ಬಳ್ಳಾರಿ: ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ ಬಡ, ಕೂಲಿ ಕಾರ್ಮಿಕರಿಗೆ ವಿತರಿಸುವ ಸಲುವಾಗಿ ಪಾಲಿಕೆ ಸದಸ್ಯ ಎಂ. ಗೋವಿಂದರಾಜುಲು ಅವರು 2 ಸಾವಿರ ರೇಷನ್‌ಕಿಟ್‌ಗಳನ್ನು ಸಿದ್ಧಪಡಿಸಿದ್ದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಪ್ಪ ಪರಿಶೀಲನೆ ನಡೆಸಿದರು.
ಇಲ್ಲಿಯವರೆಗೆ ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ ಮುಖಂಡ ಎಂ. ಗೋವಿಂದರಾಜಲು ಅವರು ತಮ್ಮದೇ ಸ್ವಯಂ ಸೇವಕರ ಪಡೆ ಕಟ್ಟಿಕೊಂಡು ಆಹಾರ ಪೊಟ್ಟಣಗಳು, ಪಡಿತರ ಕಿಟ್ ಗಳನ್ನು ವಿತರಿಸುವ ಮೂಲಕ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿರುವುದಕ್ಕೆ ಜಿಲ್ಲಾಡಳಿತ ಶ್ಲಾಘನೆ ವ್ಯಕ್ತಪಡಿಸಿದೆ.
ಗೋವಿಂದರಾಜಲು ಅವರು ಈಗಾಗಲೇ ಲಾಕ್‌ಡೌನ್ ಆದ ದಿನದಿಂದ ಇಲ್ಲಿಯವರೆಗೂ ವಿಮ್ಸ್ ಆವರಣದಲ್ಲಿ 25 ಸಾವಿರ ಆಹಾರ ಪೊಟ್ಟಣಗಳು, ಕೌಲ್ ಬಜಾರ್ ಏರಿಯಾದ ಅನೇಕ ಭಾಗಗಳಲ್ಲಿ 2500 ರೇಷನ್ ಕಿಟ್ ಗಳನ್ನು ವಿತರಿಸಿದ್ದಾರೆ. ಮತ್ತೇ ಪುನಃ ನಗರದ ವಿವಿಧ ಭಾಗಗಳಲ್ಲಿ 2 ಸಾವಿರಕ್ಕೂ ಹೆಚ್ಚು ರೇಷನ್ ಕಿಟ್ ಗಳನ್ನು (ಅಕ್ಕಿ, ಬೇಳೆ,ಗೋಧಿ ಹಿಟ್ಟು, ಎಣ್ಣೆ ಸೇರಿದಂತೆ ಅವಶ್ಯಕ ಆಹಾರ ಪದಾರ್ಥಗಳು) ವಿತರಿಸುವ ನಿಟ್ಟಿನಲ್ಲಿ ತನ್ನ ಸ್ವಯಂಸೇವಕರ ಪಡೆಯೊಂದಿಗೆ ಸಿದ್ದತೆ ನಡೆಸುತ್ತಿದ್ದು, ಈ ಸ್ಥಳಕ್ಕೆ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕರು ಹಾಗೂ ಕೋವಿಡ್-19 ಜಿಲ್ಲಾ ಆಹಾರ ವಿತರಣಾ ಉಸ್ತುವಾರಿ ಅಧಿಕಾರಿ ರಾಜಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಡಿತರ ಕಿಟ್‌ಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತೀವ್ರ ತೊಂದರೆಯಲ್ಲಿರುವ ಜನರಿಗೆ ವಿತರಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿರುವುದು ಸಂತಸ ತಂದಿದೆ. ತಮಗೆ ಪಾಸ್, ಅನುಮತಿ ಸೇರಿದಂತೆ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಗೋವಿಂದರಾಜಲು ಮತ್ತಿತರರು ಇದ್ದರು.