Advertisement

ಗಣಿ ನಾಡಿನಲ್ಲಿ ಬೀಸುತ್ತಿದೆ ರಾಜಕೀಯ ಬಿರುಗಾಳಿ: 5 ಕ್ಷೇತ್ರಗಳು

12:34 AM Feb 11, 2023 | Team Udayavani |

ಬಳ್ಳಾರಿ:  ಗಣಿನಾಡು ಬಳ್ಳಾರಿ ಜಿಲ್ಲೆ ರಾಜ್ಯದಲ್ಲೇ ಅತ್ಯಂತ ವೈಶಿಷ್ಟéತೆಯಿಂದ ಕೂಡಿರುವ ಜಿಲ್ಲೆ. ಬ್ರಿಟಿಷರ ಕಾಲದಲ್ಲಿ ಮದ್ರಾಸ್‌ ಪ್ರಾಂತಕ್ಕೆ ಒಳಪಟ್ಟಿದ್ದ ಅವಿಭಜಿತ ಬಳ್ಳಾರಿ ಜಿಲ್ಲೆ ನೈಸರ್ಗಿಕ ಸಂಪತ್ತು, ಕೃಷಿ, ಪ್ರವಾಸೋದ್ಯಮ, ಜೀನ್ಸ್‌, ಕೈಗಾರಿಕೋದ್ಯಮ ಸಹಿತ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಹೊಂದಿರುವ ಸಂಪದ್ಭರಿತ ಜಿಲ್ಲೆ.

Advertisement

ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 11 ತಾಲೂಕು, 9 ವಿಧಾನಸಭಾ ಕ್ಷೇತ್ರಗಳಿದ್ದು, 2018ರಲ್ಲಿ ಹರಪನಹಳ್ಳಿ ತಾಲೂಕು ವಾಪಸ್‌ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾದ ಬಳಿಕ 12 ತಾಲೂಕು, 10 ವಿಧಾನಸಭಾ ಕ್ಷೇತ್ರಗಳಾದವು. ಕಳೆದ ವರ್ಷ ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾದ ಬಳಿಕ ವಿಭಜಿಸಿ ತಲಾ 6 ತಾಲೂಕು, 5 ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಯಿತು. 1957ರ ಮೊದಲ ಚುನಾವಣೆಯಿಂದಲೂ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ 2008ರಿಂದ ಬಿಜೆಪಿ ಕೂಡ ಭದ್ರ ಬುನಾದಿ ಹಾಕಿಕೊಂಡಿದೆ. ಸದ್ಯ 10 ವಿಧಾನಸಭಾ ಕ್ಷೇತ್ರಗಳಲ್ಲಿ 5 ಎಸ್‌ಟಿ, 2 ಎಸ್‌ಸಿ, 3 ಸಾಮಾನ್ಯಕ್ಕೆ ಮೀಸಲಾಗಿವೆ.

1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಹಡಗಲಿ, ಹೊಸಪೇಟೆ, ಸಿರುಗುಪ್ಪ, ಕುರುಗೋಡು, ಬಳ್ಳಾರಿ, ಸಂಡೂರು, ಹರಪನಹಳ್ಳಿ ಸಹಿತ ಕೇವಲ 7 ಕ್ಷೇತ್ರಗಳು ಇದ್ದವು. 1962ರಲ್ಲಿ ಕೂಡ್ಲಿಗಿ ಕ್ಷೇತ್ರ, 1978ರಲ್ಲಿ ಕೊಟ್ಟೂರು ಕ್ಷೇತ್ರ ಸೇರಿ 9ಕ್ಕೆ ಏರಿಕೆಯಾದವು. 2008ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದ ಹಿನ್ನೆಲೆಯಲ್ಲಿ ಕುರುಗೋಡು ಕ್ಷೇತ್ರದ ಬದಲಿಗೆ (ಕುರುಗೋಡು ಒಳಗೊಂಡು) ಕಂಪ್ಲಿ ಕ್ಷೇತ್ರ, ಕೊಟ್ಟೂರು ಬದಲಿಗೆ ಹಗರಿಬೊಮ್ಮನಹಳ್ಳಿ (ಕೊಟ್ಟೂರು ಸೇರಿ) ಕ್ಷೇತ್ರಗಳನ್ನು ರಚಿಸಲಾಯಿತು.

ರಾಜ್ಯದ ಸಜ್ಜನ ರಾಜಕಾರಣಿ ಮಾಜಿ ಉಪಮುಖ್ಯಮಂತ್ರಿ ದಿ| ಎಂ.ಪಿ.ಪ್ರಕಾಶ್‌, 1967ರಲ್ಲಿ ರಾಜ್ಯದಲ್ಲೇ ಅವಿರೋಧವಾಗಿ ಆಯ್ಕೆಯಾಗಿದ್ದ ಏಕೈಕ ವ್ಯಕ್ತಿ ಎಂ.ವೈ.ಘೋರ್ಪಡೆ, ಭೂ ಸವಕಳಿಯನ್ನು ತಡೆಯಲು ಬಳ್ಳಾರಿ ಜಾಲಿಯನ್ನು ಬಳ್ಳಾರಿಗೆ ಪರಿಚಯಿಸಿದ ಕೆ.ನಾಗನಗೌಡ ಹಲವು ಸಜ್ಜನ ರಾಜಕಾರಣಿಗಳನ್ನು ರಾಜ್ಯಕ್ಕೆ ನೀಡಿದ ಕೊಡುಗೆ ಬಳ್ಳಾರಿ ಜಿಲ್ಲೆಗೆ ಸಲ್ಲುತ್ತದೆ. ಅಲ್ಲದೇ ಕೇಂದ್ರ ನಾಯಕರಾದ ಸೋನಿಯಾ ಗಾಂಧಿ- ಸುಷ್ಮಾ ಸ್ವರಾಜ್‌ ಬಳ್ಳಾರಿಯಿಂದ ಸ್ಪರ್ಧಿಸಿ ದೇಶದ ಗಮನ ಸೆಳೆದಿದ್ದರು.

ಬಳ್ಳಾರಿ
ಬಳ್ಳಾರಿ ರಾಜಕೀಯ ಇತಿಹಾಸವೇ ಒಂದು ರೋಚಕ. ಭಾಷಾವಾರು ಪ್ರಾಂತ ರಚನೆಗೆ ನಡೆದ ಹೋರಾಟಕ್ಕೆ ಮುನ್ನುಡಿ ಬರೆದದ್ದು ಬಳ್ಳಾರಿಯಲ್ಲಿ. ಈ ವೇಳೆ ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಬೇಕಾ, ಕರ್ನಾಟಕದಲ್ಲೇ ಉಳಿಸಬೇಕಾ ಎಂಬ ಸಮಸ್ಯೆ ಎದುರಾದಾಗ ಚುನಾವಣೆ ನಡೆಯುತ್ತದೆ. ಚುನಾವಣೆಯಲ್ಲಿ ಕನ್ನಡದ ಪರವಾಗಿ ಹರಗಿನಡೋಣಿ ಸಣ್ಣ ಬಸವನಗೌಡ, ತೆಲುಗು ಪರವಾಗಿ ಮುಂಡ್ಲೂರು ಗಂಗಪ್ಪ ಸ್ಪರ್ಧಿಸಿದ್ದು, ಹರಗಿನಡೋಣಿ ಸಣ್ಣಬಸವನಗೌಡರು ಜಯ ಗಳಿಸುವ ಮೂಲಕ ಬಳ್ಳಾರಿಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲಾಗುತ್ತದೆ. ಆದರೆ 1957ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮುಂಡ್ಲೂರು ಗಂಗಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್‌ ವಿರುದ್ಧ ಜಯ ಗಳಿಸಿದ್ದರು. 1962ರಲ್ಲಿ ಕಾಂಗ್ರೆಸ್‌ನಿಂದ ಟಿ.ಜಿ.ಸತ್ಯನಾರಾಯಣ ಜಯ ಗಳಿಸಿದರೆ, 1967ರಲ್ಲಿ ಎಸ್‌ಡಬ್ಲ್ಯುಎ ಪಕ್ಷದಿಂದ ಸ್ಪರ್ಧಿಸಿದ ವಿ.ನಾಗಪ್ಪ, ಕಾಂಗ್ರೆಸ್‌ ವಿರುದ್ಧವೇ ಗೆದ್ದಿದ್ದರು. 1972ರಲ್ಲಿ ಎನ್‌ಸಿಒ ಪಕ್ಷದಿಂದ ಇವರು ಮರು ಆಯ್ಕೆಯಾಗಿದ್ದರು. 1978ರಲ್ಲಿ ಕೆ.ಭಾಸ್ಕರ್‌ ನಾಯ್ಡು ಕಾಂಗ್ರೆಸ್‌(ಐ)ನಿಂದ ಗೆದ್ದಿದ್ದರು. ಅನಂತರ ಮುಂಡ್ಲೂರು ಕುಟುಂಬದ ರಾಜಕಾರಣ ಆರಂಭವಾಗುತ್ತದೆ. 1983ರಲ್ಲಿ ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ಮುಂಡ್ಲೂರು ರಾಮಪ್ಪ ಕಾಂಗ್ರೆಸ್‌ ವಿರುದ್ಧವೇ ಭರ್ಜರಿ ಜಯ ಗಳಿಸಿದ್ದರು. ಅನಂತರ 1985, 1989 ಎರಡು ಚುನಾವಣೆಗಳಲ್ಲೂ ಇವರೇ ಪುನರಾಯ್ಕೆಯಾಗಿದ್ದರು. 1994ರಲ್ಲಿ ಪಕ್ಷೇತರರಾಗಿ ಪ್ರಥಮ ಜಯ ಗಳಿಸುವ ಮಾಜಿ ಸಚಿವ ಎಂ.ದಿವಾಕರ ಬಾಬು, 1999ರ ಹೈವೋಲ್ಟೆಜ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಮತ್ತೊಮ್ಮೆ ಗೆಲುವು ದಾಖಲಿಸಿದ್ದರು. 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ಸಚಿವ ಬಿ.ಶ್ರೀರಾಮುಲು ಮೊದಲ ಗೆಲುವು ದಾಖಲಿಸಿದ್ದರು. 2008ರಲ್ಲಿ ಕ್ಷೇತ್ರ ಮರು ವಿಂಗಡಣೆಯಾಗಿ ಬಳ್ಳಾರಿ ನಗರ ಕ್ಷೇತ್ರವಾದ ಬಳಿಕ 2008, 2018ರಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ, 2013ರಲ್ಲಿ ಅನಿಲ್‌ ಲಾಡ್‌ ಆಯ್ಕೆಯಾಗಿದ್ದರು.

Advertisement

ಸಿರುಗುಪ್ಪ
ಜಿಲ್ಲೆಯ ಭತ್ತದ ಕಣಜ ಖ್ಯಾತಿಯ ಸಿರುಗುಪ್ಪ ಕ್ಷೇತ್ರ ತನ್ನದೇ ಆದ ವೈಶಿಷ್ಟé ಹೊಂದಿದೆ. ಇಲ್ಲಿ ಮರು ಆಯ್ಕೆಯಾಗಿದ್ದಾರೆಯೇ ಹೊರತು, ಸತತ ಗೆಲುವು ಯಾರಿಗೂ ದಕ್ಕಿಲ್ಲ. ಮೊದಲ ಚುನಾವಣೆ 1957ರಲ್ಲಿ ಕಾಂಗ್ರೆಸ್‌ನಿಂದ ಬಿ.ಇ.ರಾಮಯ್ಯ ಆಯ್ಕೆಯಾಗಿ ಕ್ಷೇತ್ರದ ಮೊದಲ ಶಾಸಕರಾಗಿ ದ್ದರು. 1962ರಲ್ಲಿ ಎಸ್‌ಡಬ್ಲ್ಯುಎ ಪಕ್ಷದ ಸಿ.ಎಂ.ರೇವಣಸಿದ್ದಯ್ಯ, 1967ರಲ್ಲಿ ಕಾಂಗ್ರೆಸ್‌ನ ಎಂ.ದೊಡ್ಡನಗೌಡ ಜಯ ಗಳಿಸಿದ್ದಾರೆ. 1972, 1978ರಲ್ಲಿ ಸತತ ಎರಡು ಬಾರಿ ಕಾಂಗ್ರೆಸ್‌ನ ಬಿ.ಇ.ರಾಮಯ್ಯ ಆಯ್ಕೆಯಾದರೆ 1983ರಲ್ಲಿ ಕಾಂಗ್ರೆಸ್‌ನ ಎಂ.ಶಂಕರ್‌ ರೆಡ್ಡಿ ಗೆದ್ದಿದ್ದಾರೆ. 1985ರಲ್ಲಿ ಸಿ.ಎಂ.ರೇವಣಸಿದ್ದಯ್ಯ ಜನತಾ ಪಕ್ಷದಿಂದ ಆಯ್ಕೆಯಾದರೆ, 1989ರಲ್ಲಿ ಎಂ.ಶಂಕರರೆಡ್ಡಿಯವರು ಕಾಂಗ್ರೆಸ್‌ ಪಕ್ಷದಿಂದ ಮರು ಆಯ್ಕೆಯಾಗಿದ್ದರು. 1994ರಲ್ಲಿ ಜನತಾದಳದ ಟಿ.ಎಂ.ಚಂದ್ರಶೇಖರರಯ್ಯ, 1999ರಲ್ಲಿ ಕಾಂಗ್ರೆಸ್‌ನ ಎಂ.ಶಂಕರರೆಡ್ಡಿ ಆಯ್ಕೆಯಾಗಿದ್ದರು. 1999ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಎಂ.ಎಸ್‌.ಸೋಮಲಿಂಗಪ್ಪ, 2004ರಲ್ಲಿ ಪುನಃ ಸ್ಪರ್ಧಿಸಿ ಜಯಗಳಿಸಿದ್ದರು. ಅನಂತರ ಕ್ಷೇತ್ರ ಮರುವಿಂಗಡಣೆಯಿಂದ ಸಿರುಗುಪ್ಪ ಕ್ಷೇತ್ರ ಎಸ್‌ಟಿ ವರ್ಗಕ್ಕೆ ಮೀಸಲಾಗಿದ್ದು, ಹಾಲಿ ಶಾಸಕ ಸೋಮಲಿಂಗಪ್ಪರಿಗೆ ಮತ್ತಷ್ಟು ಅನುಕೂಲವಾಯಿತು. ಇದರಿಂದ 2008ರಲ್ಲಿ ಸೋಮಲಿಂಗಪ್ಪ ಮರು ಆಯ್ಕೆಯಾಗಿದ್ದರು. 2013ರಲ್ಲಿ ಕಾಂಗ್ರೆಸ್‌ನ ಬಿ.ಎಂ.ನಾಗರಾಜ್‌ ಗೆದ್ದು, ಸೋಮಲಿಂಗಪ್ಪ ಸೋತರೂ, 2018ರ ಚುನಾವಣೆಯಲ್ಲಿ ಮತ್ತೂಮ್ಮೆ ಗೆಲ್ಲುವಲ್ಲಿ ಯಶಸ್ವಿಯಾದರು. ಸದ್ಯ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ.

ಕಂಪ್ಲಿ (ಎಸ್‌ಟಿ ಮೀಸಲು)
ಕಂಪ್ಲಿ ಎಸ್‌ಟಿ ಮೀಸಲು ಕ್ಷೇತ್ರವೂ 2008ರಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿದೆ. ಈ ಕ್ಷೇತ್ರದಿಂದಲೂ 2008, 2013 ಎರಡು ಅವಧಿಗೆ ಸಚಿವ ಬಿ.ಶ್ರೀರಾಮುಲು ಅಳಿಯ ಟಿ.ಎಚ್‌.ಸುರೇಶ್‌ ಬಾಬು ಗೆಲುವು ದಾಖಲಿಸಿದ್ದಾರೆ. 2018ರಲ್ಲಿ ಕಾಂಗ್ರೆಸ್‌ನ ಜೆ.ಎನ್‌.ಗಣೇಶ್‌ ಗೆಲ್ಲುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಗೆ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಳ್ಳಾರಿ ಗ್ರಾಮೀಣ (ಎಸ್‌ಟಿ ಮೀಸಲು)
2008ರಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಬಳ್ಳಾರಿ ಗ್ರಾಮೀಣ ಎಸ್‌ಟಿ ಮೀಸಲು ಕ್ಷೇತ್ರ ಅತ್ಯಂತ ಕಡಿಮೆ ಅವಧಿಯಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಚುನಾವಣೆಗಳನ್ನು ಎದುರಿಸಿದ ಕ್ಷೇತ್ರವಾಗಿದೆ. 2008ರಲ್ಲಿ ಬಿಜೆಪಿಯಿಂದ ಗೆಲುವು ದಾಖಲಿಸಿದ್ದ ಬಿ.ಶ್ರೀರಾಮುಲು, 2011ರಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನದಿಂದ ಶಾಸಕ ಸ್ಥಾನಕ್ಕೆ, ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದರು. 2011ರಲ್ಲಿ ನಡೆದ ಉಪಚುನಾವಣೆ, 2013ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಎರಡರಲ್ಲೂ ಶ್ರೀರಾಮುಲು ಬಿಎಸ್‌ಆರ್‌ ಪಕ್ಷದಿಂದ ಸ್ಪರ್ಧಿಸಿ ಮರು ಆಯ್ಕೆಯಾಗಿದ್ದರು. ಬಳಿಕ ಬಿಜೆಪಿ ಪಕ್ಷಕ್ಕೆ ವಾಪಸ್‌ ಬಂದ ಬಿ.ಶ್ರೀರಾಮುಲು 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದ ತೆರವಾದ ಶಾಸಕ ಸ್ಥಾನಕ್ಕೆ 2014ರಲ್ಲಿ ಪುನಃ ಉಪಚುನಾವಣೆ ನಡೆದು ಕಾಂಗ್ರೆಸ್‌ನ ಎನ್‌.ವೈ.ಗೋಪಾಲಕೃಷ್ಣ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ಕೂಡ್ಲಿಗಿಯಿಂದ ಗ್ರಾಮೀಣ ಕ್ಷೇತ್ರಕ್ಕೆ ವಲಸೆ ಬಂದ ಬಿ.ನಾಗೇಂದ್ರ ಕಾಂಗ್ರೆಸ್‌ನಿಂದ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ದಾಖಲಿಸಿದ್ದು, ಸದ್ಯ ಶಾಸಕರಾಗಿದ್ದಾರೆ.

ಕುರುಗೋಡು (ಈಗ ಕ್ಷೇತ್ರವಿಲ್ಲ)
ರಾಜ್ಯದ ಮೊದಲ ವಿಧಾನಸಭೆ ಚುನಾವಣೆ 1957ರಿಂದ 2004ರ ವರೆಗೆ ಒಟ್ಟು 11 ಚುನಾವಣೆಗಳು ನಡೆದಿರುವ ಕುರುಗೋಡು ಕ್ಷೇತ್ರದಲ್ಲಿ 9 ಬಾರಿ ಕಾಂಗ್ರೆಸ್‌ ಜಯಗಳಿಸಿದ್ದು, ಒಮ್ಮೆ ಜನತಾ ಪರಿವಾರ (ಜೆಎನ್‌ಪಿ), ಒಮ್ಮೆ ಜೆಡಿಎಸ್‌ ಪಕ್ಷ ಜಯ ಗಳಿಸಿದೆ. ಅದರಲ್ಲೂ 6 ಬಾರಿ ಅಲ್ಲಂ ಕುಟುಂಬದವರೇ ಆಯ್ಕೆಯಾಗಿರುವುದು ಕ್ಷೇತ್ರದ ವಿಶೇಷ. ಮೊದಲ ಚುನಾವಣೆ 1957ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಅಲ್ಲಂ ಕುಟುಂಬದ ಅಲ್ಲಂ ಸುಮಂಗಳಮ್ಮ ಜಯಗಳಿಸಿದರೆ, 1962, 1967ರಲ್ಲಿ ಅವರ ಪತಿ ಅಲ್ಲಂ ಕರಿಬಸಪ್ಪ ಸತತ ಎರಡು ಬಾರಿ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನಂತರ ಇದೇ ಕಾಂಗ್ರೆಸ್‌ ಪಕ್ಷದಿಂದ 1972ರಲ್ಲಿ ಎಚ್‌.ಲಿಂಗಾರೆಡ್ಡಿ, 1978ರಲ್ಲಿ ರಾಮಪ್ಪ ಎಂ., 1983ರಲ್ಲಿ ಎಚ್‌.ನಾಗನಗೌಡ ಗೆದ್ದಿದ್ದಾರೆ. 1985ರಲ್ಲಿ ಜನತಾ ಪರಿವಾರದಿಂದ ಸ್ಪರ್ಧಿಸಿದ ಬಿ.ಶಿವರಾಮರೆಡ್ಡಿ ಗೆಲ್ಲುವ ಮೂಲಕ ಕಾಂಗ್ರೆಸ್‌ ಗೆಲುವಿಗೆ ಬ್ರೇಕ್‌ ಹಾಕಿದ್ದರೆ ಅನಂತರ ರಾಜಕೀಯ ಪ್ರವೇಶ ಮಾಡಿದ ಅಲ್ಲಂ ಕುಟುಂಬದ ಅಲ್ಲಂ ವೀರಭದ್ರಪ್ಪ 1989, 1994, 1999ರಲ್ಲಿ ಮೂರು ಬಾರಿ ಸತತವಾಗಿ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ನಾಗಾಲೋಟ ಮುಂದುವರಿಸಿದ್ದರು. 2004ರಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿದ್ದ ನಾರಾ ಸೂರ್ಯನಾರಾಯಣರೆಡ್ಡಿ ಗೆಲುವು ದಾಖಲಿಸಿದ್ದರಾದರೂ 2008ರ ಚುನಾವಣೆ ಹೊತ್ತಿಗೆ ಕ್ಷೇತ್ರ ಮರುವಿಂಗಡಣೆಯಾಗಿ ಕುರುಗೋಡು ಬದಲಿಗೆ ಕಂಪ್ಲಿ ಕ್ಷೇತ್ರವಾಗಿ ಪರಿವರ್ತನೆಯಾಗಿ, ಎಸ್‌ಟಿಗೆ ಮೀಸಲಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಪ್ರಬಲ ಕುಟುಂಬಗಳ ರಾಜಕೀಯ ಭವಿಷ್ಯಕ್ಕೂ ತಿಲಾಂಜಲಿ ಹಾಡಲಾಯಿತು.

 ಸಂಡೂರು
ದಕ್ಷಿಣದ ಸಸ್ಯಕಾಶಿ ಎಂತಲೇ ಕರೆಯುವ ಸಂಡೂರು ಪ್ರತ್ಯೇಕ ಸಂಸ್ಥಾನವಾಗಿತ್ತು. ಈ ಕ್ಷೇತ್ರದಿಂದ ರಾಜಮನೆತನದ ಮುರಾರಿರಾವ್‌ ಯಶ್ವಂತರಾವ್‌ ಘೋರ್ಪಡೆ (ಎಂ.ವೈ.ಘೋರ್ಪಡೆ) ಅವರು, 1959ರ ಉಪಚುನಾವಣೆ ಸಹಿತ 7 ಬಾರಿ ಗೆಲುವು ದಾಖಲಿಸಿರುವ ಮತ್ತು 1967ರಲ್ಲಿ ಅವಿರೋಧವಾಗಿ ಆಯ್ಕೆಯಾದ ರಾಜ್ಯದ ಏಕೈಕ ಶಾಸಕರು ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಜಿಲ್ಲೆಯಲ್ಲಿ ಸಿಪಿಎಂ ಪಕ್ಷ ಸಹ ಏಕೈಕ ಗೆಲುವು ದಾಖಲಿಸಿದೆ. 1957ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಯ ಗಳಿಸುವ ಎಚ್‌.ರಾಯನಗೌಡ, 1959ರಲ್ಲಿ ನಿಧನ ಹೊಂದಿದರು. ಬಳಿಕ 1959ರಲ್ಲಿ ನಡೆಯುವ ಉಪಚುನಾವಣೆ ಮೂಲಕ ರಾಜಕೀಯ ಪ್ರವೇಶ ಮಾಡುವ ಎಂ.ವೈ.ಘೋರ್ಪಡೆ ಮೊದಲ ಗೆಲುವು ದಾಖಲಿಸಿದ್ದರು. ಅನಂತರ 1967, 1972, 1978ರ ಮೂರು ಚುನಾವಣೆಗಳಲ್ಲಿ ಪುನರಾಯ್ಕೆಯಾಗುವ ಮೂಲಕ ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದರು. ಅನಂತರ ಇವರು ಲೋಕಸಭೆಗೆ ಸ್ಪರ್ಧಿಸಿ ಕೇಂದ್ರಕ್ಕೆ ತೆರಳಿದ್ದರು. ಈ ವೇಳೆ ರಾಜ್ಯದಲ್ಲಿ ಕಾಂಗ್ರೆಸ್‌ ವಿಭಜನೆಯಾಗಿ 1978ರ ಚುನಾವಣೆಯಲ್ಲಿ ಕಾಂಗ್ರೆಸ್‌(ಐ)ನಿಂದ ಸಿ.ರುದ್ರಪ್ಪ ಆಯ್ಕೆಯಾದರೆ 1983ರಲ್ಲಿ ಕಾಂಗ್ರೆಸ್‌ನ ಹಿರೋಜಿ ವಿ.ಎಸ್‌.ಲಾಡ್‌, 1985ರಲ್ಲಿ ಸಿಪಿಎಂ ಪಕ್ಷದ ಯು.ಭೂಪತಿ ಗೆದ್ದಿದ್ದರು. 1989ರಲ್ಲಿ ಪುನಃ ರಾಜ್ಯ ರಾಜಕಾರಣಕ್ಕೆ ಬರುವ ಎಂ.ವೈ.ಘೋರ್ಪಡೆ 1989, 1994, 1999ರಲ್ಲಿ ಸತತವಾಗಿ ಗೆಲ್ಲುವ ಮೂಲಕ ಮತ್ತೂಮ್ಮೆ ಹ್ಯಾಟ್ರಿಕ್‌ ದಾಖಲಿಸಿದ್ದರು. 2004ರಲ್ಲಿ ರಾಜಕೀಯ ಪ್ರವೇಶಿಸುವ ಸಂತೋಷ್‌ ಲಾಡ್‌ ಜೆಡಿಎಸ್‌ ಪಕ್ಷದಿಂದ ಭರ್ಜರಿ ಗೆಲುವು ದಾಖಲಿಸಿದ್ದರು. 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿತ ಈ.ತುಕಾರಾಂ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಹಾಲಿ ಶಾಸಕ ಈ.ತುಕಾರಾಂ ಅವರು, 2008, 2013, 2018ರ ಚುನಾವಣೆಯಲ್ಲಿ ಸತತ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧಿಸಿದ್ದರು.

-ವೆಂಕೋಬಿ ಸಂಗ‌ನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next