Advertisement

ಸಚಿವ ಡಿಕೆಶಿ ಸಂಧಾನ;ಬೆಳಗಾವಿ ರೈತರ ಪ್ರತಿಭಟನೆ ತಾತ್ಕಾಲಿಕವಾಗಿ ವಾಪಸ್

12:28 PM Nov 23, 2018 | Team Udayavani |

ಬೆಳಗಾವಿ : ಕಬ್ಬಿಗೆ ಸೂಕ್ತ ದರ ನಿಗದಿ , ಬಾಕಿ ಹಣ ಕೊಡಿಸುವಂತೆ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಹೋರಾಟವನ್ನು  ತಾತ್ಕಾಲಿಕವಾಗಿ ಶುಕ್ರವಾರ ಹಿಂಪಡೆಯಲಾಗಿದೆ. ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು 15 ದಿನಗಳೊಳಗೆ ಬಾಕಿ ಹಣ ನೀಡುವಂತೆ ಸೂಚಿಸಿದ ಬೆನ್ನಲ್ಲೇ ಸಚಿವ ಡಿ.ಕೆ.ಶಿವಕುಮಾರ್‌ ಅವರು ಧರಣಿ ನಿರತ ಸ್ಥಳಕ್ಕೆ ತೆರಳಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Advertisement

ಕಾರ್ಯಕ್ರಮವೊಂದಕ್ಕಾಗಿ ಆಗಮಿಸಿದ್ದ ಸಚಿವ ಡಿಕೆಶಿ ಅವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ರೈತರ ಮನವೊಲಿಸಿದರು. 

2 ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಸಿದ್ದನಗೌಡ ಮೊದಗಿ ಮತ್ತು ಜಯಶ್ರಿ  ಅವರಿಗೆ ಮೊದಲು ಎಳನೀರನ್ನು ಕುಡಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ ರೈತರು ನ್ಯಾಯೋಚಿತ ಹೋರಾಟ ನಡೆಸಿದ್ದಾರೆ. ಸರ್ಕಾರದ ಗಮನ ಸೆಳೆದಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುತ್ತೇವೆ.ರೈತರು ನಮ್ಮವರು ,ನಾವು ರೈತರ ಪರ ಇರುವವರು
 ಎಂದರು. 

15 ದಿನದ ಗಡುವು,ತಾತ್ಕಾಲಿಕ ಅಂತ್ಯ 
ಹೋರಾಟ ನಿರತ ರೈತರು 15 ದಿನಗಳ ಗಡುವನ್ನು ಸರ್ಕಾರಕ್ಕೆ ನೀಡಿದ್ದಾರೆ.ಮಾತ್ರವಲ್ಲದೆ ಬೇಡಿಕೆ ಈಡೇರದೆ ಹೊದಲ್ಲಿ ಮತ್ತೆ ಹೋರಾಟ ಆರಂಭಿಸುವ ಎಚ್ಚರಿಕೆ ನೀಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ರೈತರು ಧರಣಿ ನಡೆಸುತ್ತಿದ್ದರು. 

Advertisement

ರಮೇಶ್‌ ಜಾರಕಿಹೊಳಿ ಸೇರಿ ಪ್ರಮುಖ ನಾಯಕರ ವಿರುದ್ಧ ದೂರು 

 ರೈತರು ಸಚಿವ ಡಿ.ಕೆ.ಶಿವಕುಮಾರ್‌ ಅವರ ಬಳಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಕಾರ್ಖಾನೆ ಬಾಕಿ ಇರಿಸಿಕೊಂಡಿರುವ ಹಣದ ಕುರಿತಾಗಿ ದಾಖಲೆಗಳನ್ನು  ತೋರಿಸಿದ್ದಾರೆ. ಮಾತ್ರವಲ್ಲದೆ ಬಿಜೆಪಿ ನಾಯಕರು ಸೇರಿ ಪ್ರಮುಖ ಕಾರ್ಖಾನೆ ಮಾಲೀಕರು ಬಾಕಿ ಇರಿಸಿಕೊಂಡಿರುವ ಬಗ್ಗೆ ದಾಖಲೆಗಳನ್ನು ತೋರಿಸಿದ್ದಾರೆ ಎಂದು ವರದಿಯಾಗಿದೆ.  

ಡಿಸಿಗೆ ಬಿಗಿ ಭದ್ರತೆ 
ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಪೊಲೀಸರ ಬಿಗಿ ಭದ್ರತೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನ ಹಳ್ಳಿ ಕಚೇರಿಗೆ ಆಗಮಿಸಿದರು. ಈ ವೇಳೆ ರೈತರು ಧಿಕ್ಕಾರಗಳನ್ನು ಕೂಗಿದರು. 

 ರೈತರಿಗೆ ಕಳೆದ ವರ್ಷದ ಕಬ್ಬಿನ ಬಾಕಿ ನೀಡಬೇಕಾದ ವಿಚಾರದಲ್ಲಿ ಸಕ್ಕರೆ ಕಾರ್ಖಾನೆ
ಮಾಲೀಕರು ರೈತರೊಂದಿಗೆ ಮಾಡಿಕೊಂಡ ಮೌಖೀಕ ಒಪ್ಪಂದದಂತೆ ಮುಂದಿನ ಹದಿನೈದು ದಿನಗಳೊಳಗೆ ಬಾಕಿ ಹಣ ಕೊಡುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next