Advertisement

ಬಳ್ಳಾರಿ ವಿಭಜನೆ ಬೇಡ; ವಿಜಯನಗರ ಹೆಸರಿಡಿ

11:55 PM Oct 02, 2019 | Lakshmi GovindaRaju |

ಬೆಂಗಳೂರು: ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವ ಬದಲು ಬಳ್ಳಾರಿಗೆ ವಿಜಯನಗರ ಎಂದು ಹೆಸರಿಡುವಂತೆ ಜಿಲ್ಲೆಯ ಪ್ರತಿನಿಧಿಗಳು ಮುಖ್ಯಮಂತ್ರಿಗೆ ಸಲಹೆ ನೀಡಿದ್ದಾರೆ. ಬುಧವಾರ ವಿಜಯನಗರ ಜಿಲ್ಲೆ ಘೋಷಣೆ ಮಾಡುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಳ್ಳಾರಿ ಜಿಲ್ಲೆಯ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್‌ ಸದಸ್ಯರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಬಳ್ಳಾರಿ ಜಿಲ್ಲೆ ವಿಭಜಿಸಲು ಬಹುತೇಕ ಜನ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಅಲ್ಲದೆ, ತರಾತುರಿಯಲ್ಲಿ ರಾಜಕೀಯ ಲಾಭಕ್ಕೋಸ್ಕರ ವಿಜಯನಗರ ಜಿಲ್ಲೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ನೇರವಾಗಿಯೇ ಆರೋಪ ಮಾಡಿದ್ದಾರೆ. ಅದೇ ಕಾರಣಕ್ಕೆ ಯಡಿಯೂರಪ್ಪನವರು ವಿಜಯ ನಗರ (ಹೊಸಪೇಟೆ) ಕ್ಷೇತ್ರದ ಉಪ ಚುನಾವಣೆ ಮುಗಿದ ನಂತರ ಮತ್ತೂಂದು ಬಾರಿ ಜಿಲ್ಲೆಯ ಜನಪ್ರತಿನಿಧಿಗಳು, ಸಾಹಿತಿಗಳು, ಉದ್ಯಮಿಗಳು, ರೈತ ಮುಖಂಡರು ಹಾಗೂ ಹೋರಾಟಗಾರರ ಸಭೆ ಕರೆಯುವುದಾಗಿ ತಿಳಿಸಿ, ಹೊಸ ಜಿಲ್ಲೆ ಪ್ರಸ್ತಾಪವನ್ನು ಮುಂದೂಡಿದ್ದಾರೆ.

ವಿಜಯನಗರ ಕ್ಷೇತ್ರದ ಅನರ್ಹ ಶಾಸಕ ಆನಂದ್‌ ಸಿಂಗ್‌ ಅವರ ಒತ್ತಾಯದ ಮೇರೆಗೆ ಅವರ ಚುನಾವಣೆಗೆ ಅನುಕೂಲ ಮಾಡಿಕೊಡಲು ವಿಜಯನಗರವನ್ನು ಜಿಲ್ಲೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಸಚಿವ ಪಿ.ಟಿ. ಪರಮೇಶ್ವರ್‌ ನಾಯಕ್‌ ಸಭೆಯಲ್ಲಿ ನೇರವಾಗಿಯೇ ಆರೋಪ ಮಾಡಿದ್ದಾರೆ. ಅಲ್ಲದೆ, ಹೊಸ ಜಿಲ್ಲೆ ಮಾಡಬೇಕೆಂದರೆ ತಮ್ಮ ಕ್ಷೇತ್ರ ಹೂವಿನ ಹಡಗಲಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಆಗ್ರಹಿಸಿದ್ದಾರೆ. ಅವರ ಆರೋಪಕ್ಕೆ ಆನಂದ್‌ ಸಿಂಗ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಯಡಿಯೂರಪ್ಪ ಅವರನ್ನು ಸುಮ್ಮನೆ ಕೂರುವಂತೆ ಸೂಚಿಸಿದರು ಎಂದು ತಿಳಿದು ಬಂದಿದೆ.

ಅನರ್ಹ ಶಾಸಕ ಆನಂದ್‌ ಸಿಂಗ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಅವರು ಜಿಲ್ಲೆಯ ವಿಭಜನೆಯ ಪರವಾಗಿ ಮಾತನಾಡಿದ್ದಾರೆ. ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ಉಳಿದ ಜನಪ್ರತಿನಿಧಿಗಳು ವಿಭಜನೆ ಬೇಡ, ಬಳ್ಳಾರಿಗೆ ವಿಜಯನಗರ ಜಿಲ್ಲೆ ಎಂದು ಮರುನಾಮಕರಣ ಮಾಡುವಂತೆ ಸಲಹೆ ನೀಡಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಮಾತ್ರ ತಟಸ್ಥ ಧೋರಣೆ ಅನುಸರಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರಕ್ಕೆ ಮನವಿ: ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಸಲು ನಿರ್ಧರಿಸಿದರೆ, ಹಗರಿಬೊಮ್ಮನಹಳ್ಳಿಯನ್ನು ನೂತನ ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರು, ತಾಲೂಕಿನ ರೈತ ಮುಖಂಡರೊಂದಿಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಹಗರಿಬೊಮ್ಮನಹಳ್ಳಿ, ಹಡಗಲಿ, ಹೊಸಪೇಟೆ, ಹರಪನಗಳ್ಳಿ, ಕೊಟ್ಟೂರು, ಕೂಡ್ಲಿಗಿ, ಸಂಡೂರು ತಾಲೂಕುಗಳಿಗೆ ಕೇಂದ್ರ ಸ್ಥಾನವಾಗುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಪ್ರತ್ಯೇಕ ನಿಯೋಗದ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಭೀಮಾನಾಯ್ಕ, ಬಳ್ಳಾರಿ ಅಖಂಡ ಜಿಲ್ಲೆಯಾಗಿರಬೇಕು ಎನ್ನುವುದು ನಮ್ಮ ಬಯಕೆ. ಆದರೆ, ಜಿಲ್ಲೆ ವಿಭಜನೆ ಮಾಡಬೇಕಾದರೆ ಸಮಿತಿ ರಚನೆ ಮಾಡಿ ವರದಿ ತರೆಸಿಕೊಳ್ಳಬೇಕು. ಹಗರಿಬೊಮ್ಮನಹಳ್ಳಿ ಎಲ್ಲ ತಾಲೂಕುಗಳಿಗೆ ಹತ್ತಿರವಾಗುವುದರಿಂದ ಜಿಲ್ಲಾ ಕೇಂದ್ರ ಮಾಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

ಈಗಿರುವ ಬಳ್ಳಾರಿ ಹೆಸರನ್ನು ಬದಲಾ ಯಿಸಿ ವಿಜಯನಗರ ಎಂದು ಮರು ನಾಮಕರಣ ಮಾಡಲು ನಮ್ಮೆಲ್ಲರ ಸಹಕಾರ ಇದೆ. ಆದರೆ, ಬಳ್ಳಾರಿಯಿಂದ ವಿಜಯನಗರ ವಿಭಜಿಸಲು ಬಿಡುವುದಿಲ್ಲ. ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಒಗ್ಗಟ್ಟಾಗಿದ್ದೇವೆ.
-ಸೋಮಶೇಖರ ರೆಡ್ಡಿ, ಬಳ್ಳಾರಿ ಶಾಸಕ

ವಿಜಯನಗರ ಜಿಲ್ಲೆಯಾಗಬೇಕೆಂಬ ಹೋರಾಟ ನನ್ನಿಂದ ಆರಂಭವಾಗಿರುವು ದಲ್ಲ. ಉಪಚುನಾವಣೆ ದೃಷ್ಠಿಯಿಂದ ಅವ ಸರ ದ ತೀರ್ಮಾನ ಬೇಡ ಎಂದು ಮುಖ್ಯಮಂತ್ರಿ ಗಳು ಮುಂದೂಡಿದ್ದಾರೆ. ವಿಜಯನಗರ ಜಿಲ್ಲೆಯಾಗಬೇಕೆಂದು ಶಪಥ ಮಾಡಿದ್ದೇನೆ.
-ಆನಂದ್‌ ಸಿಂಗ್‌, ಅನರ್ಹ ಶಾಸಕ

ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂದು ಕಂದಾಯ ಇಲಾಖೆಗೆ ಮನವಿ ಬಂದಿತ್ತು. ಎಲ್ಲರೂ ಅವರವರ ಅಭಿಪ್ರಾಯ ಹೇಳಿದ್ದಾರೆ. ಉಪ ಚುನಾವಣೆ ಇರುವುದರಿಂದ ಪ್ರಸ್ತಾಪ ತಡೆ ಹಿಡಿಯಲಾಗಿದೆ. ಚುನಾವಣೆ ಮುಗಿದ ಮೇಲೆ ಮತ್ತೆ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು.
-ಆರ್‌.ಅಶೋಕ್‌, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next