ಬೆಳಗಾವಿ: ಮಹಾರಾಷ್ಟ್ರದ ಅಂಬೋಲಿ ಅರಣ್ಯದಲ್ಲಿ ಬಾಂಬ್ ಸ್ಫೋಟ ಟ್ರಯಲ್ ನಡೆಸಲು ಶಂಕಿತ ಉಗ್ರರು ಬಳಸಿದ್ದ ಬಾಂಬ್ ತಯಾರಿಸುವ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳನ್ನು ಭಯೋತ್ಪಾದನಾ ನಿಗ್ರಹ ದಳ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಬಾಂಬ್ ತಯಾರಿಸಲು ಮಿನಿ ಪ್ರಯೋಗಶಾಲೆ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಎಟಿಎಸ್ ಬಂಧಿಸಿರುವ ಶಂಕಿತ ಉಗ್ರರಿಗೆ ಆರ್ಥಿಕ ಸಹಾಯ ನೀಡಿದ್ದ ರತ್ನಗಿರಿ ಜಿಲ್ಲೆಯ ಮೆಕ್ಯಾನಿಕಲ್ ಎಂಜಿನಿಯರ್ ಸಿಮಾಬ್ ನಸರುದ್ದಿನ್ ಖಾಜಿ ಸ್ವತಃ ಬಾಂಬ್ ತಯಾರಿಸುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಿ ಕೊಟ್ಟಿದ್ದ. ಪ್ರಯೋಗ ಶಾಲೆಯಲ್ಲಿದ್ದ ಎಲ್ಲ ವಸ್ತುಗಳನ್ನು ಸಿಮಾಬ್ ಖಾಜಿಯೇ ಖರೀದಿಸಿ ಪೂರೈಸಿದ್ದ ಎನ್ನಲಾಗಿದೆ.
ಅಂಬೋಲಿಯಲ್ಲಿ ಬಾಂಬ್ ಸ್ಫೋಟ ಟ್ರಯಲ್ ನಡೆಸಿದ್ದ ಶಂಕಿತ ಉಗ್ರರು ತಮ್ಮ ಮಾಹಿತಿ ಯಾರಿಗೂ ಗೊತ್ತಾಗದಿರಲಿ ಎಂದು ಹೋಟೆಲ್, ಲಾಡ್ಜ್ ಗಳಲ್ಲಿ ವಾಸ್ತವ್ಯ ಮಾಡುತ್ತಿರಲಿಲ್ಲ. ಟೆಂಟ್ ಗಳಲ್ಲಿಯೇ ರಾತ್ರಿ ಕಳೆಯುತ್ತಿದ್ದರು.
ನಿಪ್ಪಾಣಿ, ಸಂಕೇಶ್ವರದಲ್ಲಿಯೂ ಟೆಂಟ್ ಹಾಕಿಯೇ ವಾಸ್ತವ್ಯ ಮಾಡಿದ್ದರು ಎನ್ನಲಾಗುತ್ತಿದೆ. ಬಂಧಿತ ಶಂಕಿತ ಉಗ್ರರಾದ ಮಹ್ಮದ್ ಖಾನ್ ಹಾಗೂ ಮೊಹ್ಮದ್ ಸಾಕಿಯಿಂದ ಬಾಂಬ್ ತಯಾರಿಸುವ ಉಪಕರಣ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಮಿಕಲ್ ಪೌಡರ್, ಚಾರಕೋಲ್, ಥರ್ಮಾ ಮೀಟರ್, ಡ್ರಾಪರ್, ಸೋಲ್ಡರಿಂಗ್ ಗನ್, ಮಲ್ಟಿಮೀಟರ್, ಸಣ್ಣ ಬಲ್ಬಗಳು, ಬ್ಯಾಟರಿ, ಆಲಾರಾಮ್ ಕ್ಲಾಕ್, ದ್ವಿಚಕ್ರ ವಾಹನಗಳ ಕಳ್ಳತನಕ್ಕೆ ಬೇಕಾಗುವ ಕೆಲ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಥರ್ಮಾಮೀಟರ್, ಡ್ರಾಪರ್ ಸೇರಿ ಕೆಲ ಉಪಕರಣಗಳನ್ನು ಸಿಮಾಬ್ ಖಾಜಿ ಖರೀದಿಸಿ ಮೊಹ್ಮದ್ ಖಾನ್‌ಗೆ ನೀಡಿದ್ದ. ಈ ವಸ್ತುಗಳನ್ನು ಖಾಜಿ ಖರೀದಿಸಿರುವ ಸ್ಥಳದ ಪರಿಶೀಲನೆ ನಡೆದಿದೆ. ಮೊಹ್ಮದ್ ಖಾನ್ ಬಾಂಬ್ ತಯಾರಿಸಲು ವಸ್ತುಗಳನ್ನು ನಿಗದಿತ ಸ್ಥಳದಲ್ಲಿ ಬಚ್ಚಿಟ್ಟಿದ್ದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.