Advertisement
ಬೆಳ್ತಂಗಡಿ: ತಾಲೂಕಿನ ಬಸ್ಸುನಿಲ್ದಾಣದ ಜಂಕ್ಷನ್ ಪ್ರದೇಶ ಇಡೀ ತಾಲೂಕಿನ ಜನರಿಗೆ ಸಂಪರ್ಕ ಕಲ್ಪಿಸುವ ಕೇಂದ್ರಬಿಂದು. ಹತ್ತಿರಕ್ಕೆ ಹೋಗುವ ಎಲ್ಲ ಊರಿನ ಬಸ್ಸುಗಳೂ ಈ ಜಂಕ್ಷನ್‌ನ್ನು ಹಾದು ಹೋಗಲೇಬೇಕು. ಹಾಗಾಗಿ ದಿನವಿಡೀ (ರಾತ್ರಿ ಹೊರತು ಪಡಿಸಿ) ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಸುತ್ತಲಿನ ಆರ್ಥಿಕ ಚಟುವಟಿಕೆಗೂ ಬಹಳ ಪ್ರಮುಖವಾಗಿರುವ ಈ ಜಂಕ್ಷನ್ ನ ಅಭಿವೃದ್ಧಿ ಕುರಿತು ನಾಲ್ಕು ಮಾತು ಹೇಳಲೇಬೇಕು. ಇಲ್ಲಿರುವ ಸೌಲಭ್ಯಗಳನ್ನು ಪಟ್ಟಿ ಮಾಡಿ ಹೇಳುವುದಕ್ಕಿಂತ ಇರುವಷ್ಟೂ ಸೌಲಭ್ಯಗಳನ್ನು ಒತ್ತಟ್ಟಿನಲ್ಲಿ ಚೆಂದಗೊಳಿಸಲು ಸಾಧ್ಯವೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಬಸ್ಸು ನಿಲ್ದಾಣ ಜಂಕ್ಷನ್ ಆದ ಕಾರಣ ಈಗಾಗಲೇ ಹೇಳಿದಂತೆ ಪ್ರಯಾಣಿಕರ ಸಂಖ್ಯೆ ಜಾಸ್ತಿ. ಆದರೆ ಈ ಪ್ರದೇಶ ಕಿರಿದಾಗಿರುವುದರಿಂದ ಸಾಕಷ್ಟು ಬಾರಿ ಅವ್ಯವಸ್ಥೆ ಎನಿಸುವುದುಂಟು. ಜನರಿಗೆ, ವಾಹನ ಸವಾರರಿಗೆ ಗೊಂದಲ ಉಂಟಾಗುವುದೂ ಉಂಟು. ಇಲ್ಲಿ ಪ್ರಯಾಣಿಕರಿಗೆ ನಿಲ್ಲುವ ವ್ಯವಸ್ಥೆಯಾಗಲಿ, ಬಸ್ಸುಗಳಿಗೆ ನಿಲ್ಲುವ ವ್ಯವಸ್ಥೆಯಾಗಲಿ ಸಮರ್ಪಕವಾಗಿರದಿದ್ದುದು ಈ ಗೊಂದಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
Related Articles
Advertisement
ಬಿ.ಸಿ.ರೋಡ್, ಮಂಗಳೂರು, ಉಡುಪಿ, ಕುಂದಾಪುರ, ಪುತ್ತೂರು, ಸುಳ್ಯ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಮೊದಲಾದ ಪ್ರದೇಶಕ್ಕೆ ತೆರಳುವ ಬಸ್ಸುಗಳೂ ಈ ನಿಲ್ದಾಣಕ್ಕೆ ಆಗಮಿಸುತ್ತವೆ. ಬಿ.ಸಿ.ರೋಡ್-ಕಡೂರು ರಾಷ್ಟ್ರೀಯ ಹೆದ್ದಾರಿ ಇದೇ ಭಾಗದಲ್ಲಿ ಹಾದುಹೋಗುತ್ತಿದ್ದು, ಅಲ್ಲೇ ಪಕ್ಕದಲ್ಲಿ ಆಟೋ ರಿಕ್ಷಾ ನಿಲ್ದಾಣ, ಟೆಂಪೋಗಳು, ಜೀಪ್‌ಗ್ಳು, ಇತರ ವಾಹನಗಳೂ ನಿಲ್ಲುತ್ತಿವೆ. ಇದರಿಂದ ಸ್ಥಳಾವಕಾಶದ ಕೊರತೆ ಇದೆ. ಪಾರ್ಕಿಂಗ್ ಸಮಸ್ಯೆಯೂ ಕಾಡುತ್ತಿದ್ದು, ಬೆಳಗ್ಗೆ ಹಾಗೂ ಸಂಜೆ ಟ್ರಾಫಿಕ್ ಜಾಮ್ ಸಮಸ್ಯೆಯೂ ಇದೆ. ಇದಲ್ಲದೇ ಸರಕಾರಿ, ಖಾಸಗಿ ಬಸ್ಸುಗಳು ಒಂದೇ ಕಡೆ ನಿಲ್ಲುವಷ್ಟು ಜಾಗವಿಲ್ಲ, ಆದರೂ ನಿಲ್ಲಿಸಲಾಗುತ್ತಿರುವುದೂ ತೊಂದರೆಯಾಗುತ್ತಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ನೂರಾರು ವಿದ್ಯಾರ್ಥಿಗಳ ಓಡಾಟಬೆಳ್ತಂಗಡಿ ಬಸ್ ನಿಲ್ದಾಣವನ್ನೇ ಬಳಸಿ ನೂರಾರು ಮಂದಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳುತ್ತಾರೆ. ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥಿಗಳು ಉಜಿರೆ, ಪುತ್ತೂರು, ಮಂಗಳೂರು, ಮಡಂತ್ಯಾರು ಇತರ ಪ್ರದೇಶಗಳಿಗೆ ತೆರಳಲು ಇದೇ ಜಂಕ್ಷನ್ ನಲ್ಲಿ ಬಸ್ಸು ಬದಲಿಸಬೇಕು. ಪ್ರಯಾಣಿಕರ ಜತೆ ವಿದ್ಯಾರ್ಥಿಗಳೂ ಸೇರಿದರೆ ದಿನಕ್ಕೆ ಸಾವಿರಾರು ಮಂದಿ ಸಂಚರಿಸುತ್ತಿರುತ್ತಾರೆ. ಹಾಗಾಗಿ ಕಿಷ್ಕಿಂಧೆಯ ಸ್ವರೂಪಕ್ಕೆ ಹೊಸ ರೂಪ ನೀಡಬೇಕಿದೆ. ಬಸ್ ನಿಲ್ದಾಣದಲ್ಲಿ ಬದಲಾವಣೆ
ಬಸ್ಸು ನಿಲ್ದಾಣದಲ್ಲಿ ಖಾಸಗಿ ಹಾಗೂ ಸರಕಾರಿ ಬಸ್ಸಿಗೆ ಪ್ರತ್ಯೇಕ ನಿಲ್ದಾಣದ ವ್ಯವಸ್ಥೆಯಾಗಬೇಕು. ಜತೆಗೆ ಬಸ್ಸನ್ನು ಬಿಟ್ಟು ಇತರ ವಾಹನ ಪ್ರವೇಶಕ್ಕೆ ಅವಕಾಶ ನೀಡಬಾರದು. ರಿಕ್ಷಾಗಳನ್ನು ಉದ್ದಕ್ಕೆ ನಿಲ್ಲಿಸುವ ಬದಲು ಕ್ಯು ಸಿಸ್ಟಂ ಜಾರಿಗೆ ತರಬೇಕು. ಇದರ ಲಘು ವಾಹನಕ್ಕೆ ಕೊಂಚ ದೂರಕ್ಕೆ ವ್ಯವಸ್ಥೆ ಮಾಡಿದರೆ ಉತ್ತಮ.
– ಓಡಿಯಪ್ಪ ಗೌಡ, ಸಬ್ ಇನ್ಸ್‌ಪೆಕ್ಟರ್, ಸಂಚಾರಿ ಪೊಲೀಸ್ ಠಾಣೆ, ಬೆಳ್ತಂಗಡಿ — ಕಿರಣ್ ಸರಪಾಡಿ