Advertisement

ಬಿಜೆಪಿ ಒಗ್ಗಟ್ಟು ದೇವೇಂದ್ರಪ್ಪ ಗೆಲುವಿನ ಗುಟ್ಟು !

12:04 PM May 24, 2019 | Naveen |

ಬಳ್ಳಾರಿ: ಗಣಿನಾಡು ಬಳ್ಳಾರಿ ಲೋಕಸಭೆ ಕ್ಷೇತ್ರ ಮತ್ತೂಮ್ಮೆ ‘ಕಮಲ’ ಅರಳಲು ಆ ಪಕ್ಷದಲ್ಲಿನ ಒಗ್ಗಟ್ಟು, ಉಪಚುನಾವಣೆಯ ಗುಂಗಿನಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಮೈಮರೆತ ಕಾಂಗ್ರೆಸ್‌ ಶಾಸಕರು, ಮುಖಂಡರಲ್ಲಿನ ಬಿಕ್ಕಟ್ಟುಗಳೇ ಸೋಲಿಗೆ ಕಾರಣವಾಗಿದೆ.

Advertisement

ಬಳ್ಳಾರಿ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿದ್ದ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಅಂದಿನಿಂದಲೇ 2019ರ ಸಾರ್ವತ್ರಿಕ ಚುನಾವಣೆಯನ್ನು ಗುರಿಯನ್ನಾಗಿಸಿಕೊಂಡು ಕ್ಷೇತ್ರದ ತಳಮಟ್ಟದಲ್ಲಿ ಕೆಲಸ ಮಾಡಿದರು. ಶಾಸಕರು, ಕಾರ್ಯಕರ್ತರು, ಮುಖಂಡರು ಸೇರಿದಂತೆ ಪ್ರತಿಯೊಬ್ಬರೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮನೆ ಮನೆಗೆ ತೆರಳಿ ಅರಿವು ಮೂಡಿಸುವಲ್ಲಿ ನಿರತರಾಗುವ ಮೂಲಕ ಆಗಿನಿಂದಲೇ ಚುನಾವಣಾ ತಯಾರಿಯಲ್ಲಿ ತೊಡಗಿಸಿಕೊಂಡಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಾಧ್ಯವಾಗಿದೆ ಎನ್ನಲಾಗುತ್ತಿದೆ.

ಕಮಲಕ್ಕೆ ಪಶ್ಚಿಮ ಕ್ಷೇತ್ರಗಳ ಬೆಂಬಲ: ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಅವರು ಮೂಲತಃ ಹರಪನಹಳ್ಳಿ ತಾಲೂಕಿನವರು. ಈ ತಾಲೂಕು ಈಚೆಗೆ ಪುನಃ ಬಳ್ಳಾರಿ ಸೇರಿದ್ದರಿಂದ ದೇವೇಂದ್ರಪ್ಪರು ಸ್ಥಳೀಯರು ಆಗಿದ್ದಾರೆ. ಅಲ್ಲದೇ, ಪಶ್ಚಿಮ ಕ್ಷೇತ್ರಗಳಾದ ಹಡಗಲಿ, ಹ.ಬೊ.ಹಳ್ಳಿ, ಕೂಡ್ಲಿಗಿ, ಹೊಸಪೇಟೆ ತಾಲೂಕುಗಳಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ ಲಭಿಸಿದ್ದು ದೇವೇಂದ್ರಪ್ಪ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಇನ್ನುಳಿದ ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಕಂಪ್ಲಿ, ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಲ್ಪ ಪ್ರಮಾಣದ ಮುನ್ನಡೆ ಲಭಿಸಿದ್ದರೂ, ಕಾಂಗ್ರೆಸ್‌ಗೆ ಪ್ರಯೋಜನವಾಗಿಲ್ಲ.

ಕಾಂಗ್ರೆಸ್‌ ಶಾಸಕರ ಮುನಿಸು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಆ ಪಕ್ಷದ ಶಾಸಕರಲ್ಲಿನ ಒಳಜಗಳ, ಮುನಿಸುಗಳೇ ಕಾರಣ ಎನ್ನಲಾಗುತ್ತಿದೆ. ಸಾರ್ವತ್ರಿಕ ಚುನಾವಣೆ ವೇಳೆ ವಿಜಯನಗರ ಶಾಸಕ ಆನಂದ್‌ಸಿಂಗ್‌, ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ನಡುವಿನ ಗಲಾಟೆ ಪಕ್ಷಕ್ಕೆ ಮುಜುಗರವನ್ನು ಉಂಟು ಮಾಡಿತ್ತು. ಇದರಿಂದ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಜೆೃಲು ಸೇರಿದ್ದು, ಕ್ಷೇತ್ರದ ಕಾರ್ಯಕರ್ತರು, ಮತದಾರರ ಮೇಲೆ ಪ್ರಭಾವ ಬೀರಿದ್ದು, ಪ್ರಚಾರಕ್ಕೆ ತೆರಳಿದ್ದ ಪಕ್ಷದ ಹಿರಿಯ ಮುಖಂಡರ ವಿರುದ್ಧ ಗಣೇಶ್‌ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಚುನಾವಣೆಯ ಮೇಲೂ ಪ್ರಭಾವ ಬೀರಿದೆ. ಇದರೊಂದಿಗೆ ಗಲಾಟೆಯಿಂದಾಗಿ ಶಾಸಕ ಆನಂದ್‌ಸಿಂಗ್‌ ಸಹ ಕ್ಷೇತ್ರದಿಂದ ದೂರ ಉಳಿದಿದ್ದು, ಕ್ಷೇತ್ರದ ಮೇಲೆ ಹಿಡಿತ ಕೈ ತಪ್ಪಿದಂತಾಯಿತು. ಮೇಲಾಗಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ನಾಮಪತ್ರ ಸಲ್ಲಿಸುವಾಗಷ್ಟೇ ಒಂದಷ್ಟು ಕಾಣಿಸಿಕೊಂಡಿದ್ದ ಆನಂದ್‌ಸಿಂಗ್‌, ನಂತರ ಕ್ಷೇತ್ರದಲ್ಲಿ ಎಲ್ಲೂ ಪ್ರಚಾರಕ್ಕೆ ತೆರಳಿಲ್ಲ. ಪರಿಣಾಮ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕಿಂತ ಬಿಜೆಪಿಗೆ ಪಕ್ಷಕ್ಕೆ ಹೆಚ್ಚಿನ ಮತಗಳು ಲಭಿಸುವಲ್ಲಿ ಕಾರಣವಾಗಿದೆ ಎನ್ನಬಹುದು.

ಹಾಲಿ-ಮಾಜಿ ಶಾಸಕರ ನಡುವೆ ಕಿತ್ತಾಟ: ಹ.ಬೊ.ಹಳ್ಳಿ ಶಾಸಕ ಭೀಮಾನಾಯ್ಕ ಮತ್ತು ಮಾಜಿ ಶಾಸಕ ಶಿರಾಜ್‌ಶೇಖ್‌ ನಡುವೆಯಿದ್ದ ಅಸಮಾಧಾನವೂ ಕಾಂಗ್ರೆಸ್‌ ಸೋಲಿಗೆ ಮತ್ತೂಂದು ಕಾರಣ ಎನ್ನಲಾಗುತ್ತಿದೆ. ಮಾಜಿ ಶಾಸಕ ಶಿರಾಜ್‌ಶೇಖ್‌ ಅವರಿಗೆ ಚುನಾವಣೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದು ಹಾಲಿ ಶಾಸಕ ಭೀಮಾನಾಯ್ಕ ಅವರಿಗೆ ಒಪ್ಪಿಗೆ ಇರಲಿಲ್ಲ. ಈ ಕುರಿತು ಉಗ್ರಪ್ಪ ನಾಮಪತ್ರ ಸಲ್ಲಿಸುವ ವೇಳೆ ಇಬ್ಬರೂ ಪರಸ್ಪರ ವಾಗ್ವಾದ ನಡೆಸಿದ್ದರು. ಅಲ್ಲದೇ, ಶಾಸಕ ಭೀಮಾನಾಯ್ಕ ಅವರು, ಶಿರಾಜ್‌ಶೇಖ್‌ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಅವರಿಗೆ ನೀಡಿರುವ ಜವಾಬ್ದಾರಿ ವಾಪಸ್‌ ಪಡೆದರೆ ಮಾತ್ರ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು, ಚುನಾವಣೆಯ ಮೇಲೆ ಪ್ರಭಾವ ಬೀರಿತ್ತು. ಪರಿಣಾಮ ಹ.ಬೊ.ಹಳ್ಳಿ ಕ್ಷೇತ್ರ ಜಿಲ್ಲೆಯಲ್ಲೇ ಬಿಜೆಪಿಗೆ ಅತಿಹೆಚ್ಚು ಮತಗಳನ್ನು ನೀಡಿದ ಎರಡನೇ ಕ್ಷೇತ್ರವಾಗಿದ್ದು, ಕಾಂಗ್ರೆಸ್‌ ಸೋಲಿಗೆ ಕಾರಣವಾಗಿದೆ.

Advertisement

ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ, ಅಭ್ಯರ್ಥಿ ಉಗ್ರಪ್ಪರ ವಿರುದ್ಧ ಮುನಿಸಿಕೊಂಡಿದ್ದರು. ಪಕ್ಷದಿಂದ ಜಿಲ್ಲೆಯ ಚುನಾವಣಾ ವೀಕ್ಷಕರನ್ನಾಗಿ ನೇಮಿಸಿದ್ದರೂ, ನಾರಾಯಣರೆಡ್ಡಿ ಮಾತ್ರ ಎಲ್ಲೂ ಪ್ರಚಾರ ನಡೆಸಲಿಲ್ಲ. ಕೊನೆಗೆ ಪ್ರಚಾರದ ನಿಮಿತ್ತ ನಗರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ರೆಡ್ಡಿಯೊಂದಿಗೆ ಚರ್ಚಿಸಿದ ಬಳಿಕ ಕೊನೆಯ ಒಂದೆರಡು ದಿನಗಳು ಕಂಪ್ಲಿ ಕ್ಷೇತ್ರದಲ್ಲಿ ಒಂದಷ್ಟು ಕೆಲಸ ಮಾಡಿದರೂ, ಪ್ರಯೋಜನವಾಗಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿನ ಇಷ್ಟೆಲ್ಲ ಅಸಮಾಧಾನಗಳು ಆ ಪಕ್ಷದ ಅಭ್ಯರ್ಥಿ ಸೋಲಿಗೆ ಪ್ರಮುಖ ಕಾರಣ ಎಂಬುದು ಜಿಲ್ಲೆಯ ರಾಜಕೀಯ ಮಂದಿಯ ವಿಶ್ಲೇಷಣೆಯಾಗಿದೆ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next