ಬಳ್ಳಾರಿ: ಕೋವಿಡ್ ವೈರಸ್, ಲಾಕ್‌ಡೌನ್ ನಿಮಿತ್ತ ಎಲ್ಲ ಕ್ಷೇತ್ರಗಳು ಬಂದ್ ಆಗಿದ್ದರೂ ಗ್ರಾಮೀಣ ಭಾಗದಲ್ಲಿ ಕೃಷಿ ಕೂಲಿ ಕಾರ್ಮಿಕರನ್ನು ಉದ್ಯೋಗ ಖಾತ್ರಿ ಯೋಜನೆ ಕೈ ಹಿಡಿದಿರುವುದು ನೆಮ್ಮದಿ ಮೂಡಿಸಿದರೆ, ವೈರಸ್ ಹಿನ್ನೆಲೆಯಲ್ಲಿ ಸೀಮಿತ ಜನರಿಗಷ್ಟೇ ಕೆಲಸ ನೀಡಬೇಕಿರುವುದು ಬೇಸರ ಮೂಡಿಸಿದೆ.
ಕೋವಿಡ್ ವೈರಸ್ ನಿಯಂತ್ರಿಸುವ ಸಲುವಾಗಿ ಲಾಕ್‌ಡೌನ್ ಜಾರಿಗೊಳಿಸಿರುವ ಪರಿಣಾಮ ಎಲ್ಲ ಕ್ಷೇತ್ರಗಳು ಬಂದ್ ಆಗಿವೆ. ಆದರೆ, ಗ್ರಾಮೀಣ ಭಾಗದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯು ಕೃಷಿ ಕೂಲಿ ಕಾರ್ಮಿಕರ ಕೈ ಹಿಡಿದಿದೆ. ಕೊರೊನಾ ಕಂಟಕದಿಂದ ಎಲ್ಲ ಕ್ಷೇತ್ರಗಳು ಬಂದ್ ಆಗಿರುವ ಇಂಥ ತುರ್ತು ಸಂದರ್ಭದಲ್ಲಿ ಎಲ್ಲೆಡೆ ನರೇಗಾ ಯೋಜನೆ ಚಾಲನೆಯಲ್ಲಿದ್ದು, ಕೃಷಿ ಕಾರ್ಮಿಕರ ಅಲ್ಪಪ್ರಮಾಣದ ಆರ್ಥಿಕ ಸಂಕಷ್ಟವನ್ನು ನೀಗಿಸುವಲ್ಲಿ ಯಶಸ್ವಿಯಾಗಿದೆ.
90 ಲಕ್ಷ ಮಾನವ ದಿನಗಳ ಸೃಜನೆ: ಬಳ್ಳಾರಿ ಜಿಲ್ಲಾ ಪಂಚಾಯಿತಿಯು ಪ್ರಸಕ್ತ 2020-2021ನೇ ಸಾಲಿನ ಏಪ್ರಿಲ್ 1ರಿಂದ ಒಟ್ಟು 90 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿದೆ. ಏಪ್ರಿಲ್ ತಿಂಗಳಲ್ಲೇ 18 ಲಕ್ಷ ಮಾನವ ದಿನಗಳ ಗುರಿ ಹೊಂದಲಾಗಿತ್ತು. ಆದರೆ ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಕೊಂಚಮಟ್ಟಿಗೆ ಹಿನ್ನಡೆಯಾಗಿದೆ. ಈ ವರೆಗೆ ಬಳ್ಳಾರಿ ತಾಲೂಕು 8313, ಹಡಗಲಿ 3859, ಹಗರಿಬೊಮ್ಮನಹಳ್ಳಿ 3873, ಹರಪನಹಳ್ಳಿ 2180, ಹೊಸಪೇಟೆ 3329, ಕೂಡ್ಲಿಗಿ 4465, ಸಂಡೂರು 5483, ಸಿರುಗುಪ್ಪ 2233 ಸೇರಿ ಒಟ್ಟು 33,735 ಜನರು ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಏಪ್ರಿಲ್ 1ರಿಂದ ಏ. 21ರವರೆಗೆ ಸರಾಸರಿ 15 ಲಕ್ಷ ಮಾನವ ದಿನಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿಯ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ.
2053 ಕಾಮಗಾರಿಗಳು: ಉದ್ಯೋಗ ಖಾತ್ರಿ ಯೋಜನೆಯಡಿ ಹೊಲಗಳಲ್ಲಿನ ಬದು ನಿರ್ಮಾಣ, ಖಾಸಗಿ ತೋಟಗಳಲ್ಲಿನ ಬೋರ್‌ವೆಲ್ ರೀಚಾರ್ಜ್‌ಫೀಟ್ ನಿರ್ಮಾಣ ಕಾಮಗಾರಿ, ವೈಯಕ್ತಿಕ ಇಂಗುಗುಂಡಿ ನಿರ್ಮಾಣ, ಸಾಮಾಜಿಕ ಅರಣ್ಯ ಇಲಾಖೆಯವರು ಗಿಡಗಳನ್ನು ನೆಡಲು ಸೂಚಿಸಿರುವ ಸರ್ಕಾರಿ ಜಾಗದಲ್ಲಿ ಗುಂಡಿಗಳನ್ನು ತೋಡುವುದು, ಅರಣ್ಯ ಪ್ರದೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆಯ ಕಾಮಗಾರಿಗಳು, ಕೆರೆ ಹೂಳೆತ್ತುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಬಳ್ಳಾರಿ ತಾಲೂಕು 366, ಹಡಗಲಿ 324, ಹಗರಿಬೊಮ್ಮನಹಳ್ಳಿ 277, ಹರಪನಹಳ್ಳಿ, 230, ಹೊಸಪೇಟೆ 310, ಕೂಡ್ಲಿಗಿ 305, ಸಂಡೂರು 134, ಸಿರುಗುಪ್ಪ 107 ಕಾಮಗಾರಿಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 2053 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಚಾಲನೆಯಲ್ಲಿವೆ.
ನರೇಗಾಕ್ಕೂ ಕೋವಿಡ್ ಕಂಟಕ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳು ಬಂದ್ ಆಗಿರುವುದರ ನಡುವೆಯೂ ನರೇಗಾ ಕಾಮಗಾರಿ ಚಾಲನೆ ಪಡೆದುಕೊಂಡಿರುವುದು ಕೃಷಿ ಕಾರ್ಮಿಕರಲ್ಲಿ ಒಂದಷ್ಟು ನೆಮ್ಮದಿ ಮೂಡಿಸಿದರೆ, ವೈರಸ್ ಎಫೆಕ್ಟ್ನಿಂದಾಗಿ ನಿಗದಿತ ಗುರಿಯಂತೆ ಒಂದೇ ಕಡೆ ನಿರೀಕ್ಷಿತ ಕೃಷಿ ಕಾರ್ಮಿಕರಿಗೆ ಕೆಲಸ ನೀಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಕೇವಲ 10ರಿಂದ 15 ಜನರಿಗೆ ಮಾತ್ರ ಕೆಲಸ ನೀಡಬೇಕು. ಮಾಸ್ಕ್ ಧರಿಸಿರಬೇಕು. ಸ್ಯಾನಿಟೈಜರ್ ನೀಡಬೇಕು. ಜತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿದೆ. ಇಂಥ ತುರ್ತು ಪರಿಸ್ಥಿತಿ ಸಂದರ್ಭದಲ್ಲೂ ಕೃಷಿ ಕಾರ್ಮಿಕರಿಗೆ ನರೇಗಾ ಅಡಿ ಕೆಲಸ ದೊರೆಯುತ್ತಿರುವುದು ರೈತರಲ್ಲಿ ನೆಮ್ಮದಿ ಮೂಡಿಸಿದರೂ, ನಿಗದಿತ ಗುರಿ ತಲುಪುವಲ್ಲಿ ಬಳ್ಳಾರಿ ಜಿಪಂಗೆ ಹಿನ್ನಡೆಯಾದಂತಾಗಿದೆ.
ವೆಂಕೋಬಿ ಸಂಗನಕಲ್ಲು