ಬಳ್ಳಾರಿ: ಕೋವಿಡ್ ವೈರಸ್ ತಡೆಯುವ ಸಲುವಾಗಿ ರಾಜ್ಯ ಸರ್ಕಾರದ ಆದೇಶದಂತೆ ಬಳ್ಳಾರಿ ಮಹಾನಗರ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೆ ಹೊರಗಡೆ ಸಂಚರಿಸುತ್ತಿರುವವರಿಂದ ಪಾಲಿಕೆ ಸಂಗ್ರಹಿಸಿದ ದಂಡದ ಮೊತ್ತ 10 ದಿನಗಳಲ್ಲಿ ಬರೋಬ್ಬರಿ 1.26 ಲಕ್ಷ ರೂ.ಗಳಾಗಿವೆ.
ಹೌದು…! ಕೋವಿಡ್ ತಡೆಗೆ ಕೇಂದ್ರ ಸರ್ಕಾರ ಘೋಷಿಸಿದ ಲಾಕ್‌ಡೌನ್-3 ಅನ್ವಯ ಮನೆಯಿಂದ ಅಗತ್ಯ ಕೆಲಸಕ್ಕೆ ಹೊರಬರುವ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಒಂದು ವೇಳೆ ಮಾಸ್ಕ್ ಧರಿಸದೇ ಇದ್ದರೆ ಅವರಿಗೆ ದಂಡ ವಿಧಿಸಲಾಗುತ್ತದೆ. 100 ರೂ.ನಿಂದ 200 ರೂ.ವರೆಗೆ ದಂಡ ವಿಧಿಸಲು ಅವಕಾಶ ಇದೆ. ಸಾರ್ವಜನಿಕರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಮನದಟ್ಟು ಮಾಡಿಕೊಳ್ಳಲು ರಸ್ತೆಗೆ ಇಳಿದ ಮಹಾನಗರ ಪಾಲಿಕೆ ಅಧಿಕಾರಿಗಳು ಕಳೆದ 10 ದಿನಗಳಿಂದ ವಸೂಲಿ ಮಾಡಿದ ದಂಡದ ಮೊತ್ತ ಒಂದು ಲಕ್ಷ ರೂ. ದಾಟಿದೆ.
ಮೇ 14ರ ಅಂತ್ಯಕ್ಕೆ ಪಾಲಿಕೆ ಪರಿಸರ ವಿಭಾಗದ ಅಧಿಕಾರಿಗಳು ಒಟ್ಟಾರೆ 1,21,600 ರೂ. ದಂಡವನ್ನು ಸಾರ್ವಜನಿಕರಿಗೆ ವಿಧಿಸಿದ್ದಾರೆ. ಒಟ್ಟಾರೆ 1216 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಮಾಸ್ಕ್ ಹಾಕಿಕೊಳ್ಳದೇ ಓಡಾಡುವವರಿಗೆ ಜಾಗೃತಿ ಮೂಡಿಸುತ್ತಿರುವ ಪಾಲಿಕೆ ಅಧಿಕಾರಿಗಳು ಜೊತೆ ಜೊತೆಗೆ ದಂಡ ಸಹ ವಿಧಿಸುವ ಮೂಲಕ ಮತ್ತೂಮ್ಮೆ ಈ ರೀತಿ ತಪ್ಪು ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಕೋವಿಡ್ ಎಂಬ ಮಹಾಮಾರಿ ಅತಿ ವೇಗವಾಗಿ ಹರಡುತ್ತದೆ. ಇದು ಮನುಷ್ಯನ ಗಂಟಲು, ಶ್ವಾಸಕೋಶವನ್ನು ತನ್ನ ಆಶ್ರಯ ತಾಣ ಮಾಡಿಕೊಳ್ಳುತ್ತದೆ. ಸಾಮಾನ್ಯವಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡುವ ಈ ವೈರಸ್ ಕೈ ಮೂಲಕ ನೇರ ಮೂಗು, ಬಾಯಿ ತಲುಪುವ ಪ್ರಮಾಣ ಹೆಚ್ಚಿದೆ. ಇದೇ ಕಾರಣಕ್ಕೆ ಮಾಸ್ಕ್ ಧರಿಸುವುದು ಅತ್ಯಾವಶ್ಯವಾಗಿರುತ್ತದೆ. ಇದನ್ನೇ ಜನರಿಗೆ ತಿಳಿಹೇಳುವ ಪಾಲಿಕೆ ಅಧಿಕಾರಿಗಳು ಬಡವರು, ಕೂಲಿ ಕಾರ್ಮಿಕರು, ಗ್ರಾಮೀಣ ಭಾಗದ ಜನರಿಗೆ ಉಚಿತ ಮಾಸ್ಕ್ ಸಹ ಹಂಚುತ್ತಿರುವುದು ವಿಶೇಷ.
ಮೇ 7 ರಂದು ಒಂದೇ ದಿನ 16,100 ರೂ. ದಂಡ ವಸೂಲಾತಿ ಆಗಿವುದು ದೊಡ್ಡ ಮೊತ್ತವಾದರೆ ಪ್ರತಿದಿನ ಸರಾಸರಿ 10 ಸಾವಿರ ರೂ. ದಂಡ ವಸೂಲಾಗಿದೆ. ನಗರದ ಪ್ರಮುಖ ವೃತ್ತ, ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಠಿಕಾಣಿ ಹೂಡುವ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಗ್ಗೆ 10 ರಿಂದ ಸಂಜೆ ತನಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.