Advertisement

ದೂರು-ದುಮ್ಮಾನ ಶೀಘ್ರ ಇತ್ಯರ್ಥ

07:52 PM Feb 29, 2020 | |

ಬಳ್ಳಾರಿ: ಸಾರ್ವಜನಿಕರು ಸಲ್ಲಿಸಿರುವ ದೂರು-ದುಮ್ಮಾನಗಳನ್ನು ಶೀಘ್ರವಾಗಿ ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಅಹವಾಲು ಆಲಿಕೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾವು ನೀಡಿರುವ ಎಲ್ಲ ದೂರುಗಳನ್ನು ಗಮನಿಸಲಾಗಿದೆ. ಅವುಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು. ಸಾರ್ವಜನಿಕರು ಇ-ಸ್ಪಂದನದ ಮೂಲಕವೂ ದೂರು ಸಲ್ಲಿಸಬಹುದು ಎಂದರು.

ನಗರದ ಮುಂಡ್ರಿಗಿ ಪ್ರದೇಶದ 1ನೇ ಸ್ಟೇಜ್‌ನಲ್ಲಿ ಒಳಚರಂಡಿ ಮಾಡುವಂತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮಹಾತ್ಮಾಗಾಂಧಿ ಲೇಬರ್‌ ಯೂನಿಯನ್‌ ಅವರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ತುರ್ತಾಗಿ ಕಾಮಗಾರಿಗಳನ್ನು ಕಾರ್ಯರೂಪಕ್ಕೆ ತರಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

2015-16ನೇ ಸಾಲಿನ ಗ್ರಾಮವಿಕಾಸ ಯೋಜನೆಯಡಿ ಆಯ್ಕೆಯಾದ ಕಂಪ್ಲಿ ವಿಧಾನಸಭಾ ಕ್ಷೇತದ ಕರ್ಚೇಡು ಗ್ರಾಮ ಮತ್ತು ಹಂದ್ಯಾಳು ಗ್ರಾಮದ ಕಾಮಗಾರಿಗಳು ಪೂರ್ಣ ಪ್ರಮಾಣದಲ್ಲಿ ಪೂರ್ಣಗೊಂಡಿಲ್ಲ. ತಾವುಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಬಳ್ಳಾರಿ ನಗರದ ಕಂಟೋನ್ಮೆಂಟ್‌ ಪ್ರದೇಶದಲ್ಲಿರುವ ಪ್ರಶಾಂತ್‌ ಕಾಲೋನಿ ಬಜಾಜ್‌ ಶೊರೂಂ ಹಿಂಭಾಗದಲ್ಲಿ ಒಳಚರಂಡಿಯು 3 ಅಡಿ ರಸ್ತೆಗಿಂತ ಕೆಳಗೆ ಇದ್ದು, ಒಳಚರಂಡಿ ತುಂಬಿ ಹರಿಯುತ್ತದೆ. ಇದರಿಂದ ಅಲ್ಲಿ ವಾಸಿಸಲು ಬಹಳ ಕಷ್ಟಕರವಾಗಿದೆ. ವಿಧವಾ ವೇತನಕ್ಕಾಗಿ ಅರ್ಜಿಯನ್ನು ಹಲವು ಬಾರಿ ಸಲ್ಲಿಸಿದರೂ ತಿರಸ್ಕೃತವಾಗುತ್ತಿದ್ದು, ಇನ್ನೂ ಅನುಮತಿ ನೀಡಿಲ್ಲ, ನನ್ನ ಜೀವನ ಮಾಡುವುದು ಕಷ್ಟಕರವಾಗಿದೆ ದಯಮಾಡಿ ತಾವುಗಳು ಮಾಶಾಸನ ಮಾಡಿಸಿಕೊಡಬೇಕು ಎಂಬ ದೂರುಗಳು ಸಭೆಯಲ್ಲಿ ವ್ಯಕ್ತವಾದವು.

ರಾಮಯ್ಯ ಕಾಲೋನಿಯಲ್ಲಿ ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಮನವಿ ಹಾಗೂ ರಾಜೀವ್‌ ಗಾಂಧಿ ವಸತಿನಿಲಯದ ವತಿಯಿಂದ ನೀಡಲಾದ ಬಸವ ವಸತಿ ಯೋಜನೆಯಡಿಯಲ್ಲಿ ನೀಡಲಾಗಿರುವ ಅರ್ಜಿದಾರರ ಹೆಸರು ತಿದ್ದುಪಡಿ ಹಾಗೂ ವಂಚನೆ, ಖಾತಾ ಬದಲಾವಣೆ, ಫಾರಂ-3, ಉದ್ಯಾನವನ ಅಭಿವೃದ್ಧಿ, ಉದ್ಯೋಗ ನೀಡುವಂತೆ ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಜಿಲ್ಲಾಡಳಿತ, ಜಿಪಂ, ಪೊಲೀಸ್‌ ಇಲಾಖೆ, ಮಹಾನಗರಪಾಲಿಕೆ, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರ, ಸಹಾಯಕ ಆಯುಕ್ತರು, ಕಾರ್ಮಿಕ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ತಹಶಿಲ್ದಾರರು, ಆಯುಷ್‌ ಇಲಾಖೆ, ಭೂಮಿ ಶಾಖೆ, ಭೂ ಪರಿವರ್ತನೆ ಶಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಸೇರಿದಂತೆ ಇತರೆ ಇಲಾಖೆಗಳಿಗೆ ಒಟ್ಟು 40ಕ್ಕೂ ಹೆಚ್ಚು ದೂರು-ಸಮಸ್ಯಾತ್ಮಕ ಅರ್ಜಿಗಳನ್ನು ಸ್ವೀಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next