ಕುಂದಾನಗರಿ ಬೆಳಗಾವಿ ಕೇವಲ ಸಿಹಿ ತಿಂಡಿಗೆ ಮಾತ್ರ ಹೆಸರುವಾಸಿಯಾಗಿಲ್ಲ. ಬದಲಾಗಿ ಹಲವು ಪ್ರವಾಸಿ ತಾಣಗಳು, ಪ್ರಸಿದ್ಧ ದೇವಸ್ಥಾನಗಳು ಹಾಗೂ ಅಂದವಾದ ಪ್ರಕೃತಿಯ ಸೊಬಗನ್ನು ತನ್ನ ಮಡಿಲಿನಲ್ಲಿ ತುಂಬಿಕೊಂಡಿದೆ.
ದಿನದಿಂದ ದಿನಕ್ಕೆ ಆಘಾದವಾಗಿ ಬೆಳೆಯುತ್ತಿರುವ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಐತಿಹಾಸಿಕ ಕುರುಹುಗಳಿವೆ. ಪುರಾತನ ದೇವಾಲಯ, ಬಸಿದಿಗಳು ಕಾಣಸಿಗುತ್ತವೆ. ಅವುಗಳಲ್ಲಿ ಬೆಳಗಾವಿ ಹೃದಯ ಭಾಗದಲ್ಲಿರುವ ಕಮಲ ಬಸಿದಿ ಕೂಡ ಒಂದು.
ಒಂದು ವರ್ಷ ಬೆಳಗಾವಿಯಲ್ಲಿದ್ದ ನನಗೆ ಸ್ನೇಹಿತರ ಮೂಲಕ ಕಮಲ ಬಸದಿ ಮಾಹಿತಿ ಕಿವಿಗೆ ಬಿತ್ತು. ಈ ಬಸದಿ ಬಗ್ಗೆ ನನ್ನ ಸ್ನೇಹಿತರಾಡಿದ ಮಾತುಗಳು ನನ್ನಲ್ಲಿ ಕುತೂಹಲವನ್ನುಂಟು ಮಾಡಿದವು. ಮರುದಿನವೇ ಕಮಲ ಬಸದಿ ಅಂಗಳದಲ್ಲಿ ಹಾಜರಾಗಿದ್ದೆ. ನಿಜಕ್ಕೂ ಅದೊಂದು ಅದ್ಭುತ ಸ್ಮಾರಕ, ನನ್ನ ಕಣ್ಣುಗಳಿಗೆ ಹಬ್ಬವೋ ಹಬ್ಬ.
ಕಮಲ ಬಸದಿ ಹೆಸರು ಹೇಗೆ ಬಂತು ?
ಬೆಳಗಾವಿಯ ಐತಿಹಾಸಿಕ ಕೋಟೆ ಯಲ್ಲಿರುವ ಈ ಜೈನ ದೇವಾಲಯ 800 ವರ್ಷಗಳ ಹಿಂದಿನದು. ಚಾಲುಕ್ಯ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಬಸದಿಯನ್ನು ರಟ್ಟ ರಾಜವಂಶದ ನಾಲ್ಕನೆಯ ಕಾರ್ತವೀರ್ಯನ ಕಾಲದಲ್ಲಿ ಆತನ ಮಂತ್ರಿಯಾದ ಬಿಚಿರಾಜನು ಕಟ್ಟಿಸಿದನು.
22ನೇ ಜೈನ ತೀರ್ಥ೦ಕರನಾದ ಶ್ರೀ ನೇಮಿನಾಥನ ದೇವಾಲಯವಾದ ಈ ಬಸದಿಗೆ ‘ಕಮಲ ಬಸದಿ’ ಎ೦ಬ ಹೆಸರು ಬ೦ದಿದ್ದು ದೇವಸ್ಥಾನದ ರ೦ಗಮ೦ಟಪದ ಮೇಲ್ಛಾವಣಿಯಲ್ಲಿ ಕೆತ್ತಲ್ಪಟ್ಟ ಸು೦ದರ ಕಮಲದ ಹೂವಿನಿಂದ. ಏಕಶಿಲೆಯಲ್ಲಿ ಮೂಡಿ ಬಂದ ಈ ಶಿಲ್ಪ ನೋಡುಗರಿಗೆ ಅಚ್ಚರಿ ಮೂಡಿಸುತ್ತೆ. ಕಮಲ ಬಸದಿಯ ಕಂಬಗಳು ಕಪ್ಪು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು, ಅವುಗಳಲ್ಲಿ ನಮ್ಮ ಮುಖವನ್ನೂ ನೋಡಿಕೊಳ್ಳುವಷ್ಟು ನುಣುಪಾಗಿವೆ.
ಬಸದಿಯ ಪ್ರಾಕಾರದಿಂದ ಗರ್ಭಗುಡಿಯವರೆಗೆ ಒಟ್ಟು ನಾಲ್ಕು ಬಾಗಿಲುಗಳಿದ್ದು, ಪ್ರತಿ ಬಾಗಿಲಿನಲ್ಲಿ ಸೂಕ್ಷ್ಮವಾದ ಕೆತ್ತನೆ ಮಾಡಲಾಗಿದೆ. ಒಳಗಿನ ಕಂಬಗಳಲ್ಲಿ ಸೂಕ್ಷ್ಮ ಕಲೆಯ ಚಿತ್ತಾರಗಳಿವೆ. ಗರ್ಭ ಗುಡಿಯಲ್ಲಿ ನೆಲೆಸಿರುವ ಭಗವಾನ್ ನೇಮಿನಾಥನ ದಿವ್ಯವಾದ ಕಪ್ಪು ಶಿಲೆಯ ಮೂರ್ತಿ , ಬಸದಿ ಕಟ್ಟುವ ಮುಂಚೆ ಅಂದರೆ ಸುಮಾರು ಎರಡು ನೂರು ವರ್ಷಗಳ ಹಿಂದೆ ಕಾಡಿನಲ್ಲಿ ದೊರೆಯಿತು. ಬಸದಿ ನಿರ್ಮಾಣದ ನಂತರ ಮೂರ್ತಿ ಪ್ರತಿಷ್ಠಾಪಿಸಲಾಯಿತು ಎನ್ನುತ್ತದೆ ಇತಿಹಾಸ.
ತಲುಪುವುದು ಹೇಗೆ ?
ಕರ್ನಾಟಕದ ಎರಡನೇ ರಾಜಧಾನಿ ಎಂದೇ ಕರೆಯಿಸಿಕೊಳ್ಳುವ ಬೆಳಗಾವಿ ತಲುಪಲು ಕಷ್ಟಪಡಬೇಕಾಗಿಲ್ಲ. ರಾಜ್ಯದ ಪ್ರಮುಖ ನಗರಗಳಿಂದ ಬಸ್ , ರೈಲು ಸೌಲಭ್ಯ ಇದೆ. ಬೆಳಗಾವಿ ನಗರದಿಂದ 8 ಕಿ.ಮೀ ದೂರದಲ್ಲಿ ವಿಮಾನ ನಿಲ್ದಾಣ ಕೂಡ ಇದೆ. ಬಸ್, ರೈಲು ಹಾಗೂ ವಿಮಾನದ ಮೂಲಕವೂ ಪ್ರವಾಸಿಗರು ಇಲ್ಲಿಗೆ ಬರಬಹುದು.