ಕಾಪು: ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಸುಮಾರು 480 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಗುರುವಾರ ಬೆಳಪು ಗ್ರಾಮ ಪಂಚಾಯತ್ ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಪು ಗ್ರಾಮದಲ್ಲಿ ಶೈಕ್ಷಣಿಕ, ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದ್ದು, ಈ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಳಪು ಗ್ರಾಮದ ಕೀರ್ತಿ ಪಸರಿಸುವಂತಾಗಿದೆ ಎಂದರು
ಬೆಳಪು ಗ್ರಾಮವು ಅಭಿವೃದ್ಧಿಯಲ್ಲಿ ರಾಜ್ಯ, ರಾಷ್ಟ್ರಕ್ಕೇ ಮಾದರಿಯಾಗಿದ್ದು, ಇದಕ್ಕೆ ಗ್ರಾಮಸ್ಥರು ನೀಡಿದ ಅಧಿಕಾರಿದ ಬಲ ಮತ್ತು ಸ್ಪೂರ್ತಿಯೇ ಮುಖ್ಯ ಕಾರಣವಾಗಿದೆ ಎಂದರು.
ಬೆಳಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಅತ್ಯ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ, ಸರಕಾರಿ ಪಾಲಿಟೆಕ್ನಿಕ್ ವಿದ್ಯಾಲಯ ಸಹಿತವಾಗಿ ಕೆಜಿ ಯಿಂದ ಪಿಜಿಯವರೆಗಿನ ಶಿಕ್ಷಣಕ್ಕೆ ಅವಕಾಶ ಮಾಡಿ ಕೊಡಲಾಗಿದ್ದು ಇದು ಶೈಕ್ಷಣಿಕ ಕೇಂದ್ರದ ಅಭಿವೃದ್ಧಿಗೆ ಪೂರಕವಾಗಿದೆ. 60 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಬೆಳಪು ಜಾರಂದಾಯ ಕೆರೆ ಅಭಿವೃದ್ಧಿ, 800 ಕುಟುಂಬಗಳಿಗೆ ನಿವೇಶನ ನೀಡಿಕೆ ಸಹಿತವಾಗಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಕಳೆದ ಮೂವತ್ತು ವರ್ಷಗಳಲ್ಲಿ ಗ್ರಾಮದಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಕೆ, ಮನೆಗೊಂದು ಮಗು – ಮಗುವಿಗೊಂದು ಗಿಡ, ಎಲ್ಲಾ ರಸ್ತೆಗಳ ಅಭಿವೃದ್ಧಿ, ಕ್ರೀಡಾಂಗಣ, ಗ್ರಾಮ ಸೌಧ ನಿರ್ಮಾಣ, ವಾಣಿಜ್ಯ ಕಟ್ಟಡ ನಿರ್ಮಾಣ, ಸಂತೆ ಮಾರುಕಟ್ಟೆ ನಿರ್ಮಾಣ, ರಿಕ್ಷಾ ತಂಗುದಾಣ, ಅಂಬೇಡ್ಕರ್ ಭವನ, ಕಿಂಡಿ ಅಣೆಕಟ್ಟುಗಳ ನಿರ್ಮಾಣ ಸಹಿತವಾಗಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಗ್ರಾಮದಲ್ಲಿ ಪೂರ್ಣಗೊಳಿಸಲಾಗಿದೆ ಎಂದರು.
ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಭಟ್, ಸದಸ್ಯರಾದ ಕರುಣಾಕರ ಶೆಟ್ಟಿ, ದಿನೇಶ್ ಪೂಜಾರಿ, ಶರತ್ ಕುಮಾರ್, ಸುರೇಶ್ ದೇವಾಡಿಗ, ಪೈಗಂ ಬಾನು, ನೂರ್ ಜಹಾನ್, ವಿಜಯಲಕ್ಷ್ಮಿ, ಉಷಾ, ಅನಿತಾ, ಪಿಡಿಒ ರಮೇಶ್ ಎಚ್.ಆರ್. ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.