಲ್ಲ, ಆದರೆ ಬೆಳ್ತಂಗಡಿಯಲ್ಲಿ 2016ಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ವಿದ್ಯುತ್‌ ಸಂಪರ್ಕ ಸಾಧ್ಯವಾಗಿಲ್ಲ ಎಂದು ಜಿ.ಪಂ. ಸದಸ್ಯ ಶೇಖರ್‌ ಕುಕ್ಕೇಡಿ ಅವರು ಸಭೆಯ ಗಮನಕ್ಕೆ ತಂದರು. ಈ ಕುರಿತು ಗಮನಹರಿಸುವಂತೆ ಸಚಿವರು ಅಧಿಕಾರಿಗೆ ಸೂಚಿಸಿದರು.

ಜತೆಗೆ 3 ವರ್ಷಗಳ ಹಿಂದೆ ತಾ|ಗೆ ಮಂಜೂರಾದ ಅಂಬೇಡ್ಕರ್‌ ಭವನಗಳಿಗೆ ನಿವೇಶನ ಅಂತಿಮಗೊಳ್ಳದ ಕುರಿತು ಶೇಖರ್‌ ದೂರಿದರು. ತೆಕ್ಕಾರು ಗ್ರಾ.ಪಂ.ನ ನಿವೇಶನ ಅಂತಿಮ ಗೊಳಿಸುವುದಕ್ಕೂ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಶಾಹುಲ್‌ ಹಮೀದ್‌ ತಿಳಿಸಿ ದರು. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸಚಿವರು ಇಒ ಕುಸುಮಾಧರ್‌ ಅವರಿಗೆ ಎಚ್ಚರಿಸಿದರು.

ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್‌, ಜಿ.ಪಂ. ಸದಸ್ಯೆ ನಮಿತಾ, ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಮೊದಲಾದವರಿದ್ದರು.

ಅತಿಕ್ರಮಣ ತೆರವುಗೊಳಿಸಿ
ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ನಿವೇಶನ ಹಾಗೂ ವಸತಿಗಾಗಿ 300 ಅರ್ಜಿಗಳು ಬಂದಿದ್ದು, ಪ್ರಸ್ತುತ 98 ಮಂದಿಗೆ ಮಾತ್ರ ನಿವೇಶನ ಹಂಚಿಕೆಗೆ ಅವಕಾಶ ಇದೆ ಎಂದು ಮುಖ್ಯಾಧಿಕಾರಿ ಡಿ. ಸುಧಾಕರ್‌ ಮಾಹಿತಿ ನೀಡಿದಾಗ, ನಗರದಲ್ಲಿ ಅತಿಕ್ರಮಣ ಆಗಿರುವ ಜಾಗವನ್ನು ತೆರವುಗೊಳಿಸಿ, ಇಲ್ಲದೇ ಇದ್ದರೆ ಪ.ಪಂ.ಗೆ ಸಮೀಪದಲ್ಲಿರುವ ಗ್ರಾಮದ ನಿವೇಶನ ಬಳಸಿಕೊಳ್ಳುವಂತೆ ಸಚಿವರು ಸೂಚಿಸಿದರು. ಜತೆಗೆ ಪಂ.ನ ಆದಾಯ, ತೆರಿಗೆ ಸಂಗ್ರಹ, ನೀರು ಪೂರೈಕೆ, ಅನುದಾನ ಬಳಕೆಯ ಕುರಿತು ಸಚಿವರು ಮಾಹಿತಿ ಪಡೆದರು.

ಫ‌ುಟ್ಬಾಲ್‌ ಆಡಬೇಡಿ
ಕುಡಿಯುವ ನೀರಿನ ಕೊಳವೆಬಾವಿ ಕೊರೆಯುವುದು, ವಿದ್ಯುತ್‌ ಸಂಪರ್ಕ ಕುರಿತು ಸಚಿವರು ಮಾಹಿತಿ ಕೇಳಿದಾಗ, ಸಂಬಂಧಪಟ್ಟ ಇಬ್ಬರು ಎಂಜಿನಿಯರ್‌ ಗಳು ನಾನಲ್ಲ ಅವರು ಎಂದು ಪರಸ್ಪರ ಆರೋಪ ಮಾಡಿ ಕೊಂಡರು. ಈ ವೇಳೆ ಗರಂ ಆದ ಸಚಿವರು, ಜನರ ಸಮಸ್ಯೆ ಕುರಿತು ಫ‌ುಟ್ಬಾಲ್‌ ಆಡಬೇಡಿ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next