Advertisement

Belgaum: ದಂಡು ಮಂಡಳಿ ಸಿಇಒ ಆನಂದ ಆತ್ಮಹತ್ಯೆ

11:43 PM Nov 25, 2023 | Team Udayavani |

ಬೆಳಗಾವಿ: ಕೇಂದ್ರ ರಕ್ಷಣ ಇಲಾಖೆಗೆ ಸೇರಿದ ನಗರದ ದಂಡು ಮಂಡಳಿಯ (ಕಂಟೋನ್ಮೆಂಟ್‌) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆನಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕ್ಯಾಂಪ್‌ ಪ್ರದೇಶದಲ್ಲಿರುವ ತಮ್ಮ ನಿವಾಸ ದಲ್ಲೇ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಒಂದೂವರೆ ವರ್ಷದಿಂದ ಸಿಇಒ ಆಗಿದ್ದ ಅವರು ಮೂಲತಃ ತಮಿಳುನಾಡಿನವರು.

Advertisement

2015ರ ಬ್ಯಾಚ್‌ನ ಇಂಡಿಯನ್‌ ಡಿಫೆನ್ಸ್‌ ಎಸ್ಟೇಟ್‌ ಸರ್ವಿಸ್‌ ಅಧಿಕಾರಿಯಾಗಿದ್ದ ಅವರು ಅವಿವಾಹಿತರಾಗಿದ್ದು, ಕ್ಯಾಂಪ್‌ ಪ್ರದೇಶದಲ್ಲಿರುವ ಸರಕಾರಿ ಬಂಗಲೆಯಲ್ಲಿ ಒಂಟಿಯಾಗಿದ್ದರು. ಗುರುವಾರ ಸಂಜೆ ಮಲಗುವ ಕೋಣೆಗೆ ಹೋದವರು ಹೊರಬಂದಿರಲಿಲ್ಲ. ಅನುಮಾನಗೊಂಡ ಮನೆ ಕೆಲಸದವರು ಶನಿವಾರ ಬೆಳಗ್ಗೆ ಕಂಟೋನ್ಮೆಂಟ್‌ ಬೋರ್ಡ್‌ ಮಾಜಿ ಉಪಾಧ್ಯಕ್ಷ ಸಾಜಿದ್‌ ಶೇಖ್‌ಗೆ ತಿಳಿಸಿದರು. ಅನಂತರ ಕ್ಯಾಂಪ್‌ ಠಾಣೆ ಪೊಲೀಸರು ಆಗಮಿಸಿ ಬಾಗಿಲು ಮುರಿದು ಒಳಹೋದಾಗ ಆನಂದ ಶವ ಬೆಡ್‌ ಕೆಳಗೆ ಬಿದ್ದಿರುವುದು ಪತ್ತೆಯಾಗಿತ್ತು.
ಸಿಬಿಐ ದಾಳಿ ನಡೆದಿತ್ತು

ದಂಡು ಮಂಡಳಿ ನೇಮಕಾತಿಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂಬ ಆರೋಪ ಹಾಗೂ ದೂರುಗಳ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಸಿಬಿಐ ಅಧಿಕಾರಿಗಳು ಮಂಡಳಿ ಕಚೇರಿಗೆ ದಾಳಿ ನಡೆಸಿ ಆನಂದ ಅವರನ್ನು ತೀವ್ರ ವಿಚಾರಣೆ ನಡೆಸಿದ್ದರು. ಈ ದಾಳಿ ಬೆನ್ನಲ್ಲೇ ಈಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಸುದ್ದಿ ತಿಳಿದ ಕೂಡಲೇ ಮರಾಠಾ ಲಘು ಪದಾತಿ ದಳ ಕೇಂದ್ರದ ಹಿರಿಯ ಸೇನಾಧಿಕಾರಿಗಳು ಮತ್ತು ನಗರ ಪೊಲೀಸ್‌ ಆಯುಕ್ತ ಎನ್‌. ಸಿದ್ದರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಡೆತ್‌ನೋಟ್‌ ಪತ್ತೆ
ಅನಂತರ ಸುದ್ದಿಗಾರರ ಜತೆ ಮಾತನಾಡಿದ ಸಿದ್ಧರಾಮಪ್ಪ ಅವರು, ಆನಂದ ಅವರ ಹಾಸಿಗೆ ಮೇಲೆ ವಿಷದ ಬಾಟಲಿ ಹಾಗೂ ಡೆತ್‌ನೋಟ್‌ ಪತ್ತೆಯಾಗಿದೆ. ಡೆತ್‌ನೋಟ್‌ನಲ್ಲಿ ಸಿಬಿಐ ದಾಳಿ ಕುರಿತು ಉಲ್ಲೇಖವಿಲ್ಲ. ಎಲ್ಲ ಸಾಕ್ಷ್ಯಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next