ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳು, ಅಂಗಡಿಗಳು, ಆಟೋ ಚಾಲಕರ ಬಳಿ ಹಫ್ತಾ ವಸೂಲಿ ಮಾಡುತ್ತಿದ್ದ ರೌಡಿ ಶೀಟರ್‌ನನ್ನು ಅವರ ಸಂಬಂಧಿಕರೆ ಹತ್ಯೆ ಮಾಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ತಡ ರಾತ್ರಿ ನಡೆದಿದೆ.
ರಾಜು ಅಲಿಯಾಸ್ ಪೌಂಡ್ರಿ(34) ಮೃತ ರೌಡಿ ಶೀಟರ್. ಪ್ರಕರಣ ಸಂಬಂಧ ಮೃತನ ಸಂಬಂಧಿ ಕುಮಾರ್, ಕಿರುಣ್, ಮಹೇಂದ್ರ ಹಾಗೂ ಗಿರೀಶ್, ಗಣೇಶ್ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜು ಮಹಾಲಕ್ಷ್ಮೀ ಲೇಔಟ್ ಮತ್ತು ಆರ್.ಎಂ.ಸಿ.ಯಾರ್ಡ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ.
ಈತ ಆರ್.ಎಂ.ಸಿ.ಯಾರ್ಡ್ ಮತ್ತು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬೀದಿ ಬದಿ ವ್ಯಾಪಾರ ಮಾಡುವ ತರಕಾರಿ ವ್ಯಾಪಾರಸ್ಥರು, ಆಟೋ ಚಾಲಕರು ಮತ್ತು ಸ್ಥಳೀಯರನ್ನು ಬೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದ. ಜತೆಗೆ ತನ್ನ ಸಂಬಂಧಿಕರು ಕೂಲಿ ಕೆಲಸವ ಮಾಡುವವರನ್ನು ಬೆದರಿಸಿ ಅವರ ಬಳಿ ಹಣ ಕಸಿಯುತ್ತಿದ್ದ. ರಾಜುವಿನ ಉಪಠಳದಿಂದ ಬೇಸತ್ತಿದ್ದ ರಾಜುವಿನ ಪತ್ನಿಯ ತಂಗಿ ಗಂಡ ಕುಮಾರ್ ರಾಜು ಹತ್ಯೆಗೆ ಸಂಚು ರೂಪಿಸಿದ್ದ.
ಮೂರು ತಿಂಗಳಿಂದ ಸಂಚು: ಮೂರು ತಿಂಗಳ ಹಿಂದೆ ಕುಮಾರ್ ಐದು ಮಂದಿ ಜತೆ ಸೇರಿ ರಾಜುವಿನ ಹತ್ಯೆಗೆ ಸಂಚು ರೂಪಿಸಿದ್ದ. ಅದಕ್ಕೆ ಸೂಕ್ತ ಸಮಯವಾಗಿರಲಿಲ್ಲ. ಇತ್ತೀಚೆಗೆ ಕುಮಾರ್ ಸೇರಿಂದಂತೆ ಹಲವರು ರಾಜುವಿನ ಬೆದರಿಕೆಗೆ ಹೆದುರುತ್ತಿರಲಿಲ್ಲ. ರಾಜು ಆರೋಪಿಗಳನ್ನು ಮದ್ಯ ಸೇವಿಸುವ ಸಲುವಾಗಿ ತಾನೇ ಬಾರ್‌ಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಕುಮಾರ್ ಮತ್ತು ಕಿರಣ್‌ನೊಂದಿಗೆ ಮದ್ಯ ಸೇವಿಸಿ ಜಗಳ ತೆಗೆದಿದ್ದ.
ಮನೆಗೆ ವಾಪಸ್ ಬರುವಾಗ ಪೌಂಡ್ರಿ ಬಳಿ ಆರೋಪಿಗಳು ರಾತ್ರಿ 12.30ರ ಸುಮಾರಿಗೆ ರಾಜುನನ್ನು ಥಳಿಸಿದ್ದು, ಕೆಳಗೆ ಬಿದ್ದ ರಾಜುವಿನ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ರೌಡಿಶೀಟರ್ ರಾಜು ಹಫ್ತಾ ವಸೂಲಿ ಮಾಡುತ್ತಿದ್ದ ಬಗ್ಗೆ ಯಾರೊಬ್ಬರು ದೂರು ನೀಡಿಲ್ಲ. ವಿಚಾರಣೆ ವೇಳೆ ಹಫ್ತಾ ವಸೂಲಿ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.