Advertisement

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

03:21 AM Dec 27, 2024 | |

ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ಪರಂಪರೆಯನ್ನು ಉಳಿಸಿ ಮುಂದುವರಿಸಿಕೊಂಡು ಹೋಗಲು ನಾವೆಲ್ಲ ಮತ್ತೊಮ್ಮೆ ಬದ್ಧರಾಗಬೇಕಿದ್ದು, ಗಾಂಧಿ ವಿರೋಧಿ ಶಕ್ತಿಗಳನ್ನು ಪ್ರತಿರೋಧಿಸುವ ನಿಟ್ಟಿನಲ್ಲಿ ನಾವೆಲ್ಲರೂ ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ನಿರ್ಣಯ ಕೈಗೊಳ್ಳಬೇಕಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಕರೆ ನೀಡಿದರು.

Advertisement

ಬೆಳಗಾವಿಯ ಸುವರ್ಣಸೌಧದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ನ ಮಹಾಧಿವೇಶನದ ಹಿನ್ನೆಲೆಯಲ್ಲಿ ಸಂದೇಶ ಕಳುಹಿಸಿರುವ ಅವರು, ಈ ಐತಿಹಾಸಿಕ ಸಮಾರಂಭದಲ್ಲಿ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದೇ ಸ್ಥಳದಲ್ಲಿ ನೂರು ವರ್ಷಗಳ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 39ನೇ ಅಧಿವೇಶನ ನಡೆದಿತ್ತು. ಮಹಾತ್ಮ ಗಾಂಧೀಜಿ ಅವರು ಅಧ್ಯಕ್ಷತೆ ವಹಿಸುವ ಮೂಲಕ ಪಕ್ಷ ಹಾಗೂ ಸ್ವತಂತ್ರ ಚಳವಳಿಯ ದಿಕ್ಕನ್ನು ಬದಲಿಸಿದರು. ನಮ್ಮ ದೇಶದ ಚರಿತ್ರೆಯಲ್ಲೇ ಇದು ಪರಿವರ್ತನೆಯ ಮೈಲಿಗಲ್ಲಾಗಿದೆ ಎಂದಿದ್ದಾರೆ.

ಗಾಂಧಿ ಪರಂಪರೆಗೆ ಬೆದರಿಕೆ
ಮಹಾತ್ಮ ಗಾಂಧೀಜಿ ಅವರು ಅಂದಿನ ಪೀಳಿಗೆಯ ನಮ್ಮ ನಾಯಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರು ನಮ್ಮೆಲ್ಲರ ಮೂಲಭೂತ ಪ್ರೇರಣಾಶಕ್ತಿ. ನಾವಿಂದು ಮಹಾತ್ಮ ಗಾಂಧೀಜಿ ಅವರ ಪರಂಪರೆಯನ್ನು ಉಳಿಸಿಕೊಳ್ಳುವ, ಸಂರಕ್ಷಿಸಿ ಮುಂದುವರಿಸಿಕೊಂಡು ಹೋಗಲು ಮತ್ತೂಮ್ಮೆ ಬದ್ಧರಾಗಬೇಕಿದೆ ಎಂದು ಕರೆ ನೀಡಿದ್ದಾರೆ.

ದಿಲ್ಲಿಯಲ್ಲಿ ಯಾರು ಅಧಿಕಾರದಲ್ಲಿದ್ದಾರೋ ಅವರಿಂದ ಗಾಂಧಿ ಪರಂಪರೆಗೆ ಬೆದರಿಕೆ ಇದೆ. ಅಲ್ಲದೆ, ಅವರ ಸಿದ್ಧಾಂತ ಹಾಗೂ ಅವರು ಪೋಷಣೆ ಮಾಡುತ್ತಿರುವ ಸಂಸ್ಥೆಗಳಿಂದಲೂ ಬೆದರಿಕೆ ಇದೆ. ಈ ಸಂಸ್ಥೆಗಳು ಎಂದಿಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಬದಲಿಗೆ ಮಹಾತ್ಮ ಗಾಂಧಿಯನ್ನು ಕಟುವಾಗಿ ವಿರೋಧಿಸಿದ್ದಾರೆ. ಅವರನ್ನು ಕೊಲ್ಲುವ ಹಂತಕ್ಕೆ ಒಯ್ಯಬಲ್ಲ ವೈಷಮ್ಯದ ವಾತಾವರಣ ಸೃಷ್ಟಿಸಿದರಲ್ಲದೆ, ಗಾಂಧಿ ಕೊಂದವರನ್ನು ವೈಭವೀಕರಿಸಲಾಗುತ್ತಿದೆ.

ಗಾಂಧಿ ಸಂಸ್ಥೆಗಳಿಗೆ ದೌರ್ಜನ್ಯ
ದೇಶದಲ್ಲಿರುವ ಗಾಂಧಿ ಸಂಸ್ಥೆಗಳು ಇಂದು ದೌರ್ಜನ್ಯಕ್ಕೊಳಗಾಗುತ್ತಿವೆ. ಇಂತಹ ಶಕ್ತಿಗಳನ್ನು ಪ್ರತಿರೋಧಿಸುವ ನಿಟ್ಟಿನಲ್ಲಿ ನಮ್ಮ ನಿರ್ಣಯವನ್ನು ಬಲಗೊಳಿಸುವ ಹಾಗೂ ರಾಜಿಯಾಗದ ನಿಲುವ ತಳೆಯುವ ಪವಿತ್ರ ಕಾರ್ಯವನ್ನು ನಾವೆಲ್ಲರೂ ಮಾಡಬೇಕಿದೆ. ನಾವೆಲ್ಲರೂ ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ನಿರ್ದಿಷ್ಟ ಉದ್ದೇಶ ಮತ್ತು ಸಮರೋಪಾದಿಯಲ್ಲಿ ಸವಾಲುಗಳನ್ನು ಎದುರಿಸುವ ನಿರ್ಣಯಗಳನ್ನು ಈ ಸಭೆಯಲ್ಲಿ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next