Advertisement

Belthangady: ಅಸಹಾಯಕ ಕುಟುಂಬಕ್ಕೆ ಚಾಲಕನ ಆಸರೆ

12:40 PM Oct 08, 2024 | Team Udayavani |

ಬೆಳ್ತಂಗಡಿ: ಆಕಸ್ಮಿಕ ಘಟನೆಯಿಂದ ಸೊಂಟದ ಕೆಳಭಾಗ ಸ್ವಾಧೀನ ಕಳೆದುಕೊಂಡಿರುವ ಮಗ, ಅವರ ಜತೆಗಿರುವುದು ಶತಾಯುಷಿ ತಾಯಿ. ಕಳೆದ ಮೂವತ್ತೈದು ವರ್ಷಗಳಿಂದ ಇಂಥ ಅಸಹಾಯಕ ಸ್ಥಿತಿಯಲ್ಲಿರುವ ಕುಟುಂಬ ವಾಸವಾಗಿರುವುದು ಮುರುಕಲು ಗುಡಿಸಲಿನಲ್ಲಿ. ಈ ಪರಿಸ್ಥಿತಿಯನ್ನು ಅರಿತ ಆ್ಯಂಬುಲೆನ್ಸ್‌ ಚಾಲಕರೊಬ್ಬರು ಈ ಕುಟುಂಬಕ್ಕೆ ಹೊಸ ಮನೆ ನಿರ್ಮಿಸಿ ಕೊಡಲು ಮುಂದೆ ಬಂದಿದ್ದು, ಆಗಲೇ ಹಳೆ ಮನೆ ಕೆಡವಿ ಅಡಿಪಾಯಕ್ಕೆ ಸಿದ್ಧತೆ ನಡೆದಿದೆ.

Advertisement

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಬೈಲಡ್ಕದ ನಿವಾಸಿ ಈರಮ್ಮ (105) ಹಾಗೂ 15ನೇ ವಯಸ್ಸಿನಲ್ಲಿ ಹಲಸಿನ ಕಾಯಿ ಕೊಯ್ಯುವ ವೇಳೆ ಬೆನ್ನಿಗೆ ಹಲಸು ಬಿದ್ದು ಸೊಂಟದ ಕೆಳ ಭಾಗ ಸ್ವಾಧೀನ ಕಳೆದಕೊಂಡು 35 ವರ್ಷಗಳಿಂದ ವೀಲ್‌ಚೇರ್‌ನಲ್ಲೆ ಬದುಕು ಸವೆಸುತ್ತಿರುವ ಪುತ್ರ ಸುಂದರ (49) ಅವರ ನೋವಿನ ವ್ಯಥೆಯಿದು.

ಅಣ್ಣನ ಆಸರೆಯಲ್ಲಿ
ಸಂಕಷ್ಟದಲ್ಲಿರುವ ಸುಂದರ ಮತ್ತು ತಾಯಿಯನ್ನು ಅವರ ಸಹೋದರ ಶೀನಪ್ಪ ಸಲಹುತ್ತಿದ್ದಾರೆ. ಅವರದೂ ಬಡ ಕುಟುಂಬ. ಕಳೆದ ಕೆಲವು ವರ್ಷಗಳಿಂದ ಮನೆಯೂ ಬೀಳುವ ಸ್ಥಿತಿಯಲ್ಲಿದೆ. ಇಂಥ ಪರಿಸ್ಥಿತಿಯನ್ನು ತಿಳಿದು ನೆರವಾಗಲು ಮುಂದೆ ಬಂದವರು ಮೂಡುಬಿದಿರೆಯ ಗಂಟಲ್ಕಟ್ಟೆ ನಿವಾಸಿ Óಸಮಾಜ ಸೇವಕ ವೃತ್ತಿಯಲ್ಲಿ ಆ್ಯಂಬುಲೆನ್ಸ್‌ ಚಾಲಕರಾಗಿರುವ ಅನಿಲ್‌ ಮೊಂಡೋನ್ಸಾ ಅವರು. ಇದೀಗ ಅವರು ಈ ಕುಟುಂಬಕ್ಕೆ ಒಂದು ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ.

ಸಂಪೂರ್ಣ ಜರ್ಜರಿತವಾಗಿದ್ದ ಹಳೆ ಮನೆ.

ನಾಲ್ಕು ತಿಂಗಳಲ್ಲಿ ಇದು 4ನೇ ಮನೆ
ಅನಿಲ್‌ ಮೆಂಡೋನ್ಸಾ ಅವರು ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗ ಬಿಟ್ಟು ಈಗ ಗಂಟಲ್ಕಟ್ಟೆಯ 5 ಸೆಂಟ್ಸ್‌ ಮನೆಯಲ್ಲಿ ಪತ್ನಿ, ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದಾರೆ. ವೃತ್ತಿಯಲ್ಲಿ ಆ್ಯಂಬುಲೆನ್ಸ್‌ ಚಾಲಕ-ಮಾಲಕರಾಗಿರುವ ಅವರು ಅಸಹಾಯಕರ ಕಷ್ಟಕ್ಕೆ ಮರುಗಿ ಸಹಾಯಕ್ಕೆ ನಿಲ್ಲುತ್ತಾರೆ. ಅವರು ಕಳೆದ ನಾಲ್ಕು ತಿಂಗಳಲ್ಲಿ ಸಂಕಷ್ಟದಲ್ಲಿರುವ ಮೂರು ಕುಟುಂಬಗಳಿಗೆ ದಾನಿಗಳ ನೆರವಿನಿಂದ ಮನೆ ಕಟ್ಟಿಕೊಟ್ಟಿದ್ದು, ಈಗ ಉದ್ದೇಶಿಸಿರುವುದು ನಾಲ್ಕನೇ ಮನೆ.

Advertisement

ಸ್ಥಳೀಯರು ಸಹಕಾರ ಅಗತ್ಯವಾಗಿದೆ
ನಾನು ಬೆವರು ಸುರಿಸಿ ದುಡಿದ ಮೊತ್ತ ಮತ್ತು ಗೆಳೆಯರ ನೆರವಿನಿಂದ ಈ ಕೆಲಸ ಮಾಡುತ್ತಿದ್ದೇನೆ. ಗಂಟಲ್ಕಟ್ಟೆಯಿಂದ ಶಿರ್ಲಾಲಿಗೆ ಬಂದು ಹೋಗುವುದು ದೂರವಾಗಿರುವುದರಿಂದ ಮನೆ ನಿರ್ಮಾಣಕ್ಕೆ ಸ್ಥಳೀಯರು ಸಹಕಾರ ಅಗತ್ಯವಾಗಿದೆ.
-ಅನಿಲ್‌ ಮೆಂಡೋನ್ಸಾ ಸಾಮಾಜಿಕ ಕಾರ್ಯಕರ್ತ

ಸ್ನೇಹಿತರ ಸಹಕಾರದಲ್ಲಿ ನಿರ್ಮಾಣ
ಅನಿಲ್‌ ಅವರು ಈಗಾಗಲೇ ಮೂಡುಬಿದಿರೆಯ ಕರಿಂಜೆ, ಅಲಂಗಾರು, ನೆತ್ತೋಡಿಯಲ್ಲಿ ಸ್ನೇಹಿತರ ಜತೆ ಸೇರಿ ಮನೆ ನಿರ್ಮಿಸಿದ್ದರು. ತಾವೇ ಕಲ್ಲುಗಳನ್ನೂ ಹೊತ್ತಿದ್ದರು. ಕೇರ್‌ ಚಾರಿಟೆಬಲ್‌ ಟ್ರಸ್ಟ್‌ ರಚಿಸಿಕೊಂಡಿರುವ ಅವರು ಎಲ್ಲರೂ ಕೈಜೋಡಿಸಿದರೆ ಅಶಕ್ತರಿಗೆ ಸೂರು ಒದಗಿಸಬಹುದು ಎನ್ನುತ್ತಾರೆ.

ಈಗ ಅಣ್ಣನ ಮನೆಯಲ್ಲಿ ವಾಸ
ಹಳೆ ಮನೆ ಸ್ಥಿತಿ ಚಿಂತಾಜನಕ ವಾಗಿದ್ದರಿಂದ ಅನಿಲ್‌ ಅದನ್ನು ಕೆಡವಿ ತತ್‌ಕ್ಷಣವೇ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗ ಈರಮ್ಮ ಮತ್ತು ಸುಂದರ ಅವರು ಸೋದರ ಶೀನಪ್ಪ ಅವರ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಒಂದು ತಿಂಗಳಿಗೆ ಬೇಕಾದ ದಿನಸಿಯನ್ನು ಅನಿಲ್‌ ಅವರೇ ಒದಗಿಸಿದ್ದಾರೆ. ಬೆಳ್ತಂಗಡಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೂಡಾ ಕೊಡಿಸಿದ್ದಾರೆ.

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next