ಬೆಳಗಾವಿ: ಕೈಗಾರಿಕಾ ಅಧ್ಯಯನ ಪ್ರವಾಸ ಮುಗಿಸಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲವನ್ ಬಳಿಯ ವಾಯರಿ-ಭೂತನಾಥ ಬೀಚ್‌ಗೆ ತೆರಳಿದ್ದ ನಗರದ ಮರಾಠಾ ಮಂಡಳ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಹಾಗೂ ಏಳು ವಿದ್ಯಾರ್ಥಿಗಳು ಸೇರಿ ಎಂಟು ಮಂದಿ ಸಮುದ್ರಪಾಲಾದ ಘಟನೆ ಶನಿವಾರ ಸಂಭವಿಸಿದೆ.
ಬೆಳಗ್ಗೆ 11:30ರ ಸುಮಾರಿಗೆ ದುರ್ಘಟನೆ ಸಂಭವಿಸಿದ್ದು, ಮೃತರಲ್ಲಿ ಮೂವರು ವಿದ್ಯಾರ್ಥಿನಿಯರು, ನಾಲ್ವರು ವಿದ್ಯಾರ್ಥಿಗಳು ಸೇರಿದ್ದಾರೆ. ಇವರೆಲ್ಲರೂ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದವರಾಗಿದ್ದಾರೆ.
ಸಹಾಯಕ ಪ್ರಾಧ್ಯಾಪಕ ಖಾಸಬಾಗ ನಿವಾಸಿ ಮಹೇಶ ಕುಡುಚಕರ (32), ವಿದ್ಯಾರ್ಥಿಗಳಾದ ಸಾಂಬ್ರಾ ಗ್ರಾಮದ ಆರತಿ ದಿಲೀಪ ಚವ್ಹಾಣ(21), ಕರುಣಾ ಬೇರ್ಡೆ(21), ಬಂಬರಗಾ ಗ್ರಾಮದ ಮಾಯಾ ಕೋಲೆØ (21), ತುರಮರಿ ಗ್ರಾಮದ ಕಿರಣ ಖಾಂಡೇಕರ(21), ಕಾಕತಿ ಗ್ರಾಮದ ನಿತೀನ ಭೀಮಾ ಮುತ್ನಾಳಕರ(21), ಮುಜಮಿನ್ ಅಣ್ಣಿಗೇರಿ (20) ಹಾಗೂ ಅವಧುತ ತಹಶೀಲ್ದಾರ(20) ಮೃತಪಟ್ಟವರು. ಉಳಿದಂತೆ ರಕ್ಷಿಸಲ್ಪಟ್ಟ ಮೂವರ ಪೈಕಿ ಆಕಾಂಕ್ಷಾ ಗಾಡಗೆ ಎಂಬವರ ಸ್ಥಿತಿ ಗಂಭೀರವಾಗಿದ್ದು, ಮಾಲವಣ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಂಕೇತ ಗಾಡವಿ, ಅನಿತಾ ಹಾನಲಿ ಅವರಿಗೆ ಸ್ಥಳೀಯ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮರಾಠಾ ಮಂಡಳ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಬ್ಬರು ಸಹಾಯಕ ಪ್ರಾಧ್ಯಾಪಕರೊಂದಿಗೆ ಪುಣೆಯ ಇ ಆ್ಯಂಡ್ ಸಿ ಕಂಪನಿಯ ಕೈಗಾರಿಕಾ ಅಧ್ಯಯನ ಪ್ರವಾಸಕ್ಕೆ ಬುಧವಾರ ರಾತ್ರಿ ತೆರಳಿದ್ದರು. ಗುರುವಾರ ಹಾಗೂ ಶುಕ್ರವಾರ ಅಧ್ಯಯನ ಪ್ರವಾಸ ಮುಗಿಸಿ ಶನಿವಾರ ಬೆಳಗಾವಿಗೆ ವಾಪಸ್ಸಾಗುತ್ತಿದ್ದರು. ನಿಗದಿಯಂತೆ ಪ್ರವಾಸ ಪಟ್ಟಿಯಲ್ಲಿ ಮಾಲವಣ್ ಪ್ರದೇಶ ಇರಲಿಲ್ಲ. ಆದರೆ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಅಲ್ಲಿಗೆ ತೆರಳಿ ಸಮುದ್ರಕ್ಕೆ ಇಳಿದು ಸ್ನಾನ ಮಾಡುವಾಗ ಈ ಅವಘಡ ಸಂಭವಿಸಿದೆ.
ಸಂಕಷ್ಟಿ ಮರುದಿನ ಸಮುದ್ರದಲ್ಲಿ ತೆರೆಗಳ ಅರ್ಭಟ ಜೋರಾಗಿದೆ ಎಂದು ಸ್ಥಳೀಯರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೆ ಇದನ್ನು ನಿರ್ಲಕ್ಷಿಸಿ ವಿದ್ಯಾರ್ಥಿಗಳು ನೀರಿಗೆ ಇಳಿದಿದ್ದರು ಎಂದು ಹೇಳಲಾಗಿದೆ. ಸಮುದ್ರದಲ್ಲಿ ಮುಂದೆ ಹೋಗುತ್ತಿದ್ದಂತೆ ಆಳ ಹೆಚ್ಚಾಗಿದೆ. 11 ಮಂದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ನೋಡಿದ ಸ್ಥಳೀಯ ಮೀನುಗಾರರು ತಕ್ಷಣ ಮೂವರನ್ನು ರಕ್ಷಿಸಿ ಸಾವಂತವಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನುಳಿದ ಎಂಟು ಜನ ಸಮುದ್ರ ಪಾಲಾಗಿದ್ದು. ಎಲ್ಲ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಇನ್ನು ಘಟನೆ ನಡೆದಿರುವ ಬಗ್ಗೆ ಮಾಹಿತಿ ಪಡೆಯಲು ವಿದ್ಯಾರ್ಥಿಗಳ ಪಾಲಕರು ಹಾಗೂ ಸಂಬಂಧಿಕರು ಮರಾಠಾ ಮಂಡಳ ಕಾಲೇಜಿಗೆ ಬಂದರೆ ಅಲ್ಲಿ ಯಾರೂ ಇರಲಿಲ್ಲ. ಶನಿವಾರ ರಜೆ ಇದ್ದಿದ್ದರಿಂದ ಮಾಹಿತಿ ಸಿಗದೇ ಪಾಲಕರು ಪರದಾಡುತ್ತಿದ್ದರು. ಇನ್ನೊಂದೆಡೆ ವಿದ್ಯಾರ್ಥಿಗಳು ನೀರುಪಾಲಾದ ಸುದ್ದಿ ತಿಳಿಯುತ್ತಿದ್ದಂತೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಆಡಳಿತ ಮಂಡಳಿಯವರು ಮಾಲವಣ್‌ಗೆ ತೆರಳಿದ್ದರು.
ಅನುಮತಿ ಪಡೆದಿರಲಿಲ್ಲ
ವಿದ್ಯಾರ್ಥಿಗಳು ಅಧ್ಯಯನ ಪ್ರವಾಸ ಕೈಗೊಳ್ಳಲು ಯಾವುದೇ ಅನುಮತಿ ಪಡೆದಿರಲಿಲ್ಲ. ಕಾಲೇಜಿನ ಅಧ್ಯಯನ ಪ್ರವಾಸ ಮುಂದಿನ ವಾರ ನಿಗದಿಯಾಗಿತ್ತು. ವಿದ್ಯಾರ್ಥಿಗಳು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಪ್ರವಾಸಕ್ಕೆ ತೆರಳಿದ್ದರು.
– ರಾಜಶ್ರೀ ಹಲಗೇಕರ, ಮರಾಠಾ ಮಂಡಳ ಸಂಸ್ಥೆ ಚೇರಮನ್