ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿ ಬೆಳಗಾವಿ ಆಗಮಿಸಿದ್ದು, ಬಿಜೆಪಿ ನಾಯಕರು ಮೋದಿಯವರನ್ನು ಸಂಭ್ರಮದಿಂದ ಬರಮಾಡಿಕೊಂಡರು. ಕಾರಿನಲ್ಲಿ ರಸ್ತೆ ಮಾರ್ಗವಾಗಿ ಮೋದಿ ಹೊಟೇಲ್‌ಗೆ ತೆರಳಿದರು.
ಪ್ರಧಾನಿ ನರೇಂದ್ರ ಮೋದಿ ರಾತ್ರಿ 10 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಮೋದಿಯವರನ್ನು ಬಿಜೆಪಿ ನಾಯಕರು, ಜಿಲ್ಲೆಯ ವಿವಿಧ ಸಮುದಾಯದ ಪ್ರಮುಖರು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಪ್ರೇಮ್ ಹಾಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು. ಜಿಲ್ಲೆಯ ಶಾಸಕರು, ಬೂತ್ ಅಧ್ಯಕ್ಷರು ಇದ್ದರು.
ಬೆಳಗಾವಿ ವಿಮಾನ ನಿಲ್ದಾಣದಿಂದ ಮೋದಿ ಕಾರಿನಲ್ಲಿ ರಸ್ತೆ ಮಾರ್ಗವಾಗಿ ಕಾಕತಿಯ ಐಟಿಸಿ ಹೊಟೇಲ್‌ವರೆಗೆ ತೆರಳಿದರು. ಪ್ರಧಾನಿ ಮೋದಿ ಆಗಮನಕ್ಕಾಗಿ ರಾತ್ರಿ 8 ಗಂಟೆಯಿಂದಲೇ ಜನರು ರಸ್ತೆಯುದ್ದಕ್ಕೂ ಕಾಯುತ್ತ ನಿಂತಿದ್ದರು. ಸಾಂಬ್ರಾ, ಮುತಗಾ, ನಿಲಜಿ, ಬಸವನ ಕುಡಚಿ, ಗಾಂಧಿ ನಗರ, ರಾಷ್ಟೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಜನ ನಿಂತು ಮೋದಿಯನ್ನು ನೋಡಿ ಸಂತಸಪಟ್ಟರು. ಮೋದಿ ಕಾರಿನಲ್ಲಿ ಹಾದು ಹೋಗುವಾಗ ಜನರತ್ತ ಕೈಬೀಸಿ ಹುರಿದುಂಬಿಸಿದರು.
ಮೋದಿ ಸಾಗುತ್ತಿದ್ದ ಮಾರ್ಗದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಮೋದಿ ಕಪ್ಪು ಬಣ್ಣದ ಕಾರಿನಲ್ಲಿ ಮುಂದಿನ ಸೀಟ್ ನಲ್ಲಿ ಕುಳಿತಿದ್ದರು. ಜನರು ಮೋದಿಯನ್ನು ನೋಡಿ ಪುಳಕಿತಗೊಂಡರು. ಅನೇಕರು ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸುತ್ತಿರುವುದು ಕಂಡು ಬಂತು. ಹರ್ ಹರ್ ಮೋದಿ, ಘರ್ ಘರ್ ಮೋದಿ, ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂಬ ಘೋಷಣೆಗಳು ಮೊಳಗುತ್ತಿದ್ದವು. ಬಿಜೆಪಿ ಕಾರ್ಯಕರ್ತರು ಬಿಜೆಪಿ ಧ್ವಜಗಳನ್ನು ಹಿಡಿದುಕೊಂಡು ಮೋದಿಯನ್ನು ಸ್ವಾಗತಿಸಿದರು.
ಹೋಟೆಲ್ ಮತ್ತು ಸುತ್ತಮುತ್ತಲೂ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.