Advertisement

ಬೆಳಗಾವಿ-ಸೋಲಿನ ಭಯದಿಂದ ಕಾಂಗ್ರೆಸ್‌ ಹತಾಶ: ಜಗದೀಶ ಶೆಟ್ಟರ

03:57 PM May 06, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಸೋಲಿನ ಭಯದಿಂದ ಕಾಂಗ್ರೆಸ್‌ ನಾಯಕರು ಹತಾಶರಾಗಿದ್ದಾರೆ. ಹೀಗಾಗಿ ವಾಮಮಾರ್ಗ ಹಿಡಿದು ಎಲ್ಲ ಕಡೆ ಹಣ ಹಂಚುವ ಕಾರ್ಯಕ್ಕೆ ಇಳಿದಿದ್ದಾರೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ನೇರ ಆರೋಪ ಮಾಡಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಆಭಿವೃದ್ಧಿಗೆ ಕಾಂಗ್ರೆಸ್‌ ಕೊಡುಗೆ ಶೂನ್ಯ. ಅದೇ ಬಿಜೆಪಿ ಸಾಧನೆಯ ದೊಡ್ಡ ಪಟ್ಟಿಯೇ ಇದೆ. ಇದರಿಂದ ಹತಾಶಗೊಂಡಿರುವ ಕಾಂಗ್ರೆಸ್‌ ಮತದಾರರಿಗೆ ಹಣ ಹಂಚುವ ಕಾರ್ಯ ಆರಂಭಿಸಿದ್ದಾರೆ ಎಂದರು.

ಗೋಕಾಕ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚುವಾಗ ನಮ್ಮ ಕಾರ್ಯಕರ್ತರ ಕೈಗೆ ಸಿಕ್ಕುಬಿದ್ದಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಟಾಳಕರ ಇದರ ಹಿಂದೆ ಇರುವುದು ಗೊತ್ತಾಗಿದೆ. ಬೆಳಗಾವಿಯ ಶಹಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲು ನಮ್ಮವರು ಹೋದಾಗ ಹಣ ಹಿಡಿದುಕೊಟ್ಟವರ ಮೇಲೆಯೇ ಪ್ರಕರಣ ದಾಖಲಿಸುವ ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ. ಇಲ್ಲಿ ಕಾಂಗ್ರೆಸ್‌ನವರಿಂದ ಆಧಿಕಾರ ದುರುಪಯೋಗ ವಾಗುತ್ತಿದೆ. ನಾವು ಈ ಸಂಬಂಧ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ದವರು ಹಣದಿಂದ ಚುನಾವಣೆ ಗೆಲ್ಲಬಹುದು ಎಂಬ ಉತ್ಸಾಹದಲ್ಲಿದ್ದಾರೆ. ಆದರೆ ಜನರು ಅವರಿಂದ ಹಣ ಪಡೆದು ಬಿಜೆಪಿಗೆ ಮತಹಾಕಲಿದ್ದಾರೆ. ಜಿಲ್ಲೆಯ ಜನರಿಗೆ ಕಾಂಗ್ರೆಸ್‌ನ ಧೋರಣೆ ಹಾಗೂ ಮೋದಿ ಅವರ ಜನಪ್ರಿಯತೆಯ ಅರಿವಾಗಿದೆ ಎಂದರು.

ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳು ಏನೇನೋ ಹೇಳುತ್ತಾರೆ. ಇದು ಬ್ರಿಟಿಷರ ವಿರುದ್ಧದ ಹೋರಾಟವೇ ಎಂದು ಮರು ಪ್ರಶ್ನೆ
ಹಾಕಿದರು.

Advertisement

ಕೊರೊನಾ ಸೋಂಕಿನಿಂದ ದೆಹಲಿಯಲ್ಲಿ ಮೃತಪಟ್ಟ ಸುರೇಶ ಅಂಗಡಿ ಅವರ ಮೃತದೇಹವನ್ನು ಬಿಜೆಪಿ ಯವರು ಬೆಳಗಾವಿಗೆ ತರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ, ನಾವು ಮೃತದೇಹ ತರಲು ಸಾಕಷ್ಟು ಪ್ರಯತ್ನ ಮಾಡಿದೆವು. ಆಗ ಕಾನೂನು ತೊಡಕಿತ್ತು. ನಿಯಮಗಳು ಬಹಳ ಕಠಿಣವಾಗಿದ್ದವು. ಇದರ ಅರಿವಿಲ್ಲದೆ ಶಿವಕುಮಾರ ಇದರಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ತಿರುಗೇಟು ನೀಡಿದರು.

ಪ್ರಚಾರದ ಸಮಯದಲ್ಲಿ ಕ್ಷೇತ್ರದ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಧಿಕ ಮತಗಳ ಅಂತರದಿಂದ ಗೆದ್ದುಬರುವ ವಿಶ್ವಾಸವಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತ ಎಂದು ಶೆಟ್ಟರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಸದೆ ಮಂಗಲಾ ಅಂಗಡಿ, ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ರಾಜ್ಯ ವಕ್ತಾರ ಎಂ ಬಿ ಜಿರಲಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next