ಬೆಂಗಳೂರು: ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯ ರುದ್ರಭೂಮಿಗಳಿಗೆ ಮೂಲ ಸೌಕರ್ಯ ಕಲ್ಪಿಸು ವಂತೆ ಕಾಂಗ್ರೆಸ್ ಸದಸ್ಯ ಮಂಜುನಾಥ್ ಭಂಡಾರಿ ಸರಕಾರವನ್ನು ಆಗ್ರಹಿಸಿದ್ದಾರೆ.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು, ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲಿ ಆರು ರುದ್ರಭೂಮಿಗಳಿದ್ದು, ಅವುಗಳಲ್ಲಿ ನೀರು ಸಹಿತ ಹಲವು ಮೂಲ ಸೌಕರ್ಯದ ಕೊರತೆ ಇದೆ.
ಆ ಹಿನ್ನೆಲೆಯಲ್ಲಿ ಅಲ್ಲಿನ ಜನರು ಪಕ್ಕದ ಊರುಗಳ ರುದ್ರಭೂಮಿಯನ್ನು ಬಳಸಬೇಕಾದ ಪರಿಸ್ಥಿತಿ ಅಲ್ಲಿದೆ. ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಬೆಳ್ತಂಗಡಿಯ ಹೊಳೆಬದಿಯಲ್ಲಿರುವ ರುದ್ರಭೂಮಿಯಲ್ಲಿ ಶವಸಂಸ್ಕಾರ ನಡೆಯದೆ ಹಲವುವರ್ಷಗಳು ಸಂದಿವೆ. ಅಲ್ಲಿಗೆ ರಸ್ತೆ ಸಂಪರ್ಕವಿದ್ದರೂ ರುದ್ರಭೂಮಿಗೆ ಮೀಸಲಿಟ್ಟಿರುವ ಜಾಗದ ಸುತ್ತಮುತ್ತ ಹುಲ್ಲು, ಮುಳ್ಳಿನ ಗಿಡಗಂಟೆಗಳು ಬೆಳೆದು ನಿಂತಿವೆ.
ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಲ್ಲಿರುವ ಬೆಳ್ತಂಗಡಿ ಪಟ್ಟಣದ ರುದ್ರಭೂಮಿಗಳಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪೌರಾಡಳಿತ ಇಲಾಖೆ ಸಚಿವರು ಮುಂದಾಗಬೇಕು ಎಂದು ಮನವಿ ಮಾಡಿದರು.