Advertisement

ಬೆಳ್ಳಾರೆ ಬೆಳ್ಳಿ ಹೆಸರಲ್ಲಿ ತ್ಯಾಜ್ಯದಿಂದ ಸಾವಯವ ಗೊಬ್ಬರ

10:42 PM May 10, 2020 | Sriram |

ವಿಶೇಷ ವರದಿ- ಬೆಳ್ಳಾರೆ: ಸಂಗ್ರಹಿಸಿದ ಕಸವನ್ನು ಘನ ತ್ಯಾಜ್ಯ ಘಟಕದಲ್ಲಿ ಬೇರ್ಪಡಿಸಿ ಸಾವಯವ ಗೊಬ್ಬರವನ್ನಾಗಿ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಬೆಳ್ಳಾರೆ ಗ್ರಾ.ಪಂ. ಕಾರ್ಯ ಫ‌ಲಪ್ರದವಾಗಿದೆ. ಗೊಬ್ಬರವನ್ನು ಗೋಣಿ ಚೀಲದಲ್ಲಿ ತುಂಬಿಸಿ ಬೆಳ್ಳಾರೆ ಬೆಳ್ಳಿ ಹೆಸರಲ್ಲಿ ಮಾರಾಟಕ್ಕೆ ತಯಾರುಗೊಳಿಸಲಾಗುತ್ತಿದೆ.

Advertisement

ದ.ಕ. ಜಿಲ್ಲಾ ಪಂಚಾಯತ್‌ ಗ್ರಾಮೀಣ ಪ್ರದೇಶದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ ಹಮ್ಮಿಕೊಂಡ ಮಹತ್ವಾಕಾಂಕ್ಷಿ ಯೋಜನೆಗೆ ಪೂರಕವಾಗಿ ಬೆಳ್ಳಾರೆ ಗ್ರಾಮ ಪಂಚಾಯತ್‌ ಪೇಟೆ ಯಲ್ಲಿ ಸಂಗ್ರಹಿಸಿದ ಘನ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಲು ಘಟಕವನ್ನು ಆರಂಭಿಸಲಾಗಿದೆ.

ಪ್ರತಿ ಕೆ.ಜಿ ಗೆ 10 ರೂ.
ಗೊಬ್ಬರವನ್ನು ಬೆಳ್ಳಾರೆ ಬೆಳ್ಳಿ ಹೆಸರಲ್ಲಿ ಪ್ರತಿ ಕೆಜಿಗೆ 10 ರೂಪಾಯಿಯಂತೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಗೊಬ್ಬರ ಮಾರಾಟದಿಂದ ಘಟಕದ ನಿರ್ವಹಣ ವೆಚ್ಚ ಭರಿಸುವುದು ಸುಲಭವಾಗಲಿದೆ.

ಆರು ವಾರದಲ್ಲಿ ಗೊಬ್ಬರ ಸಿದ್ಧ
ಪೇಟೆಯಲ್ಲಿ ಸಂಗ್ರಹವಾದ ಕಸವನ್ನು ಘನತ್ಯಾಜ್ಯ ಘಟಕದಲ್ಲಿ ಹಸಿ ಮತ್ತು ಒಣ ಕಸವನ್ನಾಗಿ ಪ್ರತ್ಯೇಕಿಸಿ ಮೆಷಿನ್‌ ಮೂಲಕ ಹುಡಿ ಮಾಡಲಾಗುತ್ತದೆ. ಬಳಿಕ ಬ್ಯಾಕ್ಟಿರಿಯಾಗಳನ್ನು ಬಳಸಿ ಬೇಗನೆ ಕೊಳೆಯುವಂತೆ ಮಾಡಲಾಗುತ್ತದೆ. ಅಲ್ಲದೇ ದುರ್ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಅವು ನಾಶ ಮಾಡುತ್ತವೆ. ಆರು ವಾರಗಳಲ್ಲಿ ಕಸ ಸಂಪೂರ್ಣ ಕೊಳೆತು ಗೊಬ್ಬರ ಸಿದ್ಧವಾಗುತ್ತದೆ.

ಗ್ರಾಮಸ್ಥರ ಸಹಕಾರ ಅಗತ್ಯ
ಘನ ತ್ಯಾಜ್ಯ ಘಟಕದಲ್ಲಿ ಸಾವಯವ ಗೊಬ್ಬರ ತಯಾರಿ ನಿರಂತರವಾಗಿ ನಡೆ ಯುತ್ತಿದ್ದು, ಹಸಿ ಕಸ ಮತ್ತು ಒಣ ಕಸ ವನ್ನು ಪ್ರತ್ಯೇಕಿಸಲು ಸಿಬಂದಿ ಹರಸಾಹಸ ಪಡಬೇಕಾಗುತ್ತದೆ. ತ್ಯಾಜ್ಯ ಸಂಗ್ರಹಣ ವಾಹನಕ್ಕೆ ಕಸವನ್ನು ಬೇರ್ಪಡಿಸಿ ನೀಡಿದಲ್ಲಿ ಕಾರ್ಯ ಇನ್ನಷ್ಟು ಸುಗಮವಾಗಲಿದೆ ಎಂದು ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶಕುಂತಳಾ ನಾಗರಾಜ್‌ ತಿಳಿಸಿದ್ದಾರೆ.

Advertisement

ಶೀಘ್ರದಲ್ಲೇ ಮಾರುಕಟ್ಟೆಗೆ
ಹಲವು ಸಮಯದಿಂದ ಬೆಳ್ಳಾರೆಯ ಘನತ್ಯಾಜ್ಯ ಘಟಕದಲ್ಲಿ ಸಾವಯವ ಗೊಬ್ಬರ ತಯಾರಿ ನಡೆಯುತ್ತಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು.
 -ಧನಂಜಯ ಕೆ.ಆರ್‌., ಪಿಡಿಒ, ಬೆಳ್ಳಾರೆ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next