ಬಳ್ಳಾರಿ: ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ವಲಸೆ ಬಂದಿರುವ ಜಾರ್ಖಂಡ್ ಮೂಲದ 1550 ವಲಸೆ ಕಾರ್ಮಿಕರು ನಗರದ ರೈಲು ನಿಲ್ದಾಣದಿಂದ ಶ್ರಮಿಕ ರೈಲು ಮೂಲಕ ತಮ್ಮ ತಮ್ಮ ಊರುಗಳಿಗೆ ಶುಕ್ರವಾರ ಪ್ರಯಾಣ ಬೆಳೆಸಿದರು.
ಬಳ್ಳಾರಿ ರೈಲ್ವೆ ನಿಲ್ದಾಣದಿಂದ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಅಪರ ಜಿಲ್ಲಾಧಿಕಾರಿ ಮಂಜುನಾಥ, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಪ್ರೋಬೆಷನರಿ ಐಎಎಸ್ ಈಶ್ವರ್ ಕಾಂಡೂ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಡಿವೈಎಸ್ಪಿ ರಾಮರಾವ್ ಸೇರಿದಂತೆ ಅನೇಕರು ಸುರಕ್ಷಿತವಾಗಿ ತಮ್ಮೂರಿಗೆ ತಲುಪಿ ಎಂದು ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.
ಜಿಲ್ಲೆಯ ಬಳ್ಳಾರಿ, ತೋರಣಗಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೀವನ ನಿರ್ವಹಣೆಗಾಗಿ ಜಾರ್ಖಂಡ್ ರಾಜ್ಯದಿಂದ ಬಂದಿದ್ದ 1550 ಜನ ವಲಸಿಗರನ್ನು ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಹಾಗೂ ತೋರಣಗಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಅವರಿಗೆ ಪ್ರಮಾಣಪತ್ರ ವಿತರಿಸಿ ಹಾಗೂ ಅಲ್ಲಿಯೇ ಟಿಕೆಟ್ ಅನ್ನು ಅವರಿಗೆ ನೀಡಲಾಗಿತ್ತು. ಆ ವಲಸಿಗರನ್ನು ಅವರಿಗೆ ನೀಡಲಾದ ಟಿಕೆಟ್ ಹಿಂಬದಿಯಲ್ಲಿ ಬರೆಯಲಾದ ಸೀಟ್ ಸಂಖ್ಯೆ ಮತ್ತು ಬೋಗಿ ನೋಡಿಕೊಂಡು ಅವರನ್ನು ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಸಂಬಂಧಿಸಿದ ಬೋಗಿಯಲ್ಲಿ ಕುಳಿತುಕೊಳ್ಳುವಂತೆ ಬೆಳಗ್ಗೆ 7ರಿಂದಲೇ ತಿಳಿಸುತ್ತಿದ್ದರು.
ವಲಸಿಗ ಪ್ರಯಾಣಿಕರು ಪ್ರಯಾಣದ ಸಂದರ್ಭದಲ್ಲಿ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಎರಡು ಬಿಸ್ಕಿತ್ ಪ್ಯಾಕೇಟ್, ಎರಡು ಬ್ರೆಡ್ ಪಾಕೇಟ್, ಮೂರು ಲೀಟರ್ ನೀರು, ಎರಡು ಪ್ಯಾಕೇಟ್ ಆಹಾರ ಪೊಟ್ಟಣ, ಮಿರ್ಚಿ ಬಜಿ ಹಾಗೂ ಇನ್ನಿತರೆ ಆಹಾರ ಸಾಮಗ್ರಿಗಳ ಆಹಾರ ಕಿಟ್‌ಗಳನ್ನು ಪ್ರತಿಯೊಬ್ಬ ವಲಸಿಗರಿಗೂ ಜಿಲ್ಲಾಡಳಿತದ ವತಿಯಿಂದ ನೀಡಲಾಯಿತು. ರೈಲ್ವೆ ನಿಲ್ದಾಣದೊಳಗೆ ಆಗಮಿಸುತ್ತಲೇ ವಲಸಿಗ ಪ್ರಯಾಣಿಕರಿಗೆ ಸ್ಯಾನಿಟೈಸರ್ ಕೈಗೆ ಸಿಂಪಡಿಸಲಾಗುತ್ತಿತ್ತು. ರೆಡ್‌ಕ್ರಾಸ್ ಸಂಸ್ಥೆ ಯವರು ಇದೇ ಸಂದರ್ಭದಲ್ಲಿ ಮಾಸ್ಕ್ ಗಳು ಹಾಗೂ ಲಘು ಉಪಹಾರ ವಿತರಿಸಿದರು.
ಜಾರ್ಖಂಡ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಲು ರೈಲಲ್ಲಿ ಆಸೀನರಾಗಿದ್ದ ವಲಸಿಗರು ತಮ್ಮೂರು ಕಡೆ ಸುರಕ್ಷಿತವಾಗಿ ಪಯಣಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿರುವುದು ಕಂಡುಬಂದಿತು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಅಪರ ಜಿಲ್ಲಾ ಧಿಕಾರಿ ಮಂಜುನಾಥ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಎಎಸ್ಪಿ ಲಾವಣ್ಯ ಅವರು ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿನ ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್, ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ ಐಲಿ, ಅಲ್ತಾಫ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ವಲಸಿಗರನ್ನು ಸುರಕ್ಷಿತವಾಗಿ ಅವರ ಊರುಗಳಿಗೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಸಕಲ ಕ್ರಮಗಳನ್ನು ಜಿಲ್ಲಾಡಳಿತ ವತಿಯಿಂದ ಕೈಗೊಳ್ಳಲಾಗಿದೆ. ಮಾರ್ಗಮಧ್ಯೆ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಆಹಾರ ಪೊಟ್ಟಣ ವಿತರಿಸಲಾಗಿದೆ. ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಿ ಕಳುಹಿಸಿಕೊಡಲಾಗಿದೆ.
ಎಸ್.ಎಸ್.ನಕುಲ್,
ಜಿಲ್ಲಾಧಿಕಾರಿ