Advertisement

Belthangady ಮುಂಡಾಜೆ: ಕಳವಾಗಿದ್ದ ಚಿನ್ನಾಭರಣ ಮನೆಯಂಗಳದಲ್ಲೇ ಪತ್ತೆ!

11:04 PM Sep 15, 2023 | Team Udayavani |

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಡಂಬಳ್ಳಿ ವಾಳ್ಯದ ಮನೆಯೊಂದರ ನೆಲಮಾಳಿಗೆಯಲ್ಲಿ ಇರಿಸಲಾಗಿದ್ದ ಚಿನ್ನಾಭರಣ ಕಳವಾಗಿರುವ ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡಿದ ಎರಡೇ ದಿನಗಳಲ್ಲಿ ದೂರುದಾರರ ಮನೆಯಂಗಳದಲ್ಲೇ ಕಳವಾದ ಎಲ್ಲ ಚಿನ್ನಾಭರಣ ಪತ್ತೆಯಾದ ಘಟನೆ ನಡೆದಿದೆ.

Advertisement

ಪ್ರಮೋದ ವಿ. ಭಿಡೆ ಅವರು ತಮ್ಮ ಮನೆಯ ಸಾರಣೆ ಹಾಗೂ ಪೈಂಟಿಂಗ್‌ ಕೆಲಸವನ್ನು ಕಾರ್ಮಿಕರ ಮೂಲಕ ಜು. 5ರಂದು ಆರಂಭಿಸಿದ್ದು, ಇದಕ್ಕೆ ಮೊದಲು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಅವರ ಪತ್ನಿ ಮನೆಯ ನೆಲಮಾಳಿಗೆಯಲ್ಲಿ ಕೋಣೆಗೆ ಬೀಗ ಹಾಕದೆ ಇರಿಸಿದ್ದರು. 10ರಿಂದ 13 ಮಂದಿ ಕಾರ್ಮಿಕರು ಜು. 19ರಂದು ಕಾಮಗಾರಿ ಮುಗಿಸಿ ತೆರಳಿದ್ದರು.

ಸೆ. 12ರಂದು ಕಾರ್ಯಕ್ರಮಕ್ಕೆ ತೆರಳುವ ವೇಳೆ ಆಭರಣ ಧರಿಸಲು ಆಭರಣ ಇರಿಸಲಾಗಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಸುಮಾರು 5 ಲಕ್ಷ ರೂ. ಮೌಲ್ಯದ 122 ಗ್ರಾಂ. ಚಿನ್ನಾಭರಣ ಕಳವಾಗಿರುವ ಘಟನೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಪ್ರಕರಣದ ಕುರಿತು ಕೆಲವರನ್ನು ಠಾಣೆಗೆ ಕರೆಯಿಸಿ ತನಿಖೆ ನಡೆಸಿದ್ದರು.

ತನಿಖೆ ಚುರುಕುಗೊಳ್ಳುತ್ತಿದ್ದಂತೆ ಕಳವಾದ ಚಿನ್ನಾಭರಣ ಶುಕ್ರವಾರ ಬೆಳಗ್ಗೆ ಪ್ರಮೋದ್‌ ವಿ. ಭಿಡೆಯವರ ಮನೆಯಂಗಳದಲ್ಲೇ ಪತ್ತೆಯಾಗಿದೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್‌ ಕದ್ರಿ ಹಾಗೂ ತಂಡದವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವೃತ್ತಿಪರ ಕಳ್ಳರಲ್ಲ!
ಪ್ರಕರಣ ದಾಖಲಿಸಿಕೊಂಡಿದ್ದ ಧರ್ಮಸ್ಥಳ ಠಾಣೆಯ ಪೊಲೀಸರು ಹಲವು ಮಂದಿಯ ವಿಚಾರಣೆ ನಡೆಸಿದ್ದು, ಕೆಲವು ಕಾರ್ಮಿಕರನ್ನು ಕರೆಯಿಸಿ ವಿಚಾರಣೆಯನ್ನು ನಡೆಸಿದ್ದರು. ಇನ್ನು ಕೆಲವರು ಊರಿನಲ್ಲಿ ಇಲ್ಲದೇ ಇದ್ದು, ಅವರನ್ನು ಕೂಡ ಕರೆಯಿಸಿ ವಿಚಾರಣೆ ನಡೆಸಲು ಸಿದ್ಧತೆಯನ್ನೂ ನಡೆಸಿಕೊಂಡಿದ್ದರು. ತನಿಖೆ ಚುರುಕುಗೊಳ್ಳುತ್ತಿದ್ದಂತೆ ಕಳವಾದ ಚಿನ್ನಾಭರಣ ಮನೆಯಂಗಳದಲ್ಲಿ ಕಂಡುಬಂದಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಕಳವು ಮಾಡಿದವರು ವೃತ್ತಿಪರ ಕಳ್ಳರಲ್ಲ ಎಂದು ಹೇಳಬಹುದು. ಕಣ್ಣಿಗೆ ಸಿಕ್ಕಿದ್ದನ್ನು ಯಥಾವತ್‌ ದೋಚಿರುವ ಸಾಧ್ಯತೆಯೇ ಹೆಚ್ಚಿರುವಂತೆ ಕಂಡುಬರುತ್ತಿದೆ. ಚಿನ್ನ ಕದ್ದೊಯ್ದ ಕಳ್ಳರು ಪೊಲೀಸರ ವಿಚಾರಣೆಗೆ ಹೆದರಿ ಚಿನ್ನಾಭರಣವನ್ನು ಮರಳಿಸಿರಬಹುದು ಎಂದು ಶಂಕಿಸಲಾಗಿದೆ. ಮನೆಮಂದಿಗೆ ಚಿನ್ನ ಸಿಕ್ಕಿತಲ್ಲ ಎನ್ನುವ ಆಶಾಭಾವ. ಆದರೆ ಕೃತ್ಯ ನಡೆಸಿದವರಾರು ಎನ್ನುವ ತನಿಖೆ ಮುಂದುವರಿಸಬೇಕೆ? ಬೇಡವೇ? ಎನ್ನುವ ಪ್ರಶ್ನೆ ಪೊಲೀಸರಿಗೆ ಮೂಡಿದ್ದು, ಸದ್ಯ ವಿಚಾರಣೆಯನ್ನು ನಿಲ್ಲಿಸಿದ್ದಾರೆ. ಮನೆಮಂದಿ ವಿಚಾರಣೆ ಮುಂದುವರಿಸಲು ಆಗ್ರಹಿಸಿದರೆ ವಿಚಾರಣೆ ಮುಂದುವರಿಯುವ ಸಾಧ್ಯತೆಯೂ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next