Advertisement
ಕುವೆಟ್ಟು ಗ್ರಾಮದ ಶಿವಾಜಿನಗರ ಮನೆ ನಿವಾಸಿ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಪ್ರವೀಣ್ ಪಿಂಟೋ (37) ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿದ್ದ ವ್ಯಕ್ತಿ.
ಗುರುವಾಯನಕೆರೆಯ ದಡದಲ್ಲಿ ಪ್ರವೀಣ್ ಅವರ ಚಪ್ಪಲಿ ಹಾಗೂ ದಾಖಲೆಗಳು ಸಿಕ್ಕಿದ ಕಾರಣ ಆತ್ಮಹತ್ಯೆ ವದಂತಿಯಿಂದ ಬೆಳ್ತಂಗಡಿ ಪೊಲೀಸರು ಅಗ್ನಿ ಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣ ಘಟಕದ ಸ್ವಯಂಸೇವಕರು, ಸ್ಥಳೀಯರು ಸೇರಿ ಬೆಳಗ್ಗಿನಿಂದಲೇ ಹುಡುಕಾಟ ಆರಂಭಿಸಿದ್ದರು. ಆ ಬಳಿಕ ಮುಳುಗು ತಜ್ಞರು ಆಗಮಿಸಿ ಮಧ್ಯಾಹ್ನ 2 ಗಂಟೆಗೆ ಮೃತದೇಹ ಮೇಲಕ್ಕೆ ಎತ್ತಲಾಯಿತು.
Related Articles
Advertisement
ಮೃತ ಪ್ರವೀಣ್ 7 ತಿಂಗಳ ಗರ್ಭಿಣಿ ಪತ್ನಿ ಮತ್ತು ಆರು ವರ್ಷದ ಪುತ್ರನನ್ನು ಅಗಲಿದ್ದಾರೆ.ಪೊಲೀಸರ ಮಾಹಿತಿಯಂತೆ ಪ್ರವೀಣ್ ಸಾಯುವುದಕ್ಕೆ ಮೊದಲು ತನ್ನ ಆಪ್ತರೋರ್ವರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ ಎನ್ನಲಾಗಿದೆ. ಸೂಕ್ತ ತನಿಖೆಯಿಂದಷ್ಟೇ ಸಾವಿಗೆ ಕಾರಣಗಳೇನು ಎಂಬುದು ತಿಳಿಯಬಹುದು.
ಪತ್ನಿಯಿಂದ ದೂರುಮೆಹಂದಿ ಮನೆಯಲ್ಲಿ ಪ್ರವೀಣ್ ಹಾಗೂ ಪ್ರದೀಪ್ ಶೆಟ್ಟಿ ಎಂಬವರಿಗೆ ಮಾತಿನ ಚಕಮಕಿಯಾಗಿ ಹೊಡೆದಾಟ ನಡೆದಿರುವ ವಿಚಾರ ತಿಳಿದುಬಂದಿದೆ. ಮಧ್ಯ ರಾತ್ರಿ 3 ಗಂಟೆ ಸುಮಾರಿಗೆ ಕಾರೊಂದು ಮೃತ ಪ್ರವೀಣ್ ಮನೆಯ ಬಳಿ ಬಂದಿದೆ. ಪ್ರವೀಣ್ ಧರಿಸಿದ್ದ ಕೆಂಪು ಟೀ ಶರ್ಟ್ ಕಾಣೆಯಾಗಿರುವುದರಿಂದ ಪತಿ ಸಾವಿನ ಬಗ್ಗೆ ಸಂಶಯವಿದೆ. ಹೀಗಾಗಿ ಸೂಕ್ತ ತನಿಖೆ ನಡೆಸಬೇಕು ಎಂದು ಪತ್ನಿ ರೇಷ್ಮಾ ಜೂಲಿಯೆಟ್ ಲೋಬೋ ಅವರು ಬೆಳ್ತಂಗಡಿ ಠಾಣೆಗೆ ದೂರು ದಾಖಲಿಸಿರುವಂತೆ ಪ್ರಕರಣ ದಾಖಲಿಸಲಾಗಿದೆ. ಶೌರ್ಯ ವಿಪತ್ತು ನಿರ್ವಹಣೆ ತಂಡದಿಂದ ಕಾರ್ಯಾಚರಣೆ
ಆಟೋ ಚಾಲಕನ ಮೃತದೇಹ ಪತ್ತೆಕಾರ್ಯದಲ್ಲಿ ಅಗ್ನಿಶಾಮಕ ದಳ ನಿರಂತರ ಪ್ರಯತ್ನದ ನಡುವೆಯೂ ವಿಫಲವಾದ ಹಿನ್ನೆಲೆ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆ ತಂಡದ ಸ್ವಯಂಸೇವಕರು ನಿರಂತರ ಹುಡುಕಾಟ ನಡೆಸಿದರು. ಬಳಿಕ ಮುಳುಗು ತಜ್ಞ ಮಂಗಳೂರಿನ ಈಶ್ವರ ಮಲ್ಪೆಯವರನ್ನು ಕರೆಸಿ ಆಕ್ಸಿಜನ್ ಸಹಾಯದಿಂದ ಶೋಧ ನಡೆಸಿದರು. ಇವರಿಗೆ ಶೌರ್ಯ ತಂಡದ ಹರೀಶ್ ಕೂಡಿಗೆ, ಸಂತೋಷ್, ಮಾಸ್ಟರ್ ಸ್ನೇಕ್ ಪ್ರಕಾಶ್ ಸಹಕರಿಸಿದರು. ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾçಸ್, ವಿಪತ್ತು ನಿರ್ವಹಣೆ ತಂಡದ ಯೋಜನಾಧಿಕಾರಿ ಜೈವಂತ್ ಪಟಗಾರ್ ಇದ್ದರು. ತಡೆಬೇಲಿ ಇಲ್ಲದ ಕೆರೆ
ಗುರುವಾಯನಕೆರೆಯಿಂದ ನಾರಾವಿ, ಮೂಡುಬಿದಿರೆಗೆ ಸಾಗುವ ಹೆದ್ದಾರಿ ಬದಿ ಕೆರೆಯಿದ್ದು ಅಪಘಾತವಾಗಿ ಕೆರೆಗೆ ಬೀಳದಂತೆ ಸೂಕ್ತ ತಡೆಬೇಲಿ ರಕ್ಷಣೆ ಇಲ್ಲಿಲ್ಲ. ಈ ಹಿಂದೆ ಮೂಡಿಗೆರೆ ಮೂಲದ ಚಾಲಕನೋರ್ವ ಇದೇ ಕೆರೆಗೆ ಬಿದ್ದು ಮೃತಪಟ್ಟಿದ್ದ. ಕಳೆದ ಕೆಲವು ತಿಂಗಳ ಹಿಂದೆ ಈ ಕೆರೆಗೆ ವಿಷಯುಕ್ತ ನೀರು ಸೇರಿ ಜಲಚರದ ಮಾರಣಹೋಮ ಸಂಭವಿಸಿತ್ತು. ಆದರೂ ಸ್ಥಳೀಯಾಡಳಿತ ಸಹಿತ ತಾಲೂಕು ಆಡಳಿತ ಕೆರೆ ಸುತ್ತ ಅಥವಾ ಅಪಾಯದ ಸ್ಥಳಗಳಲ್ಲಿ ತಡೆಬೇಲಿ ರಚಿಸಿಲ್ಲ. ಇನ್ನಾದರೂ ಸೂಕ್ತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಮತ್ತಷ್ಟು ಅಪಾಯಕ್ಕೆ ಕಾರಣವಾಗಲಿದೆ.