Advertisement

ಗಣಿಜಿಲ್ಲೆಯ ಕೋವಿಡ್ ಮುಕ್ತ ಕನಸು ಭಗ್ನ

12:41 PM May 09, 2020 | |

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕೋವಿಡ್ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಕಳೆದ ನಾಲ್ಕು ದಿನಗಳಲ್ಲಿ ಮತ್ತೆರಡು ಕೋವಿಡ್‌-19 ಸೋಂಕು ಪತ್ತೆಯಾಗಿದ್ದು, ಕೊರೊನಾ ಮುಕ್ತವಾಗುವ ಕನಸು ಭಗ್ನವಾದಂತಾಗಿದೆ.

Advertisement

ಬಳ್ಳಾರಿಯಲ್ಲಿ ಈವರೆಗೆ ಒಟ್ಟು 15 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಮಾ.30 ರಂದು ಹೊಸಪೇಟೆ ಎಸ್‌.ಆರ್‌.ನಗರದಲ್ಲಿ ಒಂದೇ ಕುಟುಂಬದ ಮೂವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಇದರಿಂದ ಜಿಲ್ಲೆಯ ಜನರು ಆತಂಕಕ್ಕೊಳಗಾಗಿದ್ದರು. ಏ.2 ರಂದು ಜಿಲ್ಲೆಯ ಸಿರುಗುಪ್ಪ ತಾಲೂಕು ಎಚ್‌. ಹೊಸಳ್ಳಿಯಲ್ಲಿ 14 ವರ್ಷದ ಬಾಲಕನಿಗೆ, ಏ.4 ರಂದು ಹೊಸಪೇಟೆಯ ಸೋಂಕಿತ ಕುಟುಂಬದಲ್ಲೇ ಮತ್ತೂಬ್ಬರಿಗೆ, ಏ.5 ರಂದು ಬಳ್ಳಾರಿ ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ 41 ವರ್ಷದ ವ್ಯಕ್ತಿಗೆ ಹಾಗೂ ಏ.16 ರಂದು ಹೊಸಪೇಟೆ ಸೋಂಕಿತ ಕುಟುಂಬದ ಇನ್ನು ಏಳು ಜನರಿಗೆ ಸೋಂಕು ದೃಢಪಟ್ಟಿದ್ದು, ಆಘಾತ ಮೂಡಿಸಿತ್ತು. ಆದರೆ, ಇತ್ತೀಚೆಗೆ ಸೋಂಕಿತರು ಗುಣಮುಖರಾಗಿ ಮನೆ ಸೇರುತ್ತಿರುವುದು ಜಿಲ್ಲೆಯ ಜನರು ಕೊಂಚಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದರು. ಇದೀಗ ನಗರದ ಕೌಲ್‌ಬಜಾರ್‌ನ ಒಬ್ಬರು ಮತ್ತು ಸಂಡೂರು ತಾಲೂಕು ಕೃಷ್ಣಾನಗರದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದ ಗಣಿಜಿಲ್ಲೆಯ ಕೋವಿಡ್ ಮುಕ್ತ ಕನಸು ಭಗ್ನವಾಗಿದಂತಾಗಿದೆ.

ಒಬ್ಬರ ನಂತರ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳುತ್ತಿದ್ದಾರೆ. ಈಗಾಗಲೇ ಹೊಸಪೇಟೆಯ ಒಂದೇ ಕುಟುಂಬದ 11
ಜನರ ಪೈಕಿ 10 ಜನ ಗುಣಮುಖರಾಗಿ ಮನೆ ಸೇರಿದ್ದಾರೆ. ಬಳ್ಳಾರಿಯ ಗುಗ್ಗರಹಟ್ಟಿಯ ಒಬ್ಬರು ಸಹ ಗುಣವಾಗಿ ಬಿಡುಗಡೆಯಾಗಿದ್ದಾರೆ. ಇದರಿಂದ ಉತ್ಸಾಹಗೊಂಡಿದ್ದ ಜಿಲ್ಲಾಡಳಿತ ಶೀಘ್ರ ನಮ್ಮ ಜಿಲ್ಲೆ ಕೋವಿಡ್ ಮುಕ್ತವಾಗಲಿದೆ ಎಂಬ ಆಶಾಭಾವ ಸಹ ವ್ಯಕ್ತಪಡಿಸಿತ್ತು. ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಅವರೇ ತಮ್ಮ ಮೊದಲ ಸಭೆಯಲ್ಲೇ “ಬಳ್ಳಾರಿ ಜಿಲ್ಲೆ ಶೀಘ್ರದಲ್ಲೇ ಕೋವಿಡ್ ಮುಕ್ತವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಮೇ 4 ರಂದು ಮತ್ತು ಮೇ 8 ರಂದು ಬಂದ ವರದಿಯನ್ವಯ ಜಿಲ್ಲೆಯಲ್ಲಿ ಮತ್ತೆರಡು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಭಯದ ವಾತಾವರಣ ಮೂಡಿಸಿದೆ.

ಬಳ್ಳಾರಿ ನಗರದ ಕೌಲ್‌ಬಜಾರ್‌ ಪ್ರದೇಶದ 14, ನೆರೆಯ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕಣೇಕಲ್‌ ಗ್ರಾಮದ 4 ಸೇರಿ ಒಟ್ಟು 18 ಜನ ಲಾಕ್‌ ಡೌನ್‌ಗೂ ಮುನ್ನ ತೀರ್ಥಯಾತ್ರೆಗೆ ಹೋಗಿದ್ದಾರೆ. ಲಾಕ್‌ಡೌನ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಉತ್ತರಾಖಂಡ್‌ನ‌ ಲುಡಿಕಿ ಎಂಬಲ್ಲಿ ಲಾಡ್ಜ್ನಲ್ಲಿ ತಂಗಿದ್ದರು. ಈ ವೇಳೆ ಸ್ಥಳೀಯ ಶಾಸಕರು ಸಹ ಆರ್ಥಿಕ ನೆರವು ನೀಡಿದ್ದಾರೆ. ಹೀಗೆ 37 ದಿನ ಲಾಡ್ಜ್ ನಲ್ಲಿಯೇ ತಂಗಿದ್ದ ಇವರು ಬಳ್ಳಾರಿ ಮೂಲದ ಐಪಿಎಸ್‌ ಅಧಿಕಾರಿಯೊಬ್ಬರ ಸಹಾಯದಿಂದ ಅಲ್ಲಿನ ಜಿಲ್ಲಾಡಳಿತದ ಅನುಮತಿ ಪಡೆದುಕೊಂಡು ಮೇ 2 ರಂದು ಬಳ್ಳಾರಿಗೆ ವಾಪಸ್‌ ಆಗಿದ್ದರು. ಈ ವೇಳೆ ಜಿಲ್ಲಾಡಳಿತ ಇವರನ್ನು ಪರೀಕ್ಷೆಗೆ ಒಳಪಡಿಸಿ, ಗಂಟಲು ದ್ರವ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಈ ಪೈಕಿ 17 ಜನರ ವರದಿ ನೆಗಟಿವ್‌ ಎಂದು ಬಂದಿದ್ದು, ಕೌಲ್‌ ಬಜಾರ್‌ ಪ್ರದೇಶದ ನಿವಾಸಿಯೊಬ್ಬರ ವರದಿ ಪಾಸಿಟಿವ್‌ ಬಂದಿದೆ. ಇದೀಗ ಇಡೀ ಕೌಲ್‌ ಬಜಾರ್‌ ಪ್ರದೇಶವನ್ನು ಕಂಟೇನ್ಮೆಂಟ್‌ ಝೋನ್‌ ಮಾಡಲಾಗಿದೆ. ಮೊದಲೇ ದುಡಿದು ತಿನ್ನುವ ಜನರೇ ಹಚ್ಚಿರುವ ಈ ಪ್ರದೇಶದಲ್ಲಿ ಸೋಂಕಿತ ವಾಸ ಮಾಡುವ ಮನೆ, ಆತ ಓಡಾಡಿದ ಪ್ರದೇಶ ಸೇರಿ ಒಂದು ಕಿಮೀ ವ್ಯಾಸದ ಪ್ರದೇಶವನ್ನು ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಲಾಗಿದೆ.

ಅದೇ ರೀತಿ ಸಂಡೂರು ತಾಲೂಕು ಕೃಷ್ಣಾನಗರದಲ್ಲಿ 37 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇವರು, ನೆರೆಯ ದಾವಣಗೆರೆ ಜಿಲ್ಲೆಯಿಂದ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಇವರ ಪ್ರಥಮ ಸಂಪರ್ಕಿತರ ಮಾಹಿತಿ ಸಂಗ್ರಹಿಸುವಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ನಿರತವಾಗಿದೆ.

Advertisement

ಕೌಲ್‌ಬಜಾರ್‌ನಲ್ಲಿ ಬರಬಾರದಿತ್ತು!: ಜಿಲ್ಲೆಯಲ್ಲಿ ಕೊವಿಡ್‌-19 ಸೊಂಕು ಎಲ್ಲಿ ಪತ್ತೆಯಾದರೂ ಪರವಾಗಿಲ್ಲ. ಕೌಲ್‌ಬಜಾರ್‌ನಲ್ಲಿ ಮಾತ್ರ
ಆವರಿಸಬಾರದಿತ್ತು. ಆದರೆ, ಅಲ್ಲಿಯೇ ಬಂದಿದೆ ಎಂದು ನಗರದ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಲಾಕ್‌ಡೌನ್‌ ನಿಯಮ ಪಾಲನೆಯಾಗುವುದು ಅಷ್ಟಕಷ್ಟೇ. ಎಷ್ಟೇ ನಿಯಂತ್ರಣ ಮಾಡಿದರೂ, ಮನೆಯಲ್ಲಿ ಉಳಿಯುವುದೇ ಇಲ್ಲ. ಅಲ್ಲಿಯೇ ಬಂದಿರುವುದು ನಗರದ ಜನರಲ್ಲಿ ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಇದೀಗ ಗುಣಮುಖರಾಗಿ ಬಿಡುಗಡೆಯಾದವರನ್ನು ಹೊರತುಪಡಿಸಿ, ಶುಕ್ರವಾರ ಪತ್ತೆಯಾದ ಮತ್ತೂಂದು ಸೇರಿ ಒಟ್ಟು 4 ಸಕ್ರಿಯ ಪ್ರಕರಣಗಳಿವೆ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next