ಬೆಳಗಾವಿ: ಜಿಲ್ಲೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಖಚಿತವಾಗಿದ್ದು, ಹಾಲಿ ಅಧ್ಯಕ್ಷ ರಮೇಶ ಕತ್ತಿ ಹಾಗೂ ಉಪಾಧ್ಯಕ್ಷ ಸುಭಾಷ ಢವಳೇಶ್ವರ ಮಾತ್ರ ನಾಮಪತ್ರ ಸಲ್ಲಿಸಿದ್ದು, ಇವರೇ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರದಿಂದ ಸಭೆ ನಡೆಸುತ್ತಿದ್ದ ಬಿಜೆಪಿ ನಾಯಕರು, ನಿರ್ದೇಶಕರ ಅಭಿಪ್ರಾಯ ಪಡೆದು ಶನಿವಾರ ಬೆಳಗ್ಗೆ ಒಮ್ಮತದ ಅಭ್ಯರ್ಥಿಗೆ ಹಸಿರು ನಿಶಾನೆ ತೋರಿದ್ದು, ಈ ಬಗ್ಗೆ ಹೆಸರು ಬಹಿರಂಗವಾಗಿ ಘೋಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಹಾಲಿ ಅಧ್ಯಕ್ಷ ರಮೇಶ ಕತ್ತಿ ಹಾಗೂ ಉಪಾಧ್ಯಕ್ಷ ಸುಭಾಷ ಢವಳೇಶ್ವರ ಅವರನ್ನೇ ಮುಂದುವರಿಸುತ್ತಿದ್ದು, ಜಿಲ್ಲೆಯ ಪಕ್ಷದ ಎಲ್ಲ ನಾಯಕರು ಒಂದಾಗಿ ಈ ನಿರ್ಧಾರ ಮಾಡಿದ್ದೇವೆ. ವರಿಷ್ಠರ ಸೂಚನೆಯಂತೆ 14 ಹಾಲಿ ನಿರ್ದೇಶಕರನ್ನು ಮುಂದುವರಿಸುವಂತೆಯೂ ಹೇಳಿದ್ದು, ಜತೆಗೆ ಅವಿರೋಧ ಆಯ್ಕೆ ಮಾಡುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಇದನ್ನೂ ಓದಿ:ಸಂತ್ಯಾಗ ನಿಂತ ಸೈಕಲ್ ಕಬೀರ ಡಾ| ಐರಸಂಗ
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಗೊಂದಲಗಳು ಅಥವಾ ಭಿನ್ನಾಭಿಪ್ರಾಯ ನಮ್ಮಲ್ಲಿ ಇಲ್ಲ. ಎಲ್ಲವನ್ನೂ ಬದಿಗಿಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಎಲ್ಲರಿಗೂ ಅವಕಾಶವಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಬ್ಯಾಂಕಿನ ನೌಕರರು, ರೈತರು ಹಾಗೂ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೋಗುವಂತೆ ತಿಳಿಸಿದ್ದೇವೆ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ಉಮೇಶ ಕತ್ತಿ, ಮಹಾಂತೇಶ ದೊಡ್ಡಗೌಡರ, ನಿರ್ದೇಶಕರು ಇದ್ದರು.