Advertisement

ಸುಪ್ರೀಂ ತೀರ್ಪಿಗೆ ಭಕ್ತರ ಅಸಮಾಧಾನ

03:52 PM Oct 26, 2018 | |

ಚಿತ್ರದುರ್ಗ: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ವಿರೋಧಿಸಿ ಶ್ರೀ ಶಬರಿಮಲೈ ಅಯ್ಯಪ್ಪಸ್ವಾಮಿ ಸೇವಾ ಸಮಾಜಂ ಕರ್ನಾಟಕ, ವಿಶ್ವ ಹಿಂದೂ ಪರಿಷತ್‌, ಭಜರಂಗದಳ ಹಾಗೂ
ಚಾಮುಂಡೇಶ್ವರಿ ಅಯ್ಯಪ್ಪ ಭಜನಾ ಮಂಡಳಿ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಆನೆಬಾಗಿಲು ಗಣಪತಿ ದೇವಸ್ಥಾನ ಸಮೀಪ ಸಮಾವೇಶಗೊಂಡ ಭಕ್ತರು, ಶಬರಿಮಲೆಯ ಧಾರ್ಮಿಕ ಆಚರಣೆ ಪದ್ಧತಿ ಉಳಿಸಿ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಗೌರವ ಕೊಡಿ ಎಂಬ ಘೋಷಣೆಯುಳ್ಳ ಫಲಕಗಳನ್ನು ಪ್ರದರ್ಶಿಸಿದರು. ಶಬರಿಮಲೆಯ ಮೂಲ ಸಂಪ್ರದಾಯ ಮತ್ತು ಆಶಯಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ನೀಡಿರುವ ಸರ್ವೋತ್ಛ ನ್ಯಾಯಾಲಯದ ತೀರ್ಪು ಖಂಡನೀಯ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

ಶಬರಿಮಲೆಯಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ಪದ್ಧತಿ ಸಂಬಂಧ ನ್ಯಾಯಾಲಯ ನೀಡಿರುವ ತೀರ್ಪು ಭಕ್ತರ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಇದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪದ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು. ಯಾವುದೋ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಈ ತೀರ್ಪು ನೀಡಿರುವುದು ಸರಿಯಲ್ಲ. ತೀರ್ಪು ಮರು ಪರಿಶೀಲನೆಗಾಗಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು. ಶಬರಿಮಲೆ ದೇವಸ್ಥಾನದ ನಂಬಿಕೆ ಹಾಗೂ ಪರಂಪರೆಗೆ ಧಕ್ಕೆಯಾಗಿದ್ದು ಅದನ್ನು ರಕ್ಷಿಸಲು ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬಳಿಕ ದೇಶದಲ್ಲಿನ ಹಿಂದೂ ಪರ ಸಂಘಟನೆಗಳು, ಬುಡಕಟ್ಟು ಜನರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮಹಿಳೆಯರಿಗೆ ಅಯ್ಯಪ್ಪಸ್ವಾಮಿ ದೇವಾಲಯದ ಒಳಗೆ ಪ್ರವೇಶಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಬುಡಕಟ್ಟು ಜನರ ಭಾವನೆಗಳನ್ನು ಸುಪ್ರೀಂ ಕೋರ್ಟ್‌ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. 

ಶ್ರೀ ಶಬರಿಮಲೈ ಅಯ್ಯಪ್ಪಸ್ವಾಮಿ ಸೇವಾ ಸಮಾಜಂ ಕರ್ನಾಟಕದ ಜಿಲ್ಲಾಧ್ಯಕ್ಷ ಶರಣ್‌ ಕುಮಾರ್‌, ಕಾರ್ಯದರ್ಶಿ ಬಿ.ಎಸ್‌. ಮೋಹನ್‌ ಕುಮಾರ್‌, ಚಿತ್ರದುರ್ಗ ಅಯ್ಯಪ್ಪಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಎಂ.ಪಿ. ವೆಂಕಟೇಶ್‌, ಗುರುಸ್ವಾಮಿ, ಸತೀಶ್‌ ಸ್ವಾಮಿ, ವಿಶ್ವ ಹಿಂದೂ ಪರಿಷತ್‌, ಭಜರಂಗದಳ ಹಾಗೂ ಚಾಮುಂಡೇಶ್ವರಿ ಅಯ್ಯಪ್ಪ ಭಜನಾ ಮಂಡಳಿ ಸದಸ್ಯರು, ಮುಖಂಡರು ಸೇರಿದಂತೆ ನೂರಾರು ಭಕ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next