Advertisement

ಕಿತ್ತೂರು ಉತ್ಸವಕ್ಕೆ ಬರ್ತಾರೆ ಮುಖ್ಯಮಂತ್ರಿ

04:53 PM Oct 18, 2018 | |

ಬೆಳಗಾವಿ: ಕಿತ್ತೂರು ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಗಮಿಸಲಿದ್ದು, ಅ. 23ರಿಂದ 25ರವರೆಗೆ ಕಿತ್ತೂರು ಉತ್ಸವ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು.

Advertisement

ಕಿತ್ತೂರು ಉತ್ಸವಕ್ಕೆ ಸಂಬಂಧಿಸಿದಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ಅನಂತಕುಮಾರ್‌ ಹೆಗಡೆ, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಅನೇಕ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಹೇಳಿದರು.

ಉತ್ಸವದಲ್ಲಿ ಸ್ಥಳೀಯ ಹಾಗೂ ರಾಷ್ಟ್ರಮಟ್ಟದ ಕಲಾವಿದರಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹೆಲಿಟೂರಿಸಂ ಈ ಬಾರಿಯ ವಿಶೇಷ ಆಕರ್ಷಣೆಯಾಗಲಿದೆ. ಸ್ಥಳೀಯರ ಒತ್ತಾಯದ ಮೇರೆಗೆ ಪ್ರಥಮ ಬಾರಿಗೆ ಕೃಷಿ ಮೇಳವನ್ನೂ ಆಯೋಜಿಸಲಾಗಿದ್ದು, ಸಾವಯವ ಕೃಷಿ ಪದ್ಧತಿ ಬಗ್ಗೆ ಅರಿವು ಮೂಡಿಸಲಾಗುವುದು. ಜತೆಗೆ ವಿವಿಧ ಕ್ರೀಡೆ, ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪುತ್ಥಳಿ ಅನಾವರಣ: ಕಿತ್ತೂರು ಮಹಾದ್ವಾರದ ಬಳಿ ಸ್ಥಾಪಿಸಲಾಗಿರುವ ಸಂಗೊಳ್ಳಿ ರಾಯಣ್ಣ ಮತ್ತು ಅಮಟೂರು ಬಾಳಪ್ಪ ಪುತ್ಥಳಿಗಳನ್ನು ಉತ್ಸವದ ವೇಳೆ ಅನಾವರಣಗೊಳಿಸಲಾಗುವುದು ಎಂದು ಹೇಳಿದ ಅವರು, ಕಿತ್ತೂರು ಕೋಟೆ ಮತ್ತು ಇತರ ಸ್ಮಾರಕಗಳ ಅಭಿವೃದ್ಧಿಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ಯೋಜನೆ ರೂಪಿಸಲಾಗಿದೆ ಎಂದು ಡಾ| ಬೊಮ್ಮನಹಳ್ಳಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕಿತ್ತೂರು ಉತ್ಸವ-2018ರ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು. ಅಪರ ಜಿಲ್ಲಾಧಿಕಾರಿ ಡಾ| ಬೂದೆಪ್ಪ ಎಚ್‌.ಬಿ., ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಬೆಳಗಾವಿ ಉಪ ವಿಭಾಗಾಧಿಕಾರಿ ಡಾ| ಕವಿತಾ ಯೋಗಪ್ಪನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ಸೇರಿದಂತೆ ಇತರರು ಇದ್ದರು.

Advertisement

ಹೆಲಿ ಟೂರಿಸಂಗೆ 3 ಸಾವಿರ ರೂ.
ಹೆಲಿ ಟೂರಿಸಂ ವ್ಯವಸ್ಥೆಯನ್ನು ಈ ಸಲ ಹೊಸದಾಗಿ ಆರಂಭಿಸಲಾಗಿದ್ದು, ಹಂಪಿ ಉತ್ಸವದಂತೆ ಇಲ್ಲಿಯೂ ಸಾರ್ವಜನಿಕರು ಹೆಲಿಕಾಪ್ಟರ್‌ ಮೂಲಕ ಕಿತ್ತೂರು ಕೋಟೆ ಸೇರಿದಂತೆ ಪಟ್ಟಣವನ್ನು ಸುತ್ತಾಡಬಹುದಾಗಿದೆ. ಪ್ರತಿ ವ್ಯಕ್ತಿಗೆ 3 ಸಾವಿರ ರೂ. ದರ ನಿಗದಿ ಮಾಡಲಾಗಿದ್ದು, ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು. ಜತೆಗೆ ಕಿತ್ತೂರು ಕೋಟೆಯ ಗತವೈಭವ ಸಾರಲು ಆರಂಭಿಸಿರುವ ಧ್ವನಿ-ಬೆಳಕಿನ ವ್ಯವಸ್ಥೆ ಕಾರಣಾಂತರಗಳಿಂದ ಸ್ಥಗಿತಗೊಳಿಸಲಾಗಿತ್ತು. ಈಗಾಗಲೇ ಲೈಟ್‌ ಹಾಗೂ ಸೌಂಡ್‌ ಸಿಸ್ಟ್‌ಂ ಸಿದ್ಧಪಡಿಸಲಾಗಿದ್ದು, ಇನ್ನು ಮುಂದೆ ಪ್ರತಿ ಶನಿವಾರ ಹಾಗೂ ರವಿವಾರ ಧ್ವನಿ-ಬೆಳಕಿನ ಆನಂದವನ್ನು ಸವಿಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಎರಡು ಕಡೆ ಊಟದ ವ್ಯವಸ್ಥೆ
ಕಿತ್ತೂರು ಉತ್ಸವದಲ್ಲಿ ಈ ಬಾರಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಅಸ್ತವ್ಯಸ್ತ ಆಗಬಾರದು ಎಂಬ ಉದ್ದೇಶದಿಂದ ಎರಡು ಕಡೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವರ್ಷ ಕೇವಲ ಒಂದು ಕಡೆ ಮಾತ್ರ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಈ  ಬಾರಿ ಕಲ್ಮಠ ಹಾಗೂ ನಿಚ್ಚಣಕಿ ಮಠದ ಆವರಣದಲ್ಲಿ ಊಟದ ವ್ಯವಸ್ಥೆ ಇದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next