Advertisement

ಉಪ ಚುನಾವಣೆ:ಶಾಂತಾ v/s ಉಗ್ರಪ್ಪ 

06:00 AM Oct 16, 2018 | Team Udayavani |

ಬೆಂಗಳೂರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೊನೇ ಕ್ಷಣದ ಅಚ್ಚರಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ
ವಿ.ಎಸ್‌. ಉಗ್ರಪ್ಪ ಅವರನ್ನು ಕಣಕ್ಕಿಳಿಸಲಾಗಿದೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಶಾಸಕರಲ್ಲೇ ಎರಡು ಗುಂಪುಗಳು ಪೈಪೋಟಿ ನಡೆಸಿದ್ದರಿಂದ ಸ್ಥಳೀಯ ನಾಯಕರ ಗೊಂದಲ ನಿವಾರಿಸಲು ಜಿಲ್ಲೆಯವರಲ್ಲದ ವಿಧಾನ ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಅವರಿಗೆ ಟಿಕೆಟ್‌ ನೀಡುವ ಮೂಲಕ ಯಾರೂ ವಿರೋಧ ವ್ಯಕ್ತಪಡಿಸದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಲಾಗಿದೆ.

Advertisement

ಮತ್ತೂಂದೆಡೆ ನಾಯಕ ಸಮುದಾಯದಲ್ಲಿ ಪ್ರಭಾವಿಯಾಗಿರುವ ವಿ.ಎಸ್‌.ಉಗ್ರಪ್ಪ, ಬಿಜೆಪಿಯ ಅಭ್ಯರ್ಥಿ ಶ್ರೀರಾಮುಲು ಸಹೋದರಿ ಶಾಂತಾ ಅವರ ವಿರುದ್ಧ ಹೋರಾಟಕ್ಕೆ ಸೂಕ್ತ ಅಭ್ಯರ್ಥಿ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದಾಗಿದೆ.

ಬಳ್ಳಾರಿಯಲ್ಲಿ ಶಾಸಕ ಬಿ. ನಾಗೇಂದ್ರ ಸಹೋದರ ವೆಂಕಟೇಶ್‌ ಪ್ರಸಾದ್‌ಗೆ ಟಿಕೆಟ್‌ ನೀಡಿದರೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವುದಿಲ್ಲ ಎಂದು ಶಾಸಕರು ಮತ್ತು ಜಿಲ್ಲಾ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ವೆಂಕಟೇಶ್‌ ಪ್ರಸಾದ್‌ ಹೊರತು ಪಡೆಸಿ ಜಿಲ್ಲೆಯಲ್ಲಿ 12 ಕ್ಕೂ ಹೆಚ್ಚು ಜನರು ಟಿಕೆಟ್‌ ಆಕಾಂಕ್ಷಿಗಳಾಗಿದ್ದರು, ಆದರೆ, ಶ್ರೀರಾಮುಲು ಸಹೋದರೆ ಜೆ. ಶಾಂತಾ ವಿರುದ್ಧ ಸ್ಪರ್ಧೆ ಮಾಡುವಪ್ರಭಾವಿಗಳು ಸಿಗದ ಕಾರಣ ರಾಜ್ಯ ನಾಯಕರು ಹೊರಗಿನ ಅಭ್ಯರ್ಥಿ ಆಯ್ಕೆಗೆ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ವಿ.ಎಸ್‌. ಉಗ್ರಪ್ಪ ವಾಲ್ಮೀಕಿ ಸಮುದಾಯದ ರಾಜ್ಯ ನಾಯಕರಾಗಿದ್ದು ಅಲ್ಲದೇ ಬಳ್ಳಾರಿ ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಪಕ್ಷದ ನಾಯಕರಾಗಿದ್ದಾಗ ತನಿಖೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅಲ್ಲದೇ ರಾಜ್ಯದಲ್ಲಿ ವಾಲ್ಮೀಕಿ ಪೀಠ ಸ್ಥಾಪನೆ, ಶಾಸಕರ ಭವನ ಆವರಣದಲ್ಲಿ ವಾಲ್ಮೀಕಿ ಪ್ರತಿಮೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದರಿಂದ ಎಸ್ಟಿ ಸಮುದಾಯದ ಮತಗಳನ್ನು ಸೆಳೆಯಲು ಅನುಕೂಲವಾಗುತ್ತದೆ ಎನ್ನುವುದು ಕಾಂಗ್ರೆಸ್‌ ನಾಯಕರ ವಾದ.

ಉಗ್ರಪ್ಪ ಹೊರಗಿನ ಅಭ್ಯರ್ಥಿ ಎಂದು ಸ್ಥಳೀಯ ನಾಯಕರು ಪರೋಕ್ಷವಾಗಿ ಅಪಸ್ವರ ಎತ್ತಿದ್ದರೂ, ಬಹಿರಂಗವಾಗಿ ಯಾರೂ ಬಂಡಾಯದ ಬಾವುಟ ಹಾರಿಸದಿರುವುದರಿಂದ ಎಲ್ಲರನ್ನು ಒಗ್ಗೂಡಿಸಿಕೊಂಡು ಉಗ್ರಪ್ಪ ಅವರನ್ನು ಗೆಲ್ಲಿಸಿಕೊಂಡು ಬರಬಹುದು ಎನ್ನುವುದು ರಾಜ್ಯ ನಾಯಕರ ಲೆಕ್ಕಾಚಾರವಾಗಿದೆ.

Advertisement

ವಿರೋಧಿಸಿದವರಿಗೇ ಉಸ್ತುವಾರಿ!: ಮಂಡ್ಯ ಹಾಗೂ ರಾಮನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದನ್ನು ವಿರೋಧಿಸಿರುವ ಸ್ಥಳೀಯ ನಾಯಕರಾದ ಮಾಜಿ ಚಲುವರಾಯಸ್ವಾಮಿ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಅವರಿಗೆ ಎರಡೂ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

ಮಂಡ್ಯದಲ್ಲಿ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಉಸ್ತುವಾರಿಯಲ್ಲಿ 17 ಜನರಿಗೆ ವಿವಿಧ ರೀತಿಯ ಜವಾಬ್ದಾರಿ ವಹಿಸಲಾಗಿದ್ದು,
ಚೆಲುವರಾಯಸ್ವಾಮಿಯನ್ನು ಸಹ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಅದೇ ರೀತಿ ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿ ಆರು ಜನರನ್ನು ಸಹ ಉಸ್ತುವಾರಿಯಾಗಿ ನೇಮಿಸಲಾಗಿದೆ. ಅದರಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ಮಾಡುವುದಿಲ್ಲ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿರುವ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಕೂಡ ಸೇರಿದ್ದಾರೆ. ಈ ಇಬ್ಬರೂ ನಾಯಕರು ತಮ್ಮ ಬಹಿರಂಗ ವಿರೋಧದ ನಡುವೆಯೇ ಪಕ್ಷದ ನಾಯಕರು ನೀಡಿರುವ ಜವಾಬ್ದಾರಿ ವಹಿಸಿದ್ದನ್ನು ಪಾಲಿಸುತ್ತಾರೆಯೋ ಇಲ್ಲವೋ ಎನ್ನುವುದು ಕುತೂಹಲ ಮೂಡಿಸಿದೆ.

64 ಜನ ಉಸ್ತುವಾರಿ
ಬಳ್ಳಾರಿ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ 20 ವರ್ಷಗಳ ನಂತರ ಕ್ಷೇತ್ರವನ್ನು ಮರಳಿ ಪಡೆಯಲು ದೊಡ್ಡ ಪ್ರಮಾಣದಲ್ಲಿ ಕಾರ್ಯತಂತ್ರ ಹೆಣೆದಿದೆ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಉಸ್ತುವಾರಿಯಲ್ಲಿ 64 ಜನರ ದೊಡ್ಡ ತಂಡವನ್ನೇ ಬಳ್ಳಾರಿ ಚುನಾವಣೆಗೆ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಒಂದೊಂದು ವಿಧಾನಸಭೆ ಕ್ಷೇತ್ರಕ್ಕೆ ಒಬ್ಬೊಬ್ಬರಿಗೆ ಉಸ್ತುವಾರಿ ಕೊಟ್ಟು 6 ಜನ ಸಚಿವರು, ಸಂಸದರು, ಮಾಜಿ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರನ್ನೊಳಗೊಂಡ 64 ಜನರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ.

ಡಿ.ಕೆ.ಶಿವಕುಮಾರ್‌ ಕೆಳಗೆ
ರಮೇಶ್‌ ಜಾರಕಿಹೊಳಿ

ಬೆಳಗಾವಿ ಜಿಲ್ಲೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಹಸ್ತಕ್ಷೇಪವನ್ನು ವಿರೋದಿಸಿದ್ದ ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿಯನ್ನು ಡಿ.ಕೆ. ಶಿವಕುಮಾರ್‌ ಕೈ ಕೆಳಗೆ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ವಹಿಸಲಾಗಿದೆ. ಆದರೆ, ಸಚಿವ ರಮೇಶ್‌ ಜಾರಕಿಹೊಳಿ
ಪಕ್ಷದ ಈ ಆದೇಶವನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ನನ್ನನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿರುವುದಕ್ಕೆ ಪಕ್ಷದ ಎಲ್ಲ ವರಿಷ್ಠರಿಗೆ ಧನ್ಯವಾದ ಅರ್ಪಿಸುತ್ತೇನೆ. ಆ ಭಾಗದ ಅಭಿವೃದ್ಧಿ ದೃಷ್ಠಿಯಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿಛಿಗೆ ಶ್ರಮಿಸುತ್ತೇನೆ.
– ವಿ.ಎಸ್‌. ಉಗ್ರಪ್ಪ,
ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next