ಬೆಳಗಾವಿ: ಎರಡು ದಿನಗಳ ಹಿಂದೆಯಷ್ಟೇ ಚುಚ್ಚುಮದ್ದು ಪಡೆದಿದ್ದ ಮೂರು ಶಿಶುಗಳು ಬೆಳಗಾವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಮಲ್ಲಾಪುರ ಗ್ರಾಮದಲ್ಲಿ ಜ. 11ರಂದು ಚುಚ್ಚುಮದ್ದು ನೀಡಿರುವ ನಾಲ್ಕು ಶಿಶುಗಳ ಪೈಕಿ ಒಂದು ಮಗು ಮೃತಪಟ್ಟಿದ್ದು, ಜ. 12ರಂದು ಬೋಚಬಾಳ ಗ್ರಾಮದಲ್ಲಿ 21 ಮಕ್ಕಳಿಗೆ ಚುಚ್ಚುಮದ್ದು ನೀಡಿದ್ದು, ಅದರಲ್ಲಿ ಇಬ್ಬರು ಕಂದಮ್ಮಗಳು ಅಸುನೀಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ಮೂರು ಕಂದಮ್ಮಗಳು ಚಿಕಿತ್ಸೆ ಫಲಿಸದೇ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪವಿತ್ರಾ ಹುಲಗುರ(13 ತಿಂಗಳು), ಮಧು ಉಮೇಶ ಕುರಗುಂದಿ(14 ತಿಂಗಳು) . ಚೇತನ ಪೂಜಾರಿ (15 ತಿಂಗಳು) ಎಂಬ ಶಿಶುಗಳು ಮೃತಪಟ್ಟಿವೆ.
ರಾಮದುರ್ಗ ತಾಲೂಕಿನ ಮಲ್ಲಾಪುರ- ಬೋಚಬಾಳ ಗ್ರಾಮದಲ್ಲಿ ರುಬೆಲ್ಲಾ ಚುಚ್ಚುಮದ್ದು ನೀಡಲಾಗಿತ್ತು. ಚುಚ್ಚುಮದ್ದು ನೀಡಿದ ಬಳಿಕ ಮಕ್ಕಳಿಗೆ ವಾಂತಿ ಭೇದಿ ಶುರುವಾಗಿದೆ. ಮನೆಯಲ್ಲಿ ಇದ್ದಾಗ ವಾಂತಿ ಹೆಚ್ಚಾಗಿತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೂರು ಮಕ್ಕಳ ಸಾವಿನ ಬಗ್ಗೆ ತನಿಖೆ ಆರಂಭವಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ತಿಳಿಯಲಿದೆ. ಚುಚ್ಚುಮದ್ದು ನೀಡುವಾಗ ಏನಾದರೂ ಎಡವಟ್ಟು ಆಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯಬೇಕಾಗಿದೆ. ನಿಗೂಢ ಸಾವಿನ ಬಳಿಕ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.