ಬಳ್ಳಾರಿ: ಖಾತೆ ಬದಲಾವಣೆಗೆ ಫಾರಂ ನಂ.2,3 ಮಾಡಿಕೊಡಲು 80ಸಾವಿರ ರೂ. ಲಂಚದ ಬೇಡಿಕೆಯಿಟ್ಟಿದ್ದ ಪಾಲಿಕೆಯ ಕಂದಾಯ ನಿರೀಕ್ಷಕ ಅಬ್ದುಲ್ ಖಾದರ್ ಲೋಕಾಯುಕ್ತ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿರುವ ಘಟನೆ ಬುಧವಾರ ನಡೆದಿದೆ.
ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿ ಸಿಬ್ಬಂದಿಗಳಾದ ಫಸ್ಟ್ ಗ್ರೇಡ್ ಕಂದಾಯ ನಿರೀಕ್ಷಕ ಅಬ್ದುಲ್ ಖಾದರ್, ಕೇಸ್ ವರ್ಕರ್ ಚಿನ್ನಯ್ಯ ಎನ್ನುವವರು, ಜ್ಯುವೆಲ್ಲರಿ ವ್ಯಾಪಾರಿ ಕಿರಣ್ ಯಾದವ್ ಎನ್ನುವವರಿಗೆ ನಿವೇಶನ ಖಾತೆ ಬದಲಾವಣೆಗೆ ಫಾರಂ ನಂ..2,3 ಮಾಡಿ ಕೊಡದೆ ಕಳೆದ ಸೆ.2 ರಿಂದ ಕಚೇರಿಗೆ ಅಲೆದಾಡಿಸಿದ್ದಾರೆ. ಜತೆಗೆ ಯೂಸೋಫ್ ಎನ್ನುವ ಬ್ರೋಕರ್ ಮೂಲಕ 80 ಸಾವಿರ ರೂ. ಲಂಚದ ಬೇಡಿಕೆಯಿಟ್ಟಿದ್ದಾರೆ.
ಇದರಿಂದ ಬೇಸತ್ತ ಕಿರಣ್ ಯಾದವ್ ನ.16 ರಂದು ಬುಧವಾರ ಲೋಕಾಯುಕ್ತ ಕಚೇರಿಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು, ಬಲೆ ಬೀಸಿದ್ದಾರೆ. ಬ್ರೋಕರ್ ಯುಸೋಫ್ ಮೂಲಕ ಕಂದಾಯ ನಿರೀಕ್ಷಕ ಅಬ್ದುಲ್ ಖಾದರ್ 80 ಸಾವಿರ ರೂ. ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣ ಸಮೇತ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಲೋಕಾಯುಕ್ತ ಅಧೀಕ್ಷಕ ಪಿ.ಎ.ಪುರುಷೋತ್ತಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.