Advertisement

Belagavi Lok Sabha constituency; ಮರಾಠಾ, ಲಿಂಗಾಯತರು ಕೈ ಹಿಡಿದವರಿಗೆ ಇಲ್ಲಿ ಗೆಲುವು

11:54 PM Mar 09, 2024 | Team Udayavani |

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರ ರಾಜಕೀಯವಾಗಿ ಸದಾ ಬಹಳ ದೊಡ್ಡ ಸುದ್ದಿ ಮಾಡುತ್ತ ಬಂದಿರುವ ಕ್ಷೇತ್ರ. ರಾಜ್ಯ ರಾಜಕೀಯದ ಮೇಲೆ ಪರಿಣಾಮ ಬೀರುವಂಥ ಪ್ರಭಾವಿ ರಾಜಕಾರಣಿಗಳ ತವರೂರಾಗಿರುವ ಬೆಳಗಾವಿಗೆ ಸರ್ಕಾರವನ್ನು ಉಳಿಸುವ ಮತ್ತು ಉರುಳಿಸುವ ಎರಡೂ ಶಕ್ತಿ ಇದೆ.

Advertisement

ಬೆಳಗಾವಿ ಲೋಕಸಭಾ ಕ್ಷೇತ್ರವು ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ, ಅರಭಾವಿ, ಗೋಕಾಕ, ಸವದತ್ತಿ, ರಾಮದುರ್ಗ ಮತ್ತು ಬೈಲಹೊಂಗಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿದೆ. ಈಗ ಕಾಂಗ್ರೆಸ್‌ ಐದು ಕ್ಷೇತ್ರಗಳಲ್ಲಿ ತನ್ನ ಶಾಸಕರನ್ನು ಹೊಂದಿದ್ದರೆ, ಬಿಜೆಪಿ ಮೂರು ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಆರು ಕ್ಷೇತ್ರಗಳನ್ನು ತನ್ನ ವಶದಲ್ಲಿಟ್ಟುಕೊಂಡಿದ್ದರೆ, ಕಾಂಗ್ರೆಸ್‌ ಬೈಲಹೊಂಗಲ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೇಲೆ ಹಿಡಿತ ಹೊಂದಿತ್ತು.

1957ರಿಂದ ಇದುವರೆಗೆ ಎರಡು ಉಪಚುನಾವಣೆ ಸೇರಿ ಒಟ್ಟು 18 ಸಾರ್ವತ್ರಿಕ ಚುನಾವಣೆಗಳನ್ನು ಕಂಡಿರುವ ಬೆಳಗಾವಿ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆ. ಆದರೆ ಈಗ ಕಾಲ ಬದಲಾಗಿದೆ. ಕಾಂಗ್ರೆಸ್‌ ಕೋಟೆ ಬಿಜೆಪಿ ವಶವಾಗಿದೆ. 1957ರಿಂದ 2019ರವರೆಗೆ ನಡೆದಿರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ 11 ಬಾರಿ, ಜನತಾದಳ ಒಂದು ಹಾಗೂ ಬಿಜೆಪಿ ಆರು ಬಾರಿ ಜಯ ಗಳಿಸಿವೆ. ಕಾಂಗ್ರೆಸ್‌ ಪಕ್ಷದ 11 ಗೆಲುವಿನಲ್ಲಿ ಜಗಜೀವನ ರಾಂ ಗುಂಪಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸೇರಿದೆ. 1971ರಲ್ಲಿ ನಡೆದ ಚುನಾವಣೆಯಲ್ಲಿ ಎ.ಕೆ.ಕೊಟ್ರಶೆಟ್ಟಿ ಈ ಪಕ್ಷದಿಂದ ಜಯ ಗಳಿಸಿದ್ದರು.

1991ರ ಚುನಾವಣೆ ನಂತರ ಬೆಳಗಾವಿ ಲೋಕಸಭಾ ಕ್ಷೇತ್ರದ ಚಿತ್ರ ಬದಲಾಯಿತು. 1980ರಿಂದ ಸತತ ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಎಸ್‌.ಬಿ.ಸಿದ್ನಾಳ ನಂತರ ತೆರೆಮರೆಗೆ ಸರಿದರು. ಕಾಂಗ್ರೆಸ್‌ ಪಕ್ಷದವರೇ ಮಾಡಿದ ಪಿತೂರಿಯಿಂದ ಈ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿ ಬದಲಾಯಿತು.

ಕಾಂಗ್ರೆಸ್‌ನಲ್ಲಿನ ಒಳಜಗಳದ ಲಾಭ ಪಡೆದ ಸಂಸದ ಸುರೇಶ ಅಂಗಡಿ 2004ರಿಂದ ಸತತ ನಾಲ್ಕು ಚುನಾವಣೆಯಲ್ಲಿ ಸುಲಭ ಜಯ ಪಡೆದು ಸಿದ್ನಾಳ ಅವರ ದಾಖಲೆ ಸರಿಗಟ್ಟಿದರು.ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಅವರ ಪತ್ನಿ ಮಂಗಲಾ ಅಂಗಡಿ ಈ ಕ್ಷೇತ್ರ ಬಿಜೆಪಿ ಹಿಡಿತ ತಪ್ಪಿಹೋಗದಂತೆ ಕಾಪಾಡಿಕೊಂಡರು.ಇದುವರೆಗೆ 14 ಬಾರಿ ಲಿಂಗಾಯತ ಸಮುದಾಯದ ಅಭ್ಯರ್ಥಿಯೇ ಆಯ್ಕೆಯಾಗಿರುವುದು ಗಮನಿಸಬೇಕಾದ ಅಂಶ.

Advertisement

ಜಾತಿ ಲೆಕ್ಕಾಚಾರ
ಒಟ್ಟು 18 ಲಕ್ಷ ಮತದಾರರ ಪೈಕಿ ಸುಮಾರು ಎಂಟು ಲಕ್ಷ ಮತದಾರರಿರುವ ಲಿಂಗಾಯತ ಸಮಾಜವೇ ನಿರ್ಣಾಯಕ. ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಮರಾಠಾ ಸಮಾಜ ಮತ್ತು ಲಿಂಗಾಯತ ಮತದಾರರು ಬಿಜೆಪಿ ಕೈಹಿಡಿದಿದ್ದರು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮಾಜ ಕಾಂಗ್ರೆಸ್‌ ಕಡೆ ಒಲವು ತೋರಿಸಿರುವುದು ಬಿಜೆಪಿಗೆ ಆತಂಕ ಉಂಟು ಮಾಡಿರುವದು ಸುಳ್ಳಲ್ಲ. ಲೋಕಸಭೆ ಚುನಾವಣೆಯೇ ಬೇರೆ. ವಿಧಾನಸಭೆ ಚುನಾವಣೆಯೇ ಬೇರೆ ಎಂಬ ಲೆಕ್ಕಾಚಾರದಲ್ಲಿರುವ ಬಿಜೆಪಿ ಲಿಂಗಾಯತರು ತಮ್ಮ ಪರ ನಿಲ್ಲಲಿದ್ದಾರೆ ಎಂಬ ಅಚಲ ವಿಶ್ವಾಸ ಹೊಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಲಿಂಗಾಯಿತ ಸಮಾಜ ತನ್ನ ಪರವಾಗಿ ನಿಲ್ಲಲಿದೆ ಎಂಬ ಬಲವಾದ ವಿಶ್ವಾಸ ಕಾಂಗ್ರೆಸ್‌ ನಾಯಕರಲ್ಲಿದೆ.

ಹಾಲಿ ಸಂಸದೆ:
ಮಂಗಲಾ ಸುರೇಶ ಅಂಗಡಿ (ಬಿಜೆಪಿ) 4,40,327.
ಸತೀಶ ಜಾರಕಿಹೊಳಿ (ಕಾಂಗ್ರೆಸ್‌) 4,35,087.
ಮತಗಳ ಅಂತರ: 5240.

2019ರ ಮತದಾರರ ಸಂಖ್ಯೆ
ಒಟ್ಟು ಮತದಾರರು: 18,13,538
ಪುರುಷರು: 9,11,025
ಮಹಿಳೆಯರು: 9,02,455
ಇತರೆ: 58

2024ರ ಮತದಾರರ ಸಂಖ್ಯೆ
ಒಟ್ಟು ಮತದಾರರು: 18,91, 409
ಪುರುಷರು: 9,42,854
ಮಹಿಳೆಯರು: 9,48472
ಇತರೆ: 83

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next