ಬಳ್ಳಾರಿ: ನಗರದ ನಾಗರಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಾರತೀಯ ವೈದ್ಯಕೀಯ ಸಂಘದಿಂದ ವೈದ್ಯರ ದಿನಾಚರಣೆ ನಿಮಿತ್ತ ಜೂ.30 ರಂದು ಬೆಳಗ್ಗೆ 6 ಗಂಟೆಗೆ ಆರೋಗ್ಯಕ್ಕಾಗಿ ಓಟ (ರನ್ ಫಾರ್ ಹೆಲ್ತ್) ಎಂಬ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಾ.ಶ್ರೀನಿವಾಸಲು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾಯಿಲೆಗಳು ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆ ಬರದಂತೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಜು.1ರ ವೈದ್ಯಕೀಯ ದಿನಾಚರಣೆ ಹಿನ್ನೆಲೆಯಲ್ಲಿ ಜೂ.30 ರಂದು ಬೆಳಗ್ಗೆ 6 ಗಂಟೆಗೆ ಆರೋಗ್ಯಕ್ಕಾಗಿ ಓಟ (ರನ್ ಫಾರ್ ಹೆಲ್ತ್) ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಓಟದ ಸ್ಪರ್ಧೆಯಲ್ಲಿ ಸುಮಾರು 400 ರಿಂದ 500 ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 6 ಗಂಟೆಗೆ ನಗರದ ಐಎಂಎ ಭವನದಿಂದ ಆರಂಭವಾಗುವ ಆರೋಗ್ಯಕ್ಕಾಗಿ ಓಟ, ಗಡಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ ವೃತ್ತ, ಮೋತಿ ವೃತ್ತ, ಡಿಸಿ ಕಚೇರಿ, ಪುನಃ ಗಡಗಿ ಚನ್ನಪ್ಪ ವೃತ್ತ, ಕೋರ್ಟ್ ರಸ್ತೆ ಮೂಲಕ ಪುನಃ ಸಂಗಮ್ ವೃತ್ತಕ್ಕೆ ಬಂದು ಐಎಂಎ ಭವನಕ್ಕೆ ಮುಕ್ತಾಯಗೊಳ್ಳಲಿದೆ. ಆರೋಗ್ಯ ಕಾಪಾಡುವಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ವಹಿಸಲಿದೆ. ಹೀಗಾಗಿ ಕ್ರೀಡೆಗಳು ನಮ್ಮ ಸಂಸ್ಕೃತಿಯೂ ಆಗಿದೆ ಎಂಬುದನ್ನು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಈಗಾಗಲೇ 200ಕ್ಕೂ ಹೆಚ್ಚು ಜನರು ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಿಗೆ ಮಹಿಳೆಯರು, ಪುರುಷರಿಗೆ ಸಮಾನ ಬಹುಮಾನ ವಿತರಿಸಲಾಗುತ್ತದೆ. ಪ್ರಥಮ ಬಹುಮಾನ 5000 ರೂ, ದ್ವಿತೀಯ 3000, ತೃತೀಯ ಬಹುಮಾನ 2 ಸಾವಿರ ರೂ. ನೀಡಿ ಪ್ರೋತ್ಸಾಹಿಸಲಾಗುವುದು ಎಂದು ವಿವರಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ಡಾ. ಅರುಣಾ ಕಾಮಿನೇನಿ ಮಾತನಾಡಿ, ಮ್ಯಾರಥಾನ್ ಓಟ ಐದು ಕಿಮೀಗಳಷ್ಟಾಗಲಿದೆ. ರೋಗಗಳು ಬರದಂತೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ಈ ಓಟದ ಮುಖ್ಯ ಉದ್ದೇಶವಾಗಿದೆ ಎಂದರು.
ವೈದ್ಯರ ದಿನಾಚರಣೆ ನಿಮಿತ್ತ ಜುಲೈ 21ರಂದು ನಗರದ ಅಲ್ಲಂ ಭವನದಲ್ಲಿ ವೈದ್ಯಕೀಯ ದಿನಾಚರಣೆ ಹಮ್ಮಿಕೊಳ್ಳುವುದರ ಜತೆಗೆ ರಾಜ್ಯಮಟ್ಟದ ಮಹಿಳಾ ವೈದ್ಯರ ಸಮ್ಮೇಳನ ಆಯೋಜಿಸಲಾಗುತ್ತಿದೆ. ಮೊದಲ ಬಾರಿಗೆ ಬಳ್ಳಾರಿಯಲ್ಲಿ ಆಯೋಜಿಸಲಾಗುತ್ತಿದ್ದು, ವಿವಿಧ ಶಾಖೆಗಳಿಂದ 500ಕ್ಕೂ ಹೆಚ್ಚು ಮಹಿಳಾ ವೈದ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಬಾಳೆಕುಂದ್ರಿ, ತೇಜಸ್ವಿನಿ ಅನಂತಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಒತ್ತಡ ನಿವಾರಿಸಿಕೊಂಡು ವೈದ್ಯ ವೃತ್ತಿಯನ್ನು ಸಮರ್ಥವಾಗಿ ನಿಭಾಯಿಸುವುದು ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಜತೆಗೆ ನಗರದಲ್ಲಿ ಸುಮಾರು 200 ಸಸಿಗಳನ್ನು ನಾಟಿ ಮಾಡಲಾಗುತ್ತದೆ.
ಈಚೆಗೆ ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಸೇರಿ ಇತ್ತೀಚಿನ ದಿನಗಳಲ್ಲಿ ಹಲ್ಲೆ, ಹಿಂಸೆಗಳು ಹೆಚ್ಚುತ್ತಿವೆ. ಇಂಥ ಘಟನೆಗಳಿಂದ ವೈದ್ಯ ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಮನೋಭಾವ ಹೆಚ್ಚುತ್ತಿದೆ. ಅದಕ್ಕಾಗಿ ಕೌನ್ಸೆಲಿಂಗ್ ಸಹ ನೀಡಲಾಗುತ್ತಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಐಎಂಎ ಮಾಜಿ ಅಧ್ಯಕ್ಷ ಡಾ. ವೈ.ಯೋಗಾನಂದರೆಡ್ಡಿ ಮಾತನಾಡಿದರು. ಡಾ.ಎಚ್.ಎಸ್.ಗೋವರ್ಧನ ರೆಡ್ಡಿ, ಡಾ. ವಿ.ಜೆ.ಭರತ್ ಸೇರಿದಂತೆ ಹಲವರು ಇದ್ದರು.