Advertisement

ಬಿಸಿಲನಾಡಲ್ಲಿ ನೀರಿಗೆ ಹಾಹಾಕಾರ

03:52 PM May 17, 2019 | Naveen |

ಬಳ್ಳಾರಿ: ಬಿಸಿಲಿನ ತಾಪಮಾನ ದಿನೇ ದಿನೇ ಏರುತ್ತಿರುವ ಜಿಲ್ಲೆಯಲ್ಲಿ 51 ಹಳ್ಳಿಗಳಲ್ಲಿ ಖಾಸಗಿ ಟ್ಯಾಂಕರ್‌, ಬೋರ್‌ವೆಲ್ನಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, ಸುಮಾರು 300 ಜನವಸತಿ ಪ್ರದೇಶಗಳಲ್ಲಿ ಶುದ್ಧ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಈ ಪ್ರದೇಶಗಳಲ್ಲಿನ ಜನರು ಶುದ್ಧ ಕುಡಿವ ನೀರಿಗಾಗಿ ಪಕ್ಕದ ಗ್ರಾಮಗಳಲ್ಲಿನ ಶುದ್ಧ ಕುಡಿವ ನೀರಿನ ಘಟಕಗಳಿಗೆ ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಎಚ್ಎಲ್ಸಿ, ಎಲ್ಎಲ್ಸಿ ಕಾಲುವೆ ಪಕ್ಕ ಸೇರಿ ಇತರೆಡೆಗಳಲ್ಲಿನ ಸಣ್ಣ ಸಣ್ಣ ಜನವಸತಿ ಪ್ರದೇಶಗಳಲ್ಲಿ ಕಾಲುವೆಯಲ್ಲಿ ನೀರು ಸ್ಥಗಿತಗೊಳ್ಳುತ್ತಿದ್ದಂತೆ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಉಂಟಾಗುತ್ತದೆ. ಸುಗ್ಗಿ ಸಮಯದಲ್ಲಿ ಕಾಲುವೆ ನೀರಿನ ಮೇಲೆ ಅವಲಂಬಿತವಾಗಿರುವ ಈ ಪ್ರದೇಶಗಳ ನಿವಾಸಿಗಳು ಬೇಸಿಗೆಯಲ್ಲಿ ಮಾತ್ರ ಕುಡಿವ ನೀರಿಗಾಗಿ ಪಕ್ಕದ ಗ್ರಾಮಗಳಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಾದ್ಯಂತ ಸುಮಾರು 300 ಜನವಸತಿ ಪ್ರದೇಶಗಳಲ್ಲಿನ ಜನರು ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಜಿಲ್ಲೆಯಲ್ಲಿ 51 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಬೇಸಿಗೆಯಾಗಿದ್ದರಿಂದ ತಾತ್ಕಾಲಿಕವಾಗಿ ಖಾಸಗಿ ಟ್ಯಾಂಕರ್‌, ಖಾಸಗಿ ಬೋರ್‌ವೆಲ್ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ಈ ಪೈಕಿ ಬಳ್ಳಾರಿ ತಾಲೂಕು 6 ಗ್ರಾಮಗಳು, ಕೂಡ್ಲಿಗಿ ತಾಲೂಕು 26, ಸಂಡೂರು 4, ಹರಪನಹಳ್ಳಿ ತಾಲೂಕಿನಲ್ಲಿ 15 ಸೇರಿ ಒಟ್ಟು 51 ಗ್ರಾಮಗಳಲ್ಲಿ ದಿನಕ್ಕೆ 82 ವಾಹನಗಳಿಂದ ಪ್ರತಿದಿನ 334 ಟ್ರಿಪ್‌ ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ ಒಟ್ಟು 11 ತಾಲೂಕುಗಳ ಪೈಕಿ 191 ಗ್ರಾಮಗಳಲ್ಲಿ ಒಟ್ಟು 281 ಬೋರ್‌ವೆಲ್ ಬಾಡಿಗೆಗೆ ಪಡೆಯಲಾಗಿದೆ ಎಂದು ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಯ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ.

ಜಿಲ್ಲೆಯ ಒಟ್ಟು 11 ತಾಲೂಕುಗಳಲ್ಲಿ ಈವರೆಗೆ 855 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಇದರಲ್ಲಿ ಇಲಾಖೆಗೆ ಸಂಬಂಧಿಸಿದ್ದ 324 ಕಾಮಗಾರಿ ಪೂರ್ಣಗೊಂಡು ಕಾರ್ಯ ನಿರ್ವಹಿಸುತ್ತಿದ್ದು, 26 ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ. ಲ್ಯಾಂಡ್‌ ಆರ್ಮಿಗೆ ಸಂಬಂಧಿಸಿದ್ದ 134 ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, 142 ಕಾಮಗಾರಿ ಪ್ರಗತಿಯಲ್ಲಿವೆ. ಸಹಕಾರಿ ಸಂಘಗಳ ನೇತೃತ್ವದಲ್ಲಿನ 42 ಶುದ್ಧ ಕುಡಿವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಇತರೆ ಹೈ.ಕ, ಶಾಸಕರು, ಸಂಸದರ ಅನುದಾನದಲ್ಲಿ ನಿರ್ಮಿಸಲಾಗಿರುವ ಒಟ್ಟು 314 ಘಟಕಗಳಲ್ಲಿ 294 ಕಾರ್ಯ ನಿರ್ವಹಿಸುತ್ತಿದ್ದು, 20 ಘಟಕಗಳ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಇವುಗಳ ಜತೆಗೆ ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಕೂಡ್ಲಿಗಿ ಸೇರಿ ಇತರೆ ತಾಲೂಕುಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಯೋಜನೆಯೊಂದನ್ನು ರೂಪಿಸಲಾಗಿದೆ. ಶೀಘ್ರದಲ್ಲೆ ಚಾಲನೆ ಪಡೆದುಕೊಳ್ಳಲಿದೆ. ಇನ್ನೆರಡು ವರ್ಷಗಳಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿವ ನೀರು ಪೂರೈಕೆಯಾಗಲಿದೆ ಎಂಬ ವಿಶ್ವಾಸ ಇಲಾಖೆಯ ಅಧಿಕಾರಿಗಳದ್ದಾಗಿದೆ.

ಜಿಲ್ಲೆಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಬಳ್ಳಾರಿ, ಸಿರುಗುಪ್ಪ, ಹೊಸಪೇಟೆ ತಾಲೂಕಿನಲ್ಲಿನ ಕುಡಿಯುವ ನೀರಿ ಕೆರೆಗಳಲ್ಲಿ ನೀರು ತುಂಬಿಸಿಕೊಳ್ಳಲಾಗಿದೆ. ಕುಡಿಯುವ ನೀರಿನ ತೀವ್ರ ಸಮಸ್ಯೆಯಿರುವ ಜಿಲ್ಲೆಯ ಒಟ್ಟು 51 ಹಳ್ಳಿಗಳಿಗೆ ತುರ್ತಾಗಿ ಖಾಸಗಿ ಟ್ಯಾಂಕರ್‌, ಬೋರ್‌ವೆಲ್ ಬಾಡಿಗೆ ಪಡೆದು ನೀರು ಪೂರೈಸುವ ಕೆಲಸ ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸುವ ಸಲುವಾಗಿ 120 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈಗಾಗಲೇ 80 ಕೋಟಿ ರೂ. ಖರ್ಚು ಮಾಡಲಾಗಿದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು.
. ಶಶಿಧರ್‌,
ಮುಖ್ಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಯೋಜನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next