Advertisement

Belthangady ಸಂಸೆ-ದಿಡುಪೆ ರಸ್ತೆ ಅಭಿವೃದ್ಧಿ: ಶಾಸಕರಿಂದ ಪರಿಶೀಲನೆ

11:04 PM Jan 23, 2024 | Team Udayavani |

ಬೆಳ್ತಂಗಡಿ: ಸಂಸೆ-ದಿಡುಪೆ ರಸ್ತೆ ಅಭಿವೃದ್ಧಿ ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲಿ ಬೆಳ್ತಗಂಡಿ ಶಾಸಕ ಹರೀಶ್‌ ಪೂಂಜ ವಿಚಾರ ಪ್ರಸ್ತಾವಿಸಿದಂತೆ ಸಂಸೆ-ದಿಡುಪೆ ರಸ್ತೆಯನ್ನು ಪರಿಶೀಲಿಸಿದ್ದೇನೆ. ಎರಡೂ ಕ್ಷೇತ್ರಗಳ ಜನತೆಯ ಆವಶ್ಯಕತೆ ಮನಗಂಡು ರಸ್ತೆ ಅಭಿವೃದ್ಧಿಗೆ ಇರುವ ತೊಡಕನ್ನು ಬಗೆಹರಿಸಲು ಮುಂದಿನ ಅಧಿವೇಶನದಲ್ಲಿ ಪ್ರಯತ್ನಿಸುವೆ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

Advertisement

ಬೆಳ್ತಂಗಡಿ ತಾಲೂಕು ಹಾಗೂ ಮೂಡಿಗೆರೆ ತಾಲೂಕನ್ನು ಸಂಪರ್ಕಿಸುವ 8 ಕಿ.ಮೀ. ದಿಡುಪೆ-ಸಂಸೆ ರಸ್ತೆಯ ಅಭಿವೃದ್ಧಿ ವಿಚಾರವಾಗಿ ಮಲವಂತಿಗೆ ಗ್ರಾಮದ ಎಳನೀರಿನಲ್ಲಿ ಮಂಗಳವಾರ ಎರಡೂ ಕ್ಷೇತ್ರಗಳ ಶಾಸಕರಿಂದ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ನಡೆದ ಭೇಟಿ ಮತ್ತು ಪರಿಶೀಲನೆ ವೇಳೆ ಅವರು ಮಾತನಾಡಿದರು.

ಪ್ರಸ್ತುತ ಧರ್ಮಸ್ಥಳಕ್ಕೆ ತೆರಳಲು 110 ಕಿ.ಮೀ. ಸುತ್ತಿ ಬಳಸಿ ಬರಬೇಕು. ಅದನ್ನು ತಪ್ಪಿಸಿ ಅಲ್ಪಾವಧಿಯಲ್ಲಿ ಕ್ರಮಿಸಲು ರಸ್ತೆಯನ್ನು ಸುಗಮಗೊಳಿಸಲು ಈ ರಸ್ತೆ ಅತ್ಯಾವಶ್ಯಕವಾಗಿದೆ. ಅರಣ್ಯ ಇಲಾಖೆಯೊಂದಿಗೆ ಜಂಟಿ ಸಭೆ ನಡೆಸಿ ಫೆ. 12ರಂದು ನಡೆಯುವ ಅಧಿವೇಶನದಲ್ಲಿ ಅನುಕೂಲಗಳೆಡೆಗೆ ಸತತ ಪ್ರಯತ್ನ ನಡೆಸಲಾಗುವುದು ಎಂದರು.

ಸ್ಥಳೀಯ ಮುಖಂಡರು ಶಾಸಕರೊಂದಿಗೆ ಮಾತನಾಡಿ, ರಾಜಕೀಯ ರಹಿತವಾಗಿ ಪ್ರಯತ್ನಿಸಿ ತತ್‌ಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಕೇಳಿಕೊಂಡರು.

ಕುದುರೆಮುಖ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್‌ ಬಾಬು, ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ಪೂಜಾರಿ, ಬೆಳ್ತಂಗಡಿ ವನ್ಯಜೀವಿ ವಿಭಾಗ ವಲಯ ಅರಣ್ಯಾಧಿಕಾರಿ ಸ್ವಾತಿ, ಮಲವಂತಿಗೆ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್‌, ಮಾಜಿ ಅಧ್ಯಕ್ಷ ದಿನೇಶ್‌ ಗೌಡ, ಕೆಪಿಸಿಸಿ ಸದಸ್ಯ ಪ್ರಭಾಕರ ಕೆ.ಆರ್‌. ಸಂಸೆ ಬ್ಲಾಕ್‌ ಅಧ್ಯಕ್ಷೆ ಶ್ರೀಣಿತ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್‌, ತಾ.ಪಂ. ಮಾಜಿ ಸದಸ್ಯರಾದ ರಾಜೇಂದ್ರ ಪ್ರಸಾದ್‌, ಅಬ್ದುಲ್‌ ರಫೀಕ್‌, ವೀರೇಂದ್ರ, ಪ್ರಮುಖರಾದ ಅನಿತಾ ರಮೇಶ, ಅರುಣ್‌ ಕುಮಾರ್‌, ಮಧುಸೂದನ್‌, ಪ್ರಮೋದ್‌ ಸಂಸೆ, ಮೃತ್ಯುಂಜಯ ಜೈನ್‌, ವರ್ಧಮಾನ್‌ ಜೈನ್‌, ಮಹೇಶ್‌ ಗುತ್ಯಾಡ್ಕ, ವಿಜಯ ಗೌಡ ಉಪಸ್ಥಿತರಿದ್ದರು.

Advertisement

ತಾರ್ಕಿಕ ಅಂತ್ಯದ ವಿಶ್ವಾಸ: ಪೂಂಜ
ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಮಾತನಾಡಿ, ದಿಡುಪೆ-ಸಂಸೆ ರಸ್ತೆ ಅಭಿವೃದ್ಧಿಗೆ ಅನೇಕ ವರ್ಷಗಳ ಹೋರಾಟ ನಡೆದಿದೆ. ಇದಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಲ್ಲಿ ಕೇವಲ ಎರಡು ಕ್ಷೇತ್ರವಲ್ಲದೆ, ರಾಜ್ಯದ ಜನತೆಗೆ ಅನುಕೂಲವಾಗಲಿದೆ. ಈಗಾಗಲೇ 5 ಕೋಟಿ ರೂ. ವೆಚ್ಚದಲ್ಲಿ ಒಂದು ಸೇತುವೆ ಸಹಿತ 3 ಕಿ.ಮೀ. ರಸ್ತೆ ನಿರ್ಮಾಣವಾಗಿದೆ. ಮುಂದೆ ಉಳಿದ 5 ಕಿ.ಮೀ. ಅಭಿವೃದ್ಧಿ ಪಡಿಸಿ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಶಾಸಕಿ ನಯನಾ ಮೋಟಮ್ಮ ಅವರ ಸಮ್ಮುಖದಲ್ಲಿ ಅರಣ್ಯ ಸಚಿವರೊಂದಿಗೆ ಎಲ್ಲ ಇಲಾಖೆಗಳು ಜಂಟಿ ಸಭೆ ನಡೆಸಿದಲ್ಲಿ ಪರಿಹಾರ ಸಿಗುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next