ಉದಯವಾಣಿ ಸಮಾಚಾರ
ಗಜೇಂದ್ರಗಡ: ರಂಗು ರಂಗಿನ ಹೋಳಿ ಹಬ್ಬದಾಚರಣೆಗೆ ದಿನಗಣನೆ ಶುರುವಾಗಿದ್ದರೆ, ಇತ್ತ ದಕ್ಷಿಣ ಕಾಶಿ ಪ್ರಸಿದ್ಧಿ ಶ್ರೀ ಕಾಲಕಾಲೇಶ್ವರ ಸನ್ನಿಧಾನ ಸುತ್ತಲಿನ ಏಳು ಗ್ರಾಮಗಳಲ್ಲಿ ಹೋಳಿ ಹಬ್ಬ ಆಚರಿಸಲ್ಲ. ಹಬ್ಬ ಆಚರಿಸಿದರೆ ಗಂಡಾಂತರ ಕಟ್ಟಿಟ್ಟ ಬುತ್ತಿ ಎನ್ನುವ ಆತಂಕ ಗ್ರಾಮಸ್ಥರಲ್ಲಿ ಬೇರೂರಿದೆ.ಹೀಗಾಗಿ ಹೋಳಿ ಹಬ್ಬ ಸಂಭ್ರಮ ಇಲ್ಲಿರುವುದಿಲ್ಲ.
ಕಾಲಕಾಲೇಶ್ವರ, ಬೈರಾಪುರ, ಬೈರಾಪುರ ತಾಂಡಾ, ಜಿಗೇರಿ, ರಾಜೂರ ಲಕ್ಕಲಕಟ್ಟಿ, ದಿಂಡೂರ ಗ್ರಾಮದಲ್ಲಿ ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ, ಪರಸ್ಪರ ಬಣ್ಣ ಎರಚುವುದು, ಬಾಯಿ ಬಡಿದುಕೊಳ್ಳುವುದಾಗಲಿ, ಹೋಳಿಗೆ ಊಟ ಮಾಡಿದರೆ ಗ್ರಾಮದಲ್ಲಿ ಸಾಮೂಹಿಕ ಕೇಡಾಗುವುದು (ಅವಘಡ) ನಿಶ್ಚಿತ ಎಂಬ ಅಪನಂಬಿಕೆ ಗ್ರಾಮಸ್ಥರ ಮನದಲ್ಲಿ ಬಲವಾಗಿ ನೆಲೆಯೂರಿದೆ. ಹೀಗಾಗಿ ಬರುವ ಹೋಳಿ ಹಬ್ಬ ಸಾಮೂಹಿಕವಾಗಿ ಆಚರಿಸದಿರಲು ಏಳು ಹಳ್ಳಿಗಳ ಜನತೆ ನಿರ್ಧರಿಸಿದ್ದಾರೆ.
ಆಚರಿಸಿದರೆ ರುದ್ರನ ಕೆಂಗಣ್ಣಿಗೆ ಗುರಿ: ಏಳು ಊರಗಳಲ್ಲಿ ಹೋಳಿ ಹಬ್ಬ ಆಚರಿಸಲ್ಲ. ಏಕೆ ಅಂತಿರಾ? ಅಲ್ಲಿ ಹೋಳಿ ಹಬ್ಬ ಆಚರಣೆ ಮಾಡಿ ನೂರಾರು ವರ್ಷಗಳಾಗಿವೆ. ನಾಡಿನ ಅಸಂಖ್ಯಾತ ಭಕ್ತರು ಕುಲದೇವರೆಂದು ಆರಾಧಿಸುವ ಲಿಂಗಸ್ವರೂಪಿ ಶ್ರೀ ಕಾಲಕಾಲೇಶ್ವರ ದೇವರು ನೆಲೆ ಜೊತೆ ಮತ್ತೂಂದು ಗುಡ್ಡದ ಮೇಲೆ ರುದ್ರಪಾದ ಇರುವುದರಿಂದ ರುದ್ರಭೂಮಿ ಎಂದು ಕರೆಯಲಾಗುತ್ತದೆ. ಪರಶಿವನ ಮೂರನೇ ಕೆಂಗಣ್ಣಿಗೆ ಗುರಿಯಾದ ಕಾಮಣ್ಣನ ದಹಿಸುವ ಹೋಳಿ ಹಬ್ಬವನ್ನು ತಲೆ ತಲಾಂತರದಿಂದ ಸುತ್ತಲಿನ ಏಳು ಗ್ರಾಮಗಳಲ್ಲಿ ಆಚರಿಸಿಕೊಂಡು ಬಂದಿಲ್ಲ ಎನ್ನುವುದು ಹಿರಿಯರ ನಂಬಿಕೆ.
ಕೆಲ ವರ್ಷ ಹಿಂದೆ ರಾಜೂರಲ್ಲಿ ಕೆಲವರು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು. ಹಬ್ಬ ಆಚರಣೆ ಮಾಡಿದ ಬಳಕ ಗ್ರಾಮದಲ್ಲಿ ಅನೇಕ ಅವಘಡಗಳು ಸಂಭವಿಸಿದವು. ಗುಡಿಸಲುಗಳು ಸುಟ್ಟು ನಷ್ಟ ಉಂಟಾಯಿತು. ಈ ಹಿನ್ನೆಲೆಯಲ್ಲಿ
ಊರಲ್ಲಿ ಹೋಳಿ ಹಬ್ಬ ಆಚರಿಸುವುದಿಲ್ಲ. ಏಳು ಗ್ರಾಮದ ಜನತೆ ಹೋಳಿ ಹಬ್ಬ ಮರೆತು ಸಾಕಷ್ಟು ವರ್ಷಗಳಾಗಿವೆ. ಏಕೇ ಏನು ಎಂಬ ಪ್ರಶ್ನೆಗೆ ಇನ್ನೂ ಕೆಲವರ ಉತ್ತರ ಹೀಗಿದೆ.
ಕೆಲ ವರ್ಷ ಹಿಂದೆ ಗ್ರಾಮದಲ್ಲಿ ಎಲ್ಲರಂತೆ ಕೆಲ ಯುವಕರು ಸಣ್ಣ ಮಕ್ಕಳಂತೆ ಕಟ್ಟಿಗೆ ಕುಳ್ಳನ್ನು ತುಡುಗು ಮಾಡಿಕೊಂಡು ಬಂದು, ಒಂದು ಕಡೆ ಮಾಳಿಗೆ ಮೇಲೆ ಸಂಗ್ರಹಿಸಿದರು. ನಂತರ ಹೋಳಿ ಹಬ್ಬದಂದು ಕಾಮಣ್ಣನನ್ನು ದಹಿಸುವಾಗ ಬಾಯಿ ಬಾಯಿ ಬಡಿದುಕೊಂಡು ದಹಿಸುವುದು, ಹೀಗೆ ಪ್ರತಿಯೊಂದು ಕಾರ್ಯ ಚಾಚೂ ತಪ್ಪದೇ ಪಾಲಿಸಿದರು. ಆದರೆ ಹಬ್ಬ ಆಚರಿಸುವುದರಿಂದ ಊರಿನಲ್ಲಿ ಕೆಲವೊಂದು ಅನಾಹುತಕಾರಿ ಘಟನೆಗಳು ಸಂಭವಿಸಲು ಪ್ರಾರಂಭಿಸಿದವು. ಆಗ ಊರಲ್ಲಿ ಎಲ್ಲರೂ ಸೇರಿಕೊಂಡು ಹೋಳಿ ಹಬ್ಬ ಆಚರಿಸುವುದು ಬೇಡ ಎಂದು ನಿರ್ಧರಿಸಲಾಗಿದೆ ಎಂದು ಗ್ರಾಮಸ್ಥರು ಹಬ್ಬ ಆಚರಣೆಯಿಂದಾದ ಅವಘಡ ಈಗಲೂ ನೆನಪಿಸಿಕೊಳ್ಳುವುದುಂಟು.