Advertisement

ಭತ್ತ ಕಟಾವು ಮಾಡಲು ಬಿಡಿ ಸರ್‌

04:20 PM Apr 13, 2020 | Naveen |

ಬಳ್ಳಾರಿ: ನಮ್ಮನ್ನು ಬಿಟ್ಟುಬಿಡಿ ಸರ್‌… ಹೊಲದಲ್ಲಿ ಭತ್ತ ಬೆಳೆದು ನಿಂತಿದೆ…. ಕಟಾವು ಮಾಡಬೇಕು… ಮೊದಲೇ ಕೃಷಿ ಕಾರ್ಮಿಕರು ಸಿಗುತ್ತಿಲ್ಲ… ಈಚೆಗೆ ಮಳೆ ಬಂದು ಬೇರೆ ಅವಾಂತರ ಸೃಷ್ಟಿಸಿದೆ…. ಮೇಲಾಗಿ ನಮಗ್ಯಾರಿಗೂ ರೋಗದ ಲಕ್ಷಣಗಳಿಲ್ಲ ಎಂದೂ ದೃಢಪಟ್ಟಿದೆ…! ನಗರದ ಎಸ್‌ಸಿ, ಎಸ್‌ಟಿ ವಸತಿ ನಿಲಯದಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ತಾತ್ಕಾಲಿಕ ವಲಸೆ ನಿರಾಶ್ರಿತರ ಕೇಂದ್ರದಲ್ಲಿ ಕಳೆದ 14 ದಿನಗಳಿಂದ ಕೂಡಿಹಾಕಿರುವ 44 ಕೂಲಿಕಾರ್ಮಿಕರು ತೋಡಿಕೊಳ್ಳುತ್ತಿರುವ ಅಳಲಿದು.

Advertisement

ನೆರೆಯ ರಾಯಚೂರು ಜಿಲ್ಲೆ ಸಿಂಧನೂರು, ಮಾನ್ವಿ, ಮಸ್ಕಿ, ಲಿಂಗಸೂಗೂರು, ದೇವದುರ್ಗ ತಾಲೂಕುಗಳ ವಿವಿಧ ಗ್ರಾಮಗಳಿಂದ ದುಡಿಯಲೆಂದು ಬೆಂಗಳೂರಿಗೆ ಹೋದ ಕೂಲಿಗಳು ಲಾಕ್‌ ಡೌನ್‌ನಿಂದಾಗಿ ವಾಪಸ್ಸಾಗಿದ್ದಾರೆ. ಟ್ರ್ಯಾಕ್ಟರ್‌ನಲ್ಲಿ ಬೆಂಗಳೂರಿನಿಂದ ಹಲವು ಚೆಕ್‌ಪೋಸ್ಟ್‌ಗಳನ್ನು ದಾಟಿ ಬಂದಿದ್ದ ಇವರನ್ನು ಬಳ್ಳಾರಿಯಲ್ಲಿ ಜಿಲ್ಲಾಡಳಿತ ವಶಕ್ಕೆ ಪಡೆದು ನಗರದ ಎಸ್‌ಸಿ, ಎಸ್‌ಟಿ ನಿಲಯದಲ್ಲಿ ವ್ಯವಸ್ಥೆ ಮಾಡಿರುವ ತಾತ್ಕಾಲಿಕ ಕೇಂದ್ರದಲ್ಲಿ ಇರಿಸಿದೆ.

ಕಳೆದ 14 ದಿನಗಳಿಂದ ನಿರಾಶ್ರಿತರ ಕೇಂದ್ರದಲ್ಲಿರುವ ಇವರಿಗೆ ಜಿಲ್ಲಾಡಳಿತ ದಿನಕ್ಕೆ ಮೂರು ಹೊತ್ತು ಬೆಳಗ್ಗೆ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಮಾಡಿದೆ. ಒಟ್ಟು 44 ಜನರ ಪೈಕಿ 26 ಪುರುಷರು, 18 ಮಹಿಳೆಯರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಸೂಕ್ತ ಭದ್ರತೆಯನ್ನೂ ಒದಗಿಸಿದೆ. ಜತೆಗೆ ಕೇಂದ್ರದಲ್ಲಿರುವ ಎಲ್ಲರ ಆರೋಗ್ಯವನ್ನೂ ಪರೀಕ್ಷಿಸಲಾಗಿದ್ದು, ಯಾರಲ್ಲೂ ರೋಗದ ಲಕ್ಷಣಗಳಿಲ್ಲ ಎಂದು ದೃಢಪಟ್ಟಿದೆ. ಆದರೂ, ನಮ್ಮನ್ನು ತಾತ್ಕಾಲಿಕ ವಲಸೆ ನಿರಾಶ್ರಿತರ ಕೇಂದ್ರದಲ್ಲಿ ಉಳಿಸಿದ್ದಾರೆ. ಏ.14ರ ನಂತರ ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದರಾದರೂ, ಲಾಕ್‌ ಡೌನ್‌ ಅವಧಿಯನ್ನು ತಿಂಗಳ ಕೊನೆವರೆಗೆ ಮುಂದುವರೆಸಿದ್ದರಿಂದ ನಮ್ಮನ್ನು ಊರಿಗೆ ಕಳುಹಿಸುತ್ತಾರೋ ಇಲ್ಲ ಎಂಬ ಆತಂಕ ಕಾಡುತ್ತಿದೆ ಎಂದು ರಾಮಣ್ಣ ಬೇಸರ ವ್ಯಕ್ತಪಡಿಸುತ್ತಾರೆ.

ಭತ್ತ ಕಟಾವು ಮಾಡಬೇಕು: ನೆರೆಯ ಸಿಂಧನೂರಿನಲ್ಲಿ 6 ಎಕರೆಯಲ್ಲಿ ಭತ್ತ ಬೆಳೆದಿದ್ದು, ಕಟಾವು ಮಾಡಬೇಕಾಗಿದೆ. ಮನೆಯಲ್ಲಿ ವಯಸ್ಸಾದ ಅಪ್ಪ-ಅಮ್ಮ ಮಾತ್ರ ಇದ್ದಾರೆ. ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಭತ್ತ ನೆಲಕ್ಕೆ ಬಾಗಿದೆ. ಹೊಲದಲ್ಲಿ ಸಾಕಷ್ಟು ಕೆಲಸವಿದೆ. ಹಾಗಾಗಿ ನಮ್ಮನ್ನು ಬಿಟ್ಟರೆ ಭತ್ತ ಕಟಾವಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಶಿವನಗೌಡ, ದುರುಗಣ್ಣ ಅಧಿಕಾರಿಗಳಲ್ಲಿ ಅಂಗಾಲಾಚಿದರು.

ರೋಗದ ಲಕ್ಷಣಗಳಿಲ್ಲ: ತಾತ್ಕಾಲಿಕ ವಸತೆ ನಿರಾಶ್ರಿತರ ಕೇಂದ್ರದಲ್ಲಿರುವ ಕಾರ್ಮಿಕರನ್ನು ಈಗಾಗಲೇ ಎರಡು ಬಾರಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಯಾವುದೇ ರೋಗದ ಲಕ್ಷಣಗಳಿಲ್ಲ ಎಂದು ಬಂದಿದೆ. ಜತೆಗೆ ಕೇಂದ್ರಕ್ಕೆ ಬಂದು ನಾಳೆಗೆ 14 ದಿನಗಳು ಮುಗಿಯುತ್ತವೆ. ಈ ಅವಧಿಯಲ್ಲಿ ಕೇಂದ್ರದಲ್ಲಿರುವ ಯಾರಿಗೂ ಯಾವುದೇ ಕಾಯಿಲೆಗಳು ಕಾಣಿಸಿಕೊಂಡಿಲ್ಲ. ಆದರೂ, ನಮ್ಮನ್ನು ಇಲ್ಲಿಂದ ಕಳುಹಿಸುತ್ತಿಲ್ಲ. ಅಧಿಕಾರಿಗಳು ನಮ್ಮನ್ನು ಬಿಟ್ಟರೆ, ನಮ್ಮದೇ ಟ್ರ್ಯಾಕ್ಟರ್‌ನಲ್ಲಿ ನಮ್ಮೂರಿಗೆ ತೆರಳುತ್ತೇವೆ ಅವರು ಮನವಿ ಮಾಡಿದ್ದಾರೆ.

Advertisement

ಡ್ರೆಸ್ಸಿಂಗ್‌ ಮಾಡಬೇಕು: ತಾತ್ಕಾಲಿಕ ವಲಸೆ ನಿರಾಶ್ರಿತರ ಕೇಂದ್ರದಲ್ಲಿರುವ ಕೂಲಿ ಕಾರ್ಮಿಕರಲ್ಲಿ ಗಂಗಾವತಿ ಶಿವಣ್ಣ ಎನ್ನುವವರು ಕಾಲಿಗೆ ಗಂಭೀರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರತಿ 2 ದಿನಕ್ಕೊಮ್ಮೆ ಗಾಯಕ್ಕೆ ಔಷಧ ಹಚ್ಚಿ, ಬ್ಯಾಂಡೇಜ್‌ ಬದಲಾಯಿಸಬೇಕು. ಕೇಂದ್ರದಲ್ಲಿ ಇರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳನ್ನು ಕಾಡಿ ಬೇಡಿದ ಹಿನ್ನೆಲೆಯಲ್ಲಿ ಈಚೆಗೆ ವಿಮ್ಸ್ ನಲ್ಲಿ ಬದಲಾಯಿಸಿಕೊಂಡು ಬರಲಾಗಿದೆ. ಅಲ್ಲದೇ, ವಾಸಿಯಾಗಿದ್ದ ಗಾಯ, ಕೇಂದ್ರದಲ್ಲಿ ನೀಡುವ ಕೇವಲ ಅನ್ನವನ್ನು ತಿಂದು ಪುನಃ ನೊವು ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ನಮ್ಮನ್ನು ಬಿಟ್ಟರೆ ನಾವು ಹೋಗುತ್ತೇವೆ ಎಂದು ಅವರು ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ, ಏ.14ರ ನಂತರ ಇವರಿಗೆ ಕೇಂದ್ರದಿಂದ ಮುಕ್ತಿ ದೊರೆಯುತ್ತೋ ಅಥವಾ ಮುಂದುವರೆಯುತ್ತೋ ಎಂಬುದಕ್ಕೆ ಜಿಲ್ಲಾಡಳಿತವೇ ಸ್ಪಷ್ಟನೆ ನೀಡಬೇಕಾಗಿದೆ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next