Advertisement

ಕೆರೆಗಳಿಗೆ ಬೇಲಿ ಅಳವಡಿಸಲು ಕ್ರಮ ಕೈಗೊಳ್ಳಿ 

03:34 PM Nov 25, 2018 | Team Udayavani |

ಬೆಳಗಾವಿ: ಜಿಲ್ಲೆಯಲ್ಲಿ ಕೆರೆಗಳಲ್ಲಿ ಈಜಲು ಹೋದ ಬಾಲಕರು ಸಾವಿಗೀಡಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ ಸದಸ್ಯರು ಒತ್ತಾಯಿಸಿದರು. ಶನಿವಾರ ನಡೆದ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಆಶಾ ಐಹೊಳೆ ಜಿಲ್ಲೆಯಲ್ಲಿ ಸಂಭವಿಸಿದ ವಿವಿಧ ದುರ್ಘ‌ಟನೆಗಳಲ್ಲಿ ಸುಮಾರು 16 ಮಕ್ಕಳು ಕೆರೆಗಳಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸೂಕ್ತ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.

Advertisement

ಕೆರೆಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣವೇ ಎಲ್ಲ ಕೆರೆಗಳನ್ನು ಪರಿಶೀಲಿಸಿ ಅಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಸಾಧ್ಯವಾದಲ್ಲಿ ಅನುದಾನ ಲಭ್ಯತೆ ಅಧರಿಸಿ ಕೆರೆಗಳಿಗೆ ಬೇಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮಚಂದ್ರನ್‌ ಸೂಚನೆ ನೀಡಿದರು.

ಅನುದಾನ ಬಳಕೆ: ಬರ ನಿರ್ವಹಣೆಗಾಗಿ ಸರ್ಕಾರದಿಂದ ಬಿಡುಗಡೆಗೊಂಡಿರುವ 1 ಕೋಟಿ ರೂಪಾಯಿ ವಿವೇಚನಾ ನಿಧಿಯಲ್ಲಿ ಈಗ ಉಳಿದಿರುವ 18 ಲಕ್ಷ ರೂ.ಗಳನ್ನು ತಕ್ಷಣವೇ ಬಳಕೆ ಮಾಡಬೇಕಿದೆ. ಈ ಹಣವನ್ನು ತುರ್ತು ಅಗತ್ಯವಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಬಳಕೆ ಮಾಡಿಕೊಂಡು ಅದರ ಪ್ರಮಾಣ ಪತ್ರ ಸಲ್ಲಿಸಿದರೆ ಮತ್ತೆ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಬಹುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರನ್‌ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದಣ್ಣ ಮುದುಕಣ್ಣವರ 18 ಲಕ್ಷ ರೂ. ಎಲ್ಲ ಕ್ಷೇತ್ರಗಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಆಗ ಮಧ್ಯೆ ಪ್ರವೇಶಿಸಿದ ಅಧ್ಯಕ್ಷೆ ಆಶಾ ಐಹೊಳೆ ಬರಪೀಡಿತ ಎಂದು ಘೋಷಿಸಲಾಗಿರುವ ಮೂರು ತಾಲೂಕುಗಳ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಈ ಅನುದಾನ ಬಳಕೆ ಮಾಡಲಾಗುವುದು ಎಂದು ರೂಲಿಂಗ್‌ ನೀಡಿದರು.

ಕಬ್ಬು ಕಟಾವು ಯಂತ್ರ: ಕಬ್ಬು ಕಟಾವು ಯಂತ್ರ ಖರೀದಿಗೆ ಕಳೆದ ವರ್ಷ 25 ಯಂತ್ರಗಳಿಗೆ ಸಬ್ಸಿಡಿ ನೀಡಲಾಗಿತ್ತು. ಆಗ ಐದು ಜನರನ್ನು ಮೊದಲು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗಿತ್ತು. ಉಳಿದ ಫಲಾನುಭವಿಗಳನ್ನು ಜೇಷ್ಠತೆ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ಹೇಳಿದರು.  ಈ  ವರ್ಷ 47 ಜನರಿಗೆ ಸಬ್ಸಿಡಿ ನೀಡಲು ಸರಕಾರದಿಂದ ನಿರ್ದೇಶನ ಬಂದಿದೆ. ಇಲಾಖೆಯ ಮಾರ್ಗಸೂಚಿಯ ಪ್ರಕಾರ ಏಕಕಾಲಕ್ಕೆ ಆಯ್ಕೆ ಮಾಡಲು ಕ್ರಮ ಕೈಗೊಳ್ಳಲಾಗುವದು ಎಂದರು.

Advertisement

ಕಳಪೆ ಭತ್ತದ ಬೀಜ: ಖಾನಾಪುರ ತಾಲೂಕಿನಲ್ಲಿ ಎಂಸಿಎಚ್‌ ಕಂಪನಿಯು ಕಳಪೆ ಭತ್ತದ ಬೀಜಗಳನ್ನು ಪೂರೈಸಿದ್ದು, ಇದರಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿ ರೈತರಿಗೆ ಅಪಾರ ಹಾನಿ ಸಂಭವಿಸಿದೆ ಎಂದು ಸದಸ್ಯರು ಆರೋಪ ಮಾಡಿದರು. ಇದಕ್ಕೆ ಉತ್ತರಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದೆ. ಆದರೆ ವರದಿಯಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಸ್ಪಷ್ಟನೆ ಕೇಳಲಾಗಿದೆ.

ಅಂತಿಮ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಈ ಬೀಜ ಪೂರೈಸಿದ ಕಂಪನಿಗೂ ನೋಟಿಸ್‌ ನೀಡಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷ ಅರುಣ ಕಟಾಂಬಳೆ ಉಪಸ್ಥಿತರಿದ್ದರು. ಜಿಪಂ ಉಪಕಾರ್ಯದರ್ಶಿ ಎಸ್‌.ಬಿ.ಮುಳ್ಳಳ್ಳಿ ಸಭೆಯನ್ನು ನಿರ್ವಹಿಸಿದರು.

ಸಮುದಾಯ ಶೌಚಾಲಯ
ರಾಮದುರ್ಗ ತಾಲೂಕು ಸೇರಿದಂತೆ ಜಿಲ್ಲೆಯ ಅನೇಕ ಕಡೆ ಶೌಚಾಲಯಗಳ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ರಾಮದುರ್ಗ ತಾಲೂಕಿನಲ್ಲಿ ಶೌಚಾಲಯಗಳ ಸಮಸ್ಯೆ ಬಹಳ ಕೆಟ್ಟದಾಗಿದೆ. ಆದ್ದರಿಂದ ಸಮುದಾಯ ಶೌಚಾಲಯಗಳ ನಿರ್ಮಾಣದ ಕಡೆ ಹೆಚ್ಚು ಗಮನಹರಿಸಬೇಕು ಎಂದು ಸದಸ್ಯ ರಮೇಶ ದೇಶಪಾಂಡೆ ಹೇಳಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಗೋವಿಂದ ಕೊಪ್ಪದ ಎಲ್ಲ ಹಳ್ಳಿಗಳಲ್ಲಿ ಈ ಸಮಸ್ಯೆ ಇದೆ. ಸರಕಾರ ನೀಡುವ ಸಹಾಯಧನ ಬಹಳ ಕಡಿಮೆಯಾಗಿರುವುದರಿಂದ ಯಾರೂ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮುಂದಾಗುತ್ತಿಲ್ಲ. ಆದ್ದರಿಂದ ಸಮುದಾಯ ಶೌಚಾಲಯ ನಿರ್ಮಾಣ ಮಾಡಬೇಕು ಎಂದರು.

ಡಿಡಿಪಿಐಗೆ ನೋಟಿಸ್‌
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರು ಸೂಕ್ತ ಅನುಮತಿ ಪಡೆಯದೇ ಬೇರೊಬ್ಬರಿಗೆ ಪ್ರಭಾರ ಅದಿಕಾರ ವಹಿಸಿ ರಜೆ ಮೇಲೆ ತೆರಳಿದ್ದು ಅವರಿಗೆ ಕಾರಣಕೇಳಿ ನೋಟಿಸ್‌ ನೀಡಲಾಗಿದೆ. ರಜೆಯಿಂದ ಹಿಂದಿರುಗಿದ ಬಳಿಕ ನೋಟಿಸ್‌ಗೆ ಅವರು ನೀಡಿರುವ ಉತ್ತರ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next