Advertisement

ರೈಲ್ವೆ ಸೇತುವೆ ಕೆಳಗೆ ನನಗೂ ಮಲಿನ ನೀರಿನ ಸಿಂಚನವಾಗಿದೆ!

12:57 AM Jun 30, 2019 | Team Udayavani |

ಬೆಂಗಳೂರು: “ರೈಲ್ವೆ ಕೆಳ ಸೇತುವೆ ಮೂಲಕ ತೆರಳುವಾಗ ರೈಲಿನ ಶೌಚಾಲಯದ ಮಲಿನ ನೀರು ನನ್ನ ಮೇಲೆ ಸಿಂಚನವಾಗಿತ್ತು’! ಈ ಮಾತನ್ನು ಸ್ವತಃ ರೈಲ್ವೆ ರಾಜ್ಯಖಾತೆ ಸಚಿವ ಸುರೇಶ್‌ ಅಂಗಡಿ ಹೇಳಿದರು.

Advertisement

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮೂರನೇ ಪ್ರವೇಶ ದ್ವಾರ ಉದ್ಘಾಟನೆ ವೇಳೆ ಮೇಯರ್‌ ಗಂಗಾಂಬಿಕೆ ನಗರದ ರೈಲ್ವೆ ಸೇತುವೆಗಳಿಂದ ರೈಲಿನ ಮಲೀನ ನೀರು ಸೋರಿಕೆಯಾಗಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಯ ಪರಿಹಾರಕ್ಕೆ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್‌ ಅಂಗಡಿಯವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರು ತಮಗಾದ ಅನುಭವ ಹಂಚಿಕೊಂಡರು.

ಸಚಿವರಿಗೆ ಮನವಿ ನೀಡಿದ ಮೇಯರ್‌ ಗಂಗಾಬಿಕೆ, “ನಗರದಲ್ಲಿರುವ ರೈಲ್ವೆ ಕೆಳ ಸೇತುವೆಗಳು ಸೂಕ್ತ ನಿರ್ವಹಣೆ ಇಲ್ಲದೆ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರ ಮೇಲೆ ರೈಲಿನ ಮಲೀನ ನೀರು ಬೀಳುತ್ತಿದೆ. ಇದರಿಂದಾಗಿ ವಾಹನ ಸವಾರರು ಒಮ್ಮೆಗೆ ಬ್ರೇಕ್‌ ಹಾಕಿ ಹಿಂಬದಿಯ ಸವಾರರಿಂದ ಅಪಘಾತವಾಗುತ್ತಿದೆ.

ಈ ಬಗ್ಗೆ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಡಿ.ಜಿ.ಮಲ್ಯ ಅವರನ್ನು ಜೂ.18ರಂದು ಭೇಟಿಯಾಗಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು. ಮೇಯರ್‌ ಮನವಿಗೆ ಪ್ರತಿಕ್ರಿಯಿಸಿದ ಸಚಿವರು “ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿರುವ ಸಂದರ್ಭ ರೈಲ್ವೆ ಕೆಳ ಸೇತುವೆ ಮೂಲಕ ಹಾದು ಹೋಗುವಾಗ ಕೊಳಚೆ ನೀರು ನಮ್ಮ ಮೇಲೆ ಬಿದ್ದ ಅನುಭವವಾಗಿದೆ.

ಇದರಿಂದಾಗಿ ಎಲ್ಲರಿಗೂ ಇರಿಸು ಮುರಿಸು ಆಗುವುದು ಸಹಜ. ನಗರದಲ್ಲಿರುವ ಎಲ್ಲಾ ರೈಲ್ವೆ ಕೆಳ ಸೇತುವೆಗಳ ನಿರ್ವಹಣೆಯನ್ನು ಉನ್ನತೀಕರಿಸಿ ಸೇತುವೆ ಕೆಳ ಭಾಗದಲ್ಲಿ ಯಾವುದೇ ರೀತಿಯ ಮಲೀನ ನೀರು ಸೋರಿಕೆ ಆಗದಂತೆ ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು. ಬಳಿಕ ಒಂದು ತಿಂಗಳೊಳಗೆ ಈ ಸಮಸ್ಯೆಯನ್ನು ಸರಿಪಡಿಸುವಂತೆ ಜನರಲ್‌ ಮ್ಯಾನೇಜರ್‌ ಎ.ಕೆ.ಸಿಂಗ್‌ ಅವರಿಗೆ ಆದೇಶಿಸಿದರು.

Advertisement

ಗೂಡ್ಸ್‌ ಶೆಡ್‌, ಕಂಟೈನರ್‌ ಡಿಪೋಗಳ ಸ್ಥಳಾಂತರಕ್ಕೆ ಸಮ್ಮತಿ: ವೈಟ್‌ಫಿಲ್ಡ್‌ನಲ್ಲಿರುವ ಗೂಡ್ಸ್‌ ಶೆಡ್‌ ಮತ್ತು ಕಂಟೈನರ್‌ ಡಿಪೋಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ರೈಲ್ವೆ ಖಾತೆ ರಾಜ್ಯ ಖಾತೆ ಸಚಿವ ಸುರೇಶ್‌ ಅಂಗಡಿ ಸಮ್ಮತಿಸಿದ್ದಾರೆ.

ನಗರದ ವೈಟ್‌ಫಿಲ್ಡ್‌, ಮಹದೇವಪುರ, ಬೊಮ್ಮನಹಳ್ಳಿ ಮೊದಲಾದ ಪ್ರದೇಶಗಳಲ್ಲಿ ರೈಲ್ವೆ ಗೂಡ್ಸ್‌ ಶೆಡ್‌ ಮತ್ತು ಕಂಟೈನರ್‌ ಡಿಪೋನ ಭಾರಿ ಸರಕು ವಾಹನಗಳು ನಿತ್ಯ ಸಂಚರಿಸುವುದರಿಂದ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ, ಆ ಡಿಪೋಗಳನ್ನು ಸ್ಥಳಾಂತರಿಸಿ, ವಾಹನ ದಟ್ಟಣೆ ಕಡಿಮೆ ಮಾಡುವ ಸಂಸದ ಪಿ.ಸಿ.ಮೋಹನ್‌ ಪ್ರಸ್ತಾವನೆ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಪಿ.ಸಿ.ಮೋಹನ್‌, ಡಿಪೋಗಳ ಸ್ಥಳಾಂತರಕ್ಕೆ ಕೇಂದ್ರ ಸಚಿವರು ಸಮ್ಮತಿ ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಆದಷ್ಟು ಶೀಘ್ರ ನಗರದ ಹೊರವಲಯದಲ್ಲಿ ಸೂಕ್ತ ಭೂಮಿ ನೀಡಿ ಸ್ಥಳಾಂತರಕ್ಕೆ ಸಹಕರಿಸಿದರೆ ಈ ಜಾಗದಲ್ಲಿ ಬೃಹತ್‌ ಸಬ್‌ ಅರ್ಬನ್‌ ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ ಸೇರಿದಂತೆ ಅವಶ್ಯಕ ಸೌಕರ್ಯಗಳಿರುವ ಆಧುನಿಕ ಸಾರಿಗೆ ಹಬ್‌ ನಿರ್ಮಾಣ ಮಾಡಬಹುದು.

ಭೂಮಿ ನೀಡುವ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತೇನೆ. ಹೊಸಕೋಟೆ, ಮಾಲೂರು ಅಥವಾ ಯಾವುದಾದರೂ ಸೂಕ್ತ ಸ್ಥಳದಲ್ಲಿ ಭೂಮಿ ನೀಡಿ ಸಹಕರಿಸಲು ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಸಿಟಿ ರೈಲು ನಿಲ್ದಾಣದ 3ನೇ ಪ್ರವೇಶ ದ್ವಾರ ಉದ್ಘಾಟನೆ: ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಮೆಟ್ರೋ ನಿಲ್ದಾಣದ ಎದುರಿಗೆ ಮೂರನೇ ಪ್ರವೇಶ ದ್ವಾರವನ್ನು ನಿರ್ಮಿಸಲಾಗಿದೆ. ಶನಿವಾರ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್‌ ಅಂಗಡಿ ಉದ್ಘಾಟಿಸಿದರು. ಈ ವೇಳೆ ಸಂಸದ ಪಿ ಸಿ ಮೋಹನ್‌. ಮೇಯರ್‌ ಗಂಗಾಂಬಿಕೆ, ಪಾಲಿಕೆ ಸದಸ್ಯೆ ಶಶಿಕಲಾ ಇದ್ದರು.

ಈ ಪ್ರವೇಶ ದ್ವಾರ ಸುಮಾರು 1.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 3,500 ಚ.ಮೀ.ವಿಸ್ತೀರ್ಣವಿದೆ. ಇಲ್ಲಿ ನಾಲ್ಕು ಟಿಕೆಟ್‌ ಬುಕ್ಕಿಂಗ್‌ ಕೌಂಟರ್‌ಗಳು, ವಿಶ್ರಾಂತಿ ಕೊಠಡಿ ಇದೆ. ಈ ದ್ವಾರಕ್ಕೆ ಪ್ರತ್ಯೇಕ ನಿಲುಗಡೆ ತಾಣವಿದ್ದು, 100 ದ್ವಿಚಕ್ರ ವಾಹನಗಳು, 22 ಕಾರುಗಳನ್ನು ನಿಲ್ಲಿಸಬಹುದಾಗಿದೆ. ಜತೆಗೆ ಟಿಕೆಟ್‌ ಕೌಂಟರ್‌ ಮುಂಭಾಗ 500 ಚ.ಮೀ ಹೂ ತೋಟ ನಿರ್ಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next