“ಕಿಕ್ ಏರ್ ಬೇಕು ಅಂದ್ರೆ ಕ್ವಾಟ್ರಾ ಬೇಕು… ಒಂಟಿನ ಮುಟ್ಬೇಕು ಅಂದ್ರೆ ಮೀಟ್ರಾ ಬೇಕು…’ ಇಂಥದ್ದೊಂದು ಮಾಸ್ ಡೈಲಾಗ್ ಹೇಳಿ ಮುಗಿಸುವಷ್ಟರಲ್ಲಿ, “ಒಂಟಿ’ಯನ್ನು ಮುಟ್ಟಲು ಬಂದವರು ಅಡ್ಡಡ್ಡ ಬಿದ್ದಿರುತ್ತಾರೆ. ಇದು ಈ ವಾರ ತೆರೆಗೆ ಬಂದಿರುವ “ಒಂಟಿ’ ಚಿತ್ರದಲ್ಲಿ ಬರುವ ಒಂದು ದೃಶ್ಯ. ಇನ್ನು “ಒಂಟಿ’ ಚಿತ್ರದ ಟೈಟಲ್‌ನಲ್ಲೂ “ಆರಡಿ ಹೈಟು ನಿಂತ್ರೆ ಫೈಟು’ ಅಂಥ ಟ್ಯಾಗ್‌ಲೈನ್ ಇರುವುದರಿಂದ, “ಒಂಟಿ’ ಅಂದ್ರೆ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಚಿತ್ರ ಅನ್ನೋದನ್ನ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ.
ಇನ್ನು ಚಿತ್ರದ ಕಥಾಹಂದರದ ಬಗ್ಗೆ ಹೇಳುವುದಾದರೆ, ಅವನ ಮೂಲ ಹೆಸರು ಅಮರ್. ಆದ್ರೆ ಎಲ್ಲರೂ ಅವನನ್ನ “ಒಂಟಿ’ ಎಂದೇ ಕರೆಯುವುದರಿಂದ, ಅದೇ ಹೆಸರಿನಲ್ಲಿ ಅವನು ಫೇಮಸ್. ಮನೆಯಲ್ಲಿ ಅಮ್ಮ, ಅಣ್ಣ, ಸ್ನೇಹಿತ, ಪ್ರೀತಿಸುವ ಹುಡುಗಿ ಎಲ್ಲರೂ ಇದ್ದರೂ ಅವನು “ಒಂಟಿ’. ರೆಬಲ್ ವರ್ತನೆಯಿಂದ ಸಹಜವಾಗಿಯೇ “ಒಂಟಿ’ಗೆ ಒಂದಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಮುಂದೇನಾಗುತ್ತದೆ ಅನ್ನೋದೇ ಚಿತ್ರದ ಕ್ಲೈಮ್ಯಾಕ್ಸ್.
ಇಷ್ಟು ಹೇಳಿದ ಮೇಲೆ ಕನ್ನಡದಲ್ಲಿ ಇಂಥ ಲೆಕ್ಕವಿಲ್ಲದಷ್ಟು ಚಿತ್ರಗಳನ್ನು ನೋಡಿ ಪಂಟರ್ ಆಗಿರುವ ಪ್ರೇಕ್ಷಕರು ಕೂತಲ್ಲಿಯೇ ಚಿತ್ರದ ಕ್ಲೈಮ್ಯಾಕ್ಸ್ ಏನಂತ ಸುಲಭವಾಗಿ ಊಹಿಸಿಬಿಡುತ್ತಾರೆ. ಅದೇ ಊಹೆ ಚಿತ್ರದಲ್ಲಿ ನಿಜವಾಗುವುದರಿಂದ “ಒಂಟಿ’ ಕೊನೆವರೆಗೂ ಕುತೂಹಲ ಉಳಿಸಿಕೊಂಡು ಹೋಗುವುದೇ ಇಲ್ಲ. “ಒಂಟಿ’ ಗಾಂಧಿನಗರದ ಪಕ್ಕಾ ಮಾಸ್ ಪ್ರೇಕ್ಷಕರನ್ನೇ ಗಮನದಲ್ಲಿ ಇಟ್ಟುಕೊಂಡು ಬಂದಿರುವ ಚಿತ್ರ. ಹಾಗಾಗಿ, ಚಿತ್ರದಲ್ಲಿ ಕಥೆಯನ್ನು ಹೊರತುಪಡಿಸಿದರೆ, ಖಡಕ್ ಡೈಲಾಗ್ಸ್, ಭರ್ಜರಿ ಫೈಟು, ರಿಚ್ ಮೇಕಿಂಗ್ ಹೀಗೆ ಯಾವುದಕ್ಕೂ ಕೊರತೆ ಇಲ್ಲ.
ಅನ್ನ (ಕಥೆ)ವೇ ಹಳಸಿರುವಾಗ, ಅದಕ್ಕೆ ಎಷ್ಟು ಮಸಾಲೆ ಹಾಕಿದರೇನು, ಯಾವ “ಚಿತ್ರ’ನ್ನ ಮಾಡಿದರೇನು ಅದನ್ನು ಸವಿಯುವವರಿಗೆ ಸಪ್ಪೆಯಾಗಿಯೇ ಕಾಣುತ್ತದೆ. ಹಾಗಿದೆ “ಒಂಟಿ’ಯ ಪಾಡು. ಚಿತ್ರದಲ್ಲಿರುವ ಎಲ್ಲಾ ಅಂಶಗಳ ಜೊತೆಗೆ ಒಂದೊಳ್ಳೆ ಕಥೆ ಇದ್ದಿದ್ದರೆ, “ಒಂಟಿ’ಗೆ ಪ್ರೇಕ್ಷಕರು ಜಂಟಿಯಾಗುವ ಸಾಧ್ಯತೆಗಳಿದ್ದವು. ಇನ್ನು ನಾಯಕ ಕಂ ನಿರ್ಮಾಪಕ ಆರ್ಯ ಚಿತ್ರಕ್ಕೆ ಸಾಕಷ್ಟು ಪರಿಶ್ರಮ ಹಾಕಿರುವುದು ತೆರೆಮೇಲೆ ಕಾಣುತ್ತದೆ.
ಆ್ಯಕ್ಷನ್, ಡ್ಯಾನ್ಸ್, ಡೈಲಾಗ್ ಡೆಲಿವರಿ ಎಲ್ಲದರಲ್ಲೂ ಆರ್ಯ ಪರವಾಗಿಲ್ಲ ಎನ್ನಬಹುದು. ನಾಯಕಿ ಮೇಘನಾ ರಾಜ್ ಪಾತ್ರ “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಿದೆ. ಅದನ್ನು ಹೊರತುಪಡಿಸಿದರೆ ನೀನಾಸಂ ಅಶ್ವತ್ ಮತ್ತು ಬೆನಕ ಪವನ್ ಅಭಿನಯ ಗಮನ ಸೆಳೆಯುತ್ತದೆ. ಉಳಿದ ಪಾತ್ರಗಳ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ. ಹಾಡಿಗಿಂತ ಹಿನ್ನೆಲೆ ಸಂಗೀತದ ಅಬ್ಬರವೇ “ಒಂಟಿ’ಗೆ ಜೋರಾಗಿದೆ. ಚಿತ್ರದ ಛಾಯಾಗ್ರಹಣ, ಸಂಕಲನ ಗಮನ ಸೆಳೆಯುತ್ತದೆ.
ಚಿತ್ರ: ಒಂಟಿ
ನಿರ್ಮಾಣ: ಆರ್ಯ
ನಿರ್ದೇಶನ: ಶ್ರೀ
ತಾರಾಗಣ: ಆರ್ಯ, ಮೇಘನಾ ರಾಜ್, ದೇವರಾಜ್, ನೀನಾಸಂ ಅಶ್ವಥ್, ಶರತ್ ಲೋಹಿತಾಶ್ವ, ಬೆನಕ ಪವನ್, ಗಿರಿಜಾ ಲೋಕೇಶ್, ರಾಕ್‌ಲೈನ್ ಸುಧಾಕರ್ ಮತ್ತಿತರರು.
* ಜಿ. ಎಸ್ ಕಾರ್ತಿಕ ಸುಧನ್