ಹೊಸದಿಲ್ಲಿ: ಬೆಳಗಾವಿ ಗಡಿ ವಿವಾದ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿ. 14ರಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಸಭೆ ನಡೆಸಲಿದ್ದಾರೆ ಎಂದು ಎನ್‌ಸಿಪಿ ಸಂಸದರೊಬ್ಬರು ಹೇಳಿದ್ದಾರೆ.
ಮಹಾರಾಷ್ಟ್ರ ವಿಕಾಸ ಅಘಾಡಿಯ ಸಂಸದರ ನಿಯೋಗ ಶುಕ್ರವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಮಹಾ ಸಿಎಂ ಏಕನಾಥ ಶಿಂಧೆ ಅವರ ಜತೆ ಚರ್ಚಿಸುವುದಾಗಿ ಹೇಳಿದ್ದಾರೆ ಎಂದು ಎನ್‌ಸಿಪಿ ಸಂಸದ ಅಮೋಲ್ ತಿಳಿಸಿದ್ದಾರೆ.
ಈ ಮಧ್ಯೆ ಮಹಾರಾಷ್ಟ್ರ ಸಾರಿಗೆ ಶುಕ್ರವಾರದಿಂದ ಬೆಳಗಾವಿಗೆ ಬಸ್ ಸಂಚಾರ ಆರಂಭಿಸಿದೆ.
ಸದ್ಯ ಶಾಂತವಾಗಿರುವ ಬೆಳಗಾವಿ ಗಡಿ ವಿವಾದ ವನ್ನು ಮತ್ತೆ ಮಹಾರಾಷ್ಟ್ರ ಕೆದಕಿದೆ. ಶಿವಸೇನೆಯ ಶಿಂಧೆ ಬಣದ ಸಂಸದ ಧೈರ್ಯಶೀಲ ಮಾನೆ ಸಂಸತ್ತಿನಲ್ಲಿ ಇದನ್ನು ಪ್ರಸ್ತಾವಿಸಿದ್ದು, ಕರ್ನಾಟಕದಲ್ಲಿ ಮರಾಠಿ ಭಾಷಿಕರು ಭಯದಲ್ಲಿ ಬದುಕುತ್ತಿದ್ದಾರೆ ಎನ್ನುವ ಮೂಲಕ ಉದ್ಧಟತನ ಮೆರೆದಿದ್ದಾರೆ.
ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗಳಿಂದಾಗಿ ಮರಾಠಿ ಭಾಷಿಕರಲ್ಲಿ ಹೆದರಿಕೆ ಮೂಡಿದೆ. ಕರ್ನಾಟಕ ಪೊಲೀಸರು ಮತ್ತು ಕರ್ನಾಟಕ ರಕ್ಷಣ ವೇದಿಕೆಯು ಮರಾಠಿ ಭಾಷಿಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದೂ ದೂರಿದ್ದಾರೆ.